ಮಂಗಳೂರು: ಬಾಲ್ಯ ವಿವಾಹ ನಿಷೇಧ ಅಭಿಯಾನಕ್ಕೆ ಚಾಲನೆ

 ಮಂಗಳೂರು: ಬಾಲ್ಯ ವಿವಾಹ ನಿಷೇಧ ಅಭಿಯಾನಕ್ಕೆ ಚಾಲನೆ
Share this post

ಮಂಗಳೂರು,ಮಾ.06, 2022: ಬಾಲ್ಯ ವಿವಾಹ ನಿಷೇಧ ಹಾಗೂ ಅದರ ಕಾಯ್ದೆಯ ಬಗ್ಗೆ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಲು ಎಲ್‌ಇಡಿ ವಾಹನದ ಮೂಲಕ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಹೇಳಿದರು.

ಅವರು ಮಾ.6ರ ಭಾನುವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಾಲ್ಯ ವಿವಾಹ ನಿಷೇಧ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಾಲ್ಯ ವಿವಾಹದ ದುಷ್ಪರಿಣಾಮಗಳು, ಅದಕ್ಕಾಗಿ ರೂಪಿಸಲಾದ ಕಾಯ್ದೆಗಳ ಬಗ್ಗೆ ಎಲ್‌ಇಡಿ ವಾಹನ್ ಮೂಲಕ ಹಮ್ಮಿಕೊಳ್ಳಲಾದ ಅಭಿಯಾನದ ಮೂಲಕ ಅರಿವು ಮೂಡಿಸಲಾಗುವುದು, ಅದಕ್ಕಾಗಿ ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ, ಬಾಲ್ಯ ವಿವಾಹದ ದುಷ್ಪರಿಣಾಮ ನಾನಾ ರೀತಿಯಲ್ಲಿ ಬೀರುತ್ತದೆ, ಅದಕ್ಕೆ ಸರ್ಕಾರವು ಈ ಕಾಯ್ದೆಯನ್ನು ಜಾರಿ ಮಾಡಿದೆ, 2021ರಲ್ಲಿ ಲೋಕಸಭೆಯಲ್ಲಿ ಈ ಕಾಯ್ದೆಯನ್ನು ಮತ್ತಷ್ಟು ಗಟ್ಟಿ ಮಾಡಲಾಗಿದೆ, ಮಕ್ಕಳ ರಕ್ಷಣೆಗಾಗಿ ಈ ಕಾಯ್ದೆಯ ಜಾರಿ ಅಗತ್ಯ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಅವರು ಮಾತನಾಡಿ, ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಜಾಗೃತಿ ಮೂಡಿಸಲು 9 ದಿನಗಳ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಬಾಲ್ಯ ವಿವಾಹದ ನಿಷೇಧ ಕಾಯ್ದೆ ಜಾರಿಗೊಂಡು ಹಲವು ವರ್ಷಗಳಾಗಿವೆ, ಅದರ ಪರಿಣಾಮಕಾರಿ ಅನುಷ್ಠಾನವಾಗಬೇಕು, ಕಾಯ್ದೆ ಹೊರತಾಗಿ ಜಾಗೃತಿಯೂ ಅತಿ ಅಗತ್ಯ, ಅದಕ್ಕೂ ಮಿಗಿಲಾಗಿ ಪ್ರಜ್ಞಾವಂತಿಕೆ ಮೂಡಬೇಕು, ಪ್ರತಿಯೊಬ್ಬ ವ್ಯಕ್ತಿಯೂ ಪ್ರಜ್ಞಾವಂತರಾದಾಗ ಮಾತ್ರ ಈ ಸಾಮಾಜಿಕ ಪಿಡುಗಡನ್ನು ಹೋಗಲಾಡಿಸಲು ಸಾಧ್ಯ ಎಂದರು.

ಶಿಕ್ಷಣವೇ ಈ ಪಿಡುಗಿಗೆ ಮದ್ದಾಗಿದ್ದು, ಸೂಕ್ತ ಸಮಯದಲ್ಲಿ ವಿದ್ಯಾಭ್ಯಾಸ ನೀಡುವ ಮೂಲಕ ಬಾಲ್ಯವಿವಾಹದ ಪಿಡುಗು ಹೋಗಲಾಡಿಸಲು ಸಾಧ್ಯ, ಬಾಲ್ಯವಿವಾಹವಾದಲ್ಲೀ ಹೆಣ್ಣು ಮಕ್ಕಳ ವೈಯ್ಯಕ್ತಿಕ ಬದುಕನ್ನೇ ಕಿತ್ತುಕೊಂಡAತೆ ಆಗುತ್ತದೆ, ಬಾಲ್ಯವಿವಾಹ ಮರುಕಳಿಸುವಲ್ಲೀ ಜಾಗೃತಿಯ ಕೊರತೆ ಎದ್ದುಕಾಣುತ್ತದೆ, ಕಳೆದ ವರ್ಷ ಜಿಲ್ಲೆಯಲ್ಲಿ ಒಂದು ಪ್ರಕರಣ ದಾಖಲಾಗಿತ್ತು, ಅದರ ನಿರ್ಮೂಲನೆಗೆ ಶಿಕ್ಷಣವೇ ಏಕೈಕ ಮದ್ದು, ಜಿಲೆಯಾದ್ಯಂತ ಈ ವಾಹನ ಚಲಿಸಲಿದ್ದು, ಜಾಗೃತಿ ಮೂಡಿಸಲಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಅವರು ಮಾತನಾಡಿ, ಸಾಮಾಜಿಕ ಮಾಧ್ಯಮಗಳು ಉತ್ತುಂಗ ಸ್ಥಿತಿಯಲ್ಲಿರುವ ಇಂತಹ ಕಾಲಘಟ್ಟದಲ್ಲೂ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವ ಬಾಲ್ಯ ವಿವಾಹದ ಕುರಿತು ಜಗೃತಿ ಮೂಡಿಸುವ ಅಗತ್ಯವಿದೆ ಎಂದರೆ ಅದು ಸಮಾಜದಲ್ಲಿ ಅತಿ ದೊಡ್ಡ ಪಿಡುಗು ಎಂದರು.

ಸೃಷ್ಟಿಯಲ್ಲಿ ಭೂಮಿಯನ್ನು ಹೊರತು ಪಡಿಸಿದರೆ ಹೆಣ್ಣಿಗೆ ಮಾತ್ರ ಪರ್ನಸೃಷ್ಟಿ ಸಾಧ್ಯ, ಅಂತಹ ಹೆಣ್ಣಿನ ಹಕ್ಕುಗಳನ್ನು ರಕ್ಷಿಸುವ ದೊಡ್ಡ ಜವಾಬ್ದಾರಿ ಸಮಾಜದ ಮೇಲಿದೆ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ತಿಳಿಸಬೇಕು, ಇಂದು ಚಾಲನೆ ನೀಡಲಾದ ವಾಹನ ಜಿಲ್ಲೆಯ 52 ಕಡೆ ಸಂಚರಿಸಲಿದೆ, ಐಇಸಿ ಚಟುವಟಿಕೆಗಳ ಮೂಲಕ ಅರಿವು ಮೂಡಿಸಲಿದೆ ಎಂದರು.

ಬಾಲ್ಯ ವಿವಾಹವಾಗದಂತೆ ಜಾಗೃತಿ ವಹಿಸುವುದು ಪ್ರತಿಯೊಂದು
ಗ್ರಾಮ ಪಂಚಾಯತ್, ಕಂದಾಯ, ಆರೋಗ್ಯ ಇಲಾಖೆ ಸರ್ಕಾರದ ಪ್ರತಿಯೊಂದು ಇಲಾಖೆ ಹಾಗೂ ಪ್ರತಿಯೊಬ್ಬ ಸರ್ಕಾರಿ ನೌಕರರ, ಸಾಮಾಜಿಕ ಕಾರ್ಯಕರ್ತರ ಹಾಗೂ ಸಮಾಜದ ಪ್ರತಿಯೊಬ್ಬ ನಾಗರೀಕರ ಕರ್ತವ್ಯ, ಅದು ಪರಿಣಾಮಕಾರಿಯಾಗಬೇಕು,
ಬಾಲ್ಯ ವಿವಾಹ ಅಪರಾಧ, ಅದಕ್ಕೆ ಸಹಾಯ ಮಾಡುವುದು ಅಪರಾಧ, ಅದರ ಪ್ರಯತ್ನವೂ ಅಪರಾಧ, ಅದು ಕಾನೂನಿನ ಉಲ್ಲಂಘನೆ, ಅದಕ್ಕೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗುವುದು ಎಂಬ ಮಾಹಿತಿ ಪ್ರತಿಯೊಬ್ಬರಿಗೂ ತಲುಪಬೇಕು, ಜಿಲ್ಲೆಯ ಪ್ರತಿಯೊಂದು ಶಾಲೆಯ ಹಣ್ಣು ಮಕ್ಕಳಿಗೂ ಮಹಿಳಾ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕು, ಪ್ರತಿಯೊಂದು ಶಾಲೆಯ ಮುಖ್ಯೋಪಧ್ಯಾಯರೂ ಕೂಡ ಮಕ್ಕಳ ರಕ್ಷಣಾಧಿಕಾರಿಯಾಗಿ ಕೆಲಸ ಮಾಡಬೇಕು, ಹೆಣ್ಣು ಮಕ್ಕಳು ಶಾಲೆಗೆ ಗೈರಾದರೆ ಅದಕ್ಕೆ ನೈಜಕಾರಣಗಳ ಪತ್ತೆ ಮಾಡಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯರಾದ ಬಿ.ಎಂ. ಫಾರೂಕ್ ಮಾತನಾಡಿದರು.

ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪಾಪಬೋವಿ ವೇದಿಕೆಯಲ್ಲಿದ್ದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಸಿಡಿಪಿಒಗಳು, ವಿವಿಧ ಶಾಲೆಗಳ ಮಕ್ಕಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಯವರು ಪ್ರತಿಜ್ಞಾ ವಿಧಿ ಬೋಧಿಸಿದರು. ಬಾಲ್ಯವಿವಾಹ ನಿಷೇಧ ಸಹಿ ಸಂಗ್ರಹ ಅಭಿಯಾನಕ್ಕೆ ನೆರೆದ ಗಣ್ಯರು ಸಹಿ ಮಾಡಿದರು.

ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳ ಕಚೇರಿಯಿಂದ ಜಾಥಾದ ಮೂಲಕ ತೆರಳಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಿಡಿಯೋ ಆನ್‍ವಿಲ್ಸ್ ವಾಹನದ ಮುಖಾಂತರ ಬಾಲ್ಯವಿವಾಹ ನಿಷೇಧ ಅಭಿಯಾನ ಮೂಡಿಸಲಾಗುತ್ತಿದೆ. ಈ ಅಭಿಯಾನವು ಜಿಲ್ಲೆಯ 19 ಹೋಬಳಿಗಳಲ್ಲಿ 45 ಹಳ್ಳಿಗಳಲ್ಲಿ 9 ದಿನಗಳ ಕಾಲ ಸಂಚರಿಸಿ ಅರಿವು ಮೂಡಿಸಲಿದೆ.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!