ಉತ್ತರ ಕನ್ನಡ ಜಿಲ್ಲೆಯ ಪ್ರತಿ ಮನೆಯಲ್ಲೂ ವಿದ್ಯುತ್ ಕಲ್ಪಿಸುವ ಕಾರ್ಯವಾಗಬೇಕು: ಶ್ರೀನಿವಾಸ ಪೂಜಾರಿ
ಕಾರವಾರ ಫೆ. 11, 2022: ಕಟ್ಟಕಡೆಯ ವ್ಯಕ್ತಿಗೂ ಕೂಡ ವಿದ್ಯುತ್ ಸೌಲಭ್ಯ ದೊರೆಯಬೇಕೆಂಬ ಉದ್ದೇಶದಿಂದ ಬೆಳಕು ಯೋಜನೆಯನ್ನು ಹೊಸದಾಗಿ ಜಾರಿಗೆ ತರಲಾಗಿದ್ದು ಜಿಲ್ಲೆಯಲ್ಲಿ ಪ್ರತಿ ಮನೆಯಲ್ಲೂ ಕೂಡ ವಿದ್ಯುತ್ ಕಲ್ಪಿಸುವ ಕಾರ್ಯವಾಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ಪಂಚಾಯತ್ನ ಕೆಡಿಪಿ ಸಭೆಯಲ್ಲಿ ವಿವಿದ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ, ಮಾತನಾಡಿದ ಅವರು ಹೆಸ್ಕಾಮ್ ಅಧಿಕಾರಿಗಳು ಮುಂದಿನ ಸಭೆಯೊಳಗಾಗಿ ಜಿಲ್ಲೆಯಲ್ಲಿ ವಿದ್ಯುತ್ ಸಂಪರ್ಕವಿಲ್ಲದ ಮನೆಯೇ ಇಲ್ಲ ಎನ್ನುವಂತಹ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಜಿಲ್ಲೆಯಲ್ಲಿ ಬೆಳಕು ಯೋಜನೆಯಲ್ಲಿ ಎಷ್ಟು ಬೇಡಿಕೆಯಿದೆ ಎಂಬುದನ್ನು ಸರ್ವೇ ಮಾಡಿ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಜಿಲ್ಲೆಯಲ್ಲಿ ಯಾವುದೇ ರೀತಿಯ ವಿದ್ಯುತ್ ಸಮಸ್ಯೆಗಳಿದ್ದರೂ ಕೂಡ ಹೆಸ್ಕಾಂ ರವರೇ ಜವಾಬ್ದಾರರಾಗಿರುತ್ತಿರಿ. ಗೋಟೆಗಾಳಿ ಗ್ರಾಮದ ಬಿಸಿಎಮ್ ಹಾಸ್ಟೆಲ್ದಲ್ಲಿ ವಿದ್ಯುತ್ ಸಂಪರ್ಕವಿಲ್ಲವೆಂಬ ದೂರು ಇದ್ದು ಈ ಕುರಿತು ಹಿಂದುಳಿದ ವರ್ಗ ಇಲಾಖೆ ಹಾಗೂ ಹೆಸ್ಕಾಮ್ ಅಧಿಕಾರಿಗಳು ಪರಿಶೀಲನೆ ನಡೆಸಬೇಕೆಂದರು.
ಹಣ್ಣು ಹಂಪಲು ಪದಾರ್ಥಗಳಿಗೆ ರಾಸಾಯನಿಕ ಬಳಸಿ ಬಣ್ಣ ಬರುವಂತೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಸಂಬಂಧ ಪಟ್ಟ ಇಲಾಖೆ ಕ್ರಮಕೈಗೊಳ್ಳಬೇಕು. ಜಿಲ್ಲೆಯಲ್ಲಿ ನೀರಾ ಉತ್ಪಾದಿಸಲು ತೋಟಗಾರಿಕೆ ಇಲಾಖೆ ಅಧಿಕಾರಿ ಅಬಕಾರಿ ಇಲಾಖೆಯಿಂದ ಪರವಾನಿಗೆ ಬೇಕೆಂದು ಹೇಳುತ್ತಿರುವದರಿಂದ ಕಾರಣಗಳನ್ನು ಹೇಳದೇ ಒಂದು ವಾರದೊಳಗೆ ಪರವಾನಿಗೆ ನೀಡುವ ಕೆಲಸವನ್ನು ಅಬಕಾರಿ ಇಲಾಖೆ ಮಾಡಬೇಕೆಂದರು.
ಇ- ಸ್ವತ್ತು ಸಮಸ್ಯೆ ಕೆಲವು ತಾಲೂಕುಗಳಲ್ಲಿ ಬಗೆಹರಿದಿರುವಂತಹ ವಾತಾವರಣ ಕಂಡು ಬಂದರೆ ಕುಮಟಾ ತಾಲೂಕದಲ್ಲಿ ಇನ್ನೂ ಸಮಸ್ಯೆ ನಿವಾರಣೆ ಆಗದೇ ಜೀವಂತವಾಗಿದೆ, ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ಜನರು ಹೇಳುತ್ತಿದ್ದಾರೆ ಎಂದು ಶಾಸಕ ದಿನಕರ್ ಶೆಟ್ಟಿ ದೂರಿದಾಗ, ಒಂದು ರೂಪಾಯಿ ತೆಗೆದುಕೊಂಡಂತಹ ಭ್ರಷ್ಟಾಚಾರದ ದೂರು ಕೇಳಿ ಬಂದಲ್ಲಿ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು. ಇ- ಸ್ವತ್ತಿನಿಂದ ಜನರಿಗೆ ಸಮಸ್ಯೆಯಾಗಬಾರದು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಒಂದೇ ರೀತಿ ನಿಯಮಗಳಡಿ ಇ-ಸ್ವತ್ತು ಪ್ರಕ್ರಿಯೆ ಸುಗಮವಾಗಿ ನಡೆಯಬೇಕು ಎಂದರು.
ಜಿಲ್ಲೆಯ ಜನರಿಗೆ ಮರಳು ಸಿಗಬೇಕು ಈ ನಿಟ್ಟಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಮುಂದಿನ ಮೂರು ದಿನದಲ್ಲೇ ಕ್ರಮಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಕರ್ತವ್ಯಲೋಪದ ಮೇಲೆ ಅಮಾನತುಗೊಳಿಸಲಾಗುವದೆಂದು ಸಚಿವರು ಎಚ್ಚರಿಕೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರ ಮಾತನಾಡಿ, ಜಿಲ್ಲೆಗೆ ಸೂಪರ ಸ್ಪೆಶಲಿಸ್ಟ್ ಬ್ರಾಂಚ್ಗಳ ಅವಶ್ಯಕತೆ ಇರುತ್ತದೆ ಹೃದಯ ಸಂಬಂಧಿ ಕಾಯಿಲೆ ಹೊಂದಿರುವವರು ಹುಬ್ಬಳ್ಳಿ ಅಥವಾ ಮಂಗಳೂರು ಹೋಗುವಷ್ಟರಲ್ಲಿ ವಿಳಂಬವಾಗಿ ಜೀವ ಹಾನಿ ಆಗುವುದರಿಂದ ಆದ್ಯತೆ ಮೇರೆಗೆ ಆರೋಗ್ಯ ಇಲಾಖೆ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಬೇಕೆಂದರು.
ಕಾರ್ಮಿಕ ಖಾತೆ ಸಚಿವ ಶಿವರಾಮ್ ಹೆಬ್ಬಾರ ಮಾತನಾಡಿ ಗಂಗಾ ಕಲ್ಯಾಣ ಯೋಜನೆಯಲ್ಲಿ ಬೋರ್ವೆಲ್ಗಳನ್ನು ತೆಗೆಯುವ ಹಾಗೂ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವ ಗುತ್ತಿಗೆಗಳನ್ನು ಬೇರೆಬೇರೆಯವರಿಗೆ ನೀಡುವುದರಿಂದ ಸಮಸ್ಯೆಯಾಗುತ್ತಿರುವುದರಿಂದ ಒಂದೇ ಗುತ್ತಿಗೆದಾರರಿಗೆ ನೀಡಬೇಕೆಂದಾಗ ಸಚಿವ ಪೂಜಾರಿ ಅವರು ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಫಲಾನುಭವಿಗಳ ಖಾತೆಗೆ ನೇರ ಹಣ ಸಂದಾಯ ಮಾಡುವ ಮತ್ತು ಒಂದೇ ಎಜೆನ್ಸಿಯವರಿಗೆ ಟೆಂಡರ್ ನೀಡಬೇಕೆಂಬ ಯೋಚನೆ ಇದ್ದು, ಈ ಸಂಬಂದ ಸಾಧಕ ಬಾಧಕ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಾಸಕಿ ರೂಪಾಲಿ ನಾಯ್ಕ, ಎಮ್ ಎಲ್. ಸಿ ಗಳಾದ ಶಾಂತಾರಮ್ ಸಿದ್ದಿ, ಗಣಪತಿ ಉಳ್ವೇಕರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯತ್ ಸಿ ಇ ಒ ಪ್ರಿಯಾಂಗಾ ಎಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪೆನ್ನೆಕರ್ ಸೇರಿದಂತೆ ಇತರರು ಇದ್ದರು.