ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಂದ 73 ನೇ ಗಣರಾಜ್ಯೋತ್ಸವದ ಧ್ವಜಾರೋಹಣ
ಕಾರವಾರ ಜ. 26, 2022: ಹಿಂದುಳಿದ ಹಾಗೂ ಸಾಮಾಜಿಕವಾಗಿ ಅಸಮತೋಲನವನ್ನು ಹೋಗಲಾಡಿಸಲು ಸರ್ಕಾರ ಕಟಿಬದ್ಧವಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಖಾತೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಬುಧವಾರ ಆಚರಿಸಲಾದ 73ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜರೋಹಣ ನೆರವೇರಿಸಿ ಮಾತನಾಡಿದ ಅವರು, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಸಿಗಬೇಕು ಎಂಬ ಆಶಯದಿಂದ ನಮ್ಮ ಸರ್ಕಾರ ದೂರದೃಷ್ಟಿಯ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿದ್ದು, ಸಾಮಾಜಿಕ ಭದ್ರತಾ ಯೋಜನೆಗಳಡಿ, ಸಂಧ್ಯಾ ಸುರಕ್ಷಾ, ವಿಧವೆಯರ ಹಾಗೂ ಅಂಗವಿಕಲರ ಮಾಸಾಶನ ಮೊತ್ತವನ್ನು ಹೆಚ್ಚಿಸಿ ಹಿರಿಯ ನಾಗರಿಕರು, ವಿಕಲಚೇತನರಲ್ಲಿ ಹೊಸ ಚೈತನ್ಯ ತುಂಬುವ ಪ್ರಯತ್ನ ಮಾಡಲಾಗಿದೆ ಎಂದರು.
ಉತ್ತರ ಕನ್ನಡ ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿ ರೂಪಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಜಿಲ್ಲೆಗೊಂದು ಸರಕಾರಿ ಗೋಶಾಲೆ ತೆರೆಯುವ ಯೋಜನೆಯಡಿಯಲ್ಲಿ, ಜಿಲ್ಲೆಯ ಹಳಿಯಾಳ ತಾಲೂಕಿನ ಮದ್ನಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದುಸುಗಿ ಗ್ರಾಮದಲ್ಲಿ ಸರ್ಕಾರಿ ಗೋಶಾಲೆ ಪ್ರಾರಂಭಿಸಲು ಸ್ಥಳ ನಿಗದಿಪಡಿಸಲಾಗಿದೆ. ಇದಕ್ಕಾಗಿ ರೂ.36.00 ಲಕ್ಷ ಅನುದಾನ ಬಿಡುಗಡೆಯಾಗಿರುತ್ತದೆ. ಮುಖ್ಯಮಂತ್ರಿಗಳ ರೈತ ವಿದ್ಯಾನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 13673 ವಿದ್ಯಾರ್ಥಿಗಳಿಗೆ ಒಟ್ಟೂ ರೂ.3,36,01,000 (ರೂಪಾಯಿ ಮೂರು ಕೋಟಿ ಮುವತ್ತಾರು ಲಕ್ಷ ಒಂದು ಸಾವಿರ) ವಿದ್ಯಾರ್ಥಿ ವೇತನ ಡಿ.ಬಿ.ಟಿ ಮೂಲಕ ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿರುತ್ತದೆ ಎಂದು ಹೇಳಿದರು.
ಹಿಂದುಳಿದ ವರ್ಗ ಸಮಾಜ ಕಲ್ಯಾಣ ಇಲಾಖೆ ಮತ್ತು ವಸತಿ ಶಿಕ್ಷಣ ಇಲಾಖೆಯಲ್ಲಿ ಕಲಿಯುತ್ತಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರಿಗೆ ಆತ್ಮ ರಕ್ಷಣೆಯ ಕಲೆ ತರಬೇತಿಗಾಗಿ ಅಗತ್ಯ ಭೂಮಿಕೆ ಸಿದ್ದಗೊಳಿಸಲಾಗಿದು.್ ಈಗಾಗಲೇ ತರಬೇತಿ ಆರಂಭಗೊಂಡಿದೆ ಎಂದರು.
ಧ್ವಜಾರೋಹಣಕ್ಕೂ ಮುನ್ನ ಕಾರವಾರದ ಡಿಎಆರ್ ನ ಆರ್‍ಪಿಐ ಪರೇಡ್ ಕಮಾಂಡರ್ ಫಕೀರಪ್ಪ ಡೊಕ್ಕಣ್ಣವರ್ ನೇತೃತ್ವದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ನಾಗರೀಕ ಪೊಲೀಸ್ ತುಕಡಿ, ಅರಣ್ಯ ಇಲಾಖೆ, ಚೆಂಡಿಯಾ ಘಟಕದ ಗೃಹ ರಕ್ಷಕ ದಳ, ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ 8ನೇ ಕರ್ನಾಟಕ ನೇವಲ್ ಯುನಿಟ್ ಹಾಗೂ 29ನೇ ಕರ್ನಾಟಕ ಬಟಾಲಿಯನ್ ತಂಡದವರಿಂದ ಪಥ ಸಂಚಲನ ನಡೆಯಿತು.
ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೆಕರ್, ಕಾರವಾರ ನಗರಸಭೆ ಅಧ್ಯಕ್ಷ ಡಾ. ನೀತಿನ ಎಸ್ ಪಿಕಳೆ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪೆನ್ನೆಕರ್ ಸಿಇಓ ಪ್ರಿಯಾಂಗಾ ಎಂ., ಎಡಿಸಿ ಕೃಷ್ಣಮೂರ್ತಿ ಹೆಚ್.ಕೆ., ಸೇರಿದಂತೆ ಅನೇಕರು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಇದ್ದರು.
ಕರೋನಾ ನಿರ್ವಹಣೆಯಲ್ಲಿ ಕೋವಿಡ್ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸಿದ ಅಧಿಕಾರಿ ಹಾಗೂ ನೌಕರರಿಗೆ ಸನ್ಮಾನ :
ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಛೇರಿಯ ಮೈಕ್ರೋ ಬಯೋಲೊಜಿಸ್ಟ್ ರೇಣುಕಾ ಪ್ರಭು, ಸಾಂಕ್ರಾಮಿಕ ರೋಗ ಶಾಸ್ತ್ರಜ್ಞ ಡಾ. ಅಫಿಸಾ ನಧಾಫ್, ಕಾರವಾರ ತಾಲೂಕಿನ ಅಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅನುಪಮಾ ಅಂಕೋಲೆಕರ್, ಕಾರವಾರ ತಹಶೀಲ್ದಾರ ಕಚೇರಿಯ ದ್ವಿತಿಯ ದರ್ಜೆ ಸಹಾಯಕ ವಿನಾಯಕ ಗೌಡ, ಜಿಲ್ಲಾಧಿಕಾರಿಗಳ ಕಚೇರಿಯ ಜಿಲ್ಲಾ ಕೋವಿಡ್ ವಾರ್ ರೂಮ್ ನೋಡಲ್ ಅಧಿಕಾರಿ ಪ್ರಶಾಂತ ಎಸ್.ಹೆಚ್, ಕಾರವಾರ ಗ್ರಾಮಿಣ ಪೊಲೀಸ ಠಾಣೆಯ ಮುಖ್ಯ ಪೇದೆ ಹನುಮಂತ ರಡ್ಡೆರ್, ಭಟ್ಕಳ ನಗರ ಪೊಲೀಸ ಠಾಣೆಯ ಉಪ ನಿರೀಕ್ಷಕ ಹೆಚ್.ಬಿ ಕುಡಗುಂಠಿ, ಕಾರವಾರ ನಗರಸಭೆಯ ಆರೋಗ್ಯ ನಿರೀಕ್ಷಕ ಮಹಮ್ಮದ್ ಯಾಕುಬ್ ಶೇಖ್, ಸಿದ್ದಾಪುರ ಪಟ್ಟಣ ಪಂಚಾಯತ್ ಪೌರ ಕಾರ್ಮಿಕ ಅಭಿಜಿತ್ ರಾಜು ಕೊರಾರ, ಜಿಲ್ಲಾ ಆರೋಗ್ಯಾಧಿಕಾರಿಗಳ ಕಛೇರಿಯ ಡಿಸ್ಟ್ರಿಕ್ ಪ್ರೋಗ್ರಾಮ ಮ್ಯಾನೇಜರ್ ಬಸವರಾಜ ಚಿನಿವಾಲಕರ್, ವಾಹನ ಚಾಲಕರಾದ ನಂದಾ ಬಿ. ನಾಯ್ಕ, ಸುರೇಶ ಹೊನ್ನಾವರ, ಮಹಮ್ಮದ ಶಫಿ ಖಾನ್, ಮುಂಡಗೋಡ ತಾಲೂಕಾ ಆಸ್ಪತ್ರೆಯ ಆಡಳಿತ ವೈಧ್ಯಾಧಿಕಾರಿ ಹೆಚ್.ಎಫ್ ಇಂಗಳೆ, ಕಾರವಾರ ವೈಧ್ಯಕೀಯ ವಿಜ್ಞಾನ ಸಂಸ್ಥೆಯ ಪ್ರೊಪೆಸರ್ ಮತ್ತು ಮೈಕ್ರೋ ಬಯೋಲಜಿ ಮುಖ್ಯಸ್ಥ ಡಾ. ವೆಂಕಟೇಶ ವಡನಾಳ, ಹಾಗೂ ಕಾರವಾರದ ರೆಡ್ ಕ್ರಾಸ್ ಸಂಸ್ಥೆಯನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಜಿಲ್ಲಾಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದಂತಹ ನಗರ ಸ್ಥಳಿಯ ಸಂಸ್ಥೆಗಳಿಗೆ ಬಹುಮಾನ ವಿತರಣೆ : ನಗರಸಭೆ ಕಾರವಾರ ಪ್ರಥಮ, ಪುರಸಭೆ ಹಳಿಯಾಳ ದ್ವಿತೀಯ, ಪಟ್ಟಣ ಪಂಚಾಯತ್ ಮುಂಡಗೋಡ ತೃತೀಯ.