ಗ್ರಾಮ ಒನ್ ನಿಂದ ಗ್ರಾಮೀಣ ಜನತೆಗೆ ಸುಲಭದಲ್ಲಿ ಸರ್ಕಾರಿ ಸೇವೆ : ಸಚಿವ ಎಸ್.ಅಂಗಾರ

 ಗ್ರಾಮ ಒನ್ ನಿಂದ ಗ್ರಾಮೀಣ ಜನತೆಗೆ ಸುಲಭದಲ್ಲಿ ಸರ್ಕಾರಿ ಸೇವೆ : ಸಚಿವ ಎಸ್.ಅಂಗಾರ
Share this post

ಉಡುಪಿ, ಜ 26, 2022: ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಅಗತ್ಯವಿರುವ ದಾಖಲೆಗಳಿಗೆ ಗ್ರಾಮೀಣ ಜನತೆ ನಗರ ಪ್ರದೇಶಕ್ಕೆ ಬರುವ ಅಗತ್ಯವಿರದೇ ತಮ್ಮ ಗ್ರಾಮದಲ್ಲಿಯೇ ಅತ್ಯಂತ ಸುಲಭವಾಗಿ ಅಗತ್ಯವಿರು ಹಲವಾರು ಸರ್ಕಾರಿ ಸೇವೆಗಳನ್ನು ಗ್ರಾಮ ಒನ್ ಕೇಂದ್ರಗಳ ಮೂಲಕ ಪಡೆಯಬಹುದು ಎಂದು ಮೀನುಗಾರಿಕೆ ,ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದರು.

ಅವರು ಇಂದು ಉದ್ಯಾವರ ಗ್ರಾಮ ಪಂಚಾಯತ್ ನಲ್ಲಿ ಗ್ರಾಮ ಒನ್ ಕೇಂದ್ರವನ್ನು ಉದ್ಘಾಟಿಸಿ, ಮುಖ್ಯಮಂತ್ರಿಗಳೊಂದಿಗೆ ನಡೆದ ವರ್ಚುವಲ್ ಕಾರ್ಯಕ್ರಮದ ನಂತರ ಮಾತನಾಡಿದರು.

ಗ್ರಾಮೀಣ ಜನತೆ ವಿವಿಧ ಸರಕಾರಿ ಸೌಲಭ್ಯಗಳನ್ನು ಪಡೆಯಲು ಅಗತ್ಯವಿದ್ದ ದಾಖಲೆಗಳಿಗಾಗಿ ದೂರದ ಊರುಗಳಿಂದ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೆ ಆಗಮಿಸಿ,ಸರದಿಯಲ್ಲಿ ನಿಂತು ದಾಖಲೆಗಳನ್ನು ಪಡೆಯಲು ಕಷ್ಟಪಡಬೇಕಿತ್ತು, ಇದನ್ನು ತಪ್ಪಿಸುವ ಉದ್ದೇಶದಿಂದ ಮುಖ್ಯಮಂತ್ರಿಗಳು ಗ್ರಾಮ ಒನ್ ಕೇಂದ್ರಗಳನ್ನು ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಆರಂಭಿಸಲು ಸೂಚಿಸಿದ್ದು, ಅದರಂತೆ ಉಡುಪಿ ಜಿಲ್ಲೆಯಲ್ಲಿ 105 ಗ್ರಾಮಗಳಲ್ಲಿ ಈ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.

ಗ್ರಾಮ ಒನ್ ಕೇಂದ್ರಗಳಲ್ಲಿ ಸರ್ಕಾರದ ವಿವಿಧ 48 ಇಲಾಖೆಗಳ ಸೇವಾ ಸಿಂಧುವಿನ 750 ಕ್ಕೂ ಹೆಚ್ಚಿನ ಸೇವೆ ,ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಸೇವೆ,ಇ ಸ್ಟಾಂಪಿಂಗ್, ಬ್ಯಾಂಕಿಂಗ್ ಸೇವೆ, ಸಕಾಲ, ಮಾಹಿತಿ ಹಕ್ಕು ಅಧಿನಿಯಮ ಇನ್ನಿತರ ಸೇವಾ ಸೌಲಭ್ಯಗಳು ದೊರೆಯಲಿವೆ, ಮುಂದಿನ ದಿನಗಳಲ್ಲಿ ಆಧಾರ್ ಕೇಂದ್ರದ ಸೇವೆಗಳು ಸಹ ಇಲ್ಲಿ ದೊರೆಯಲಿದ್ದು,ಸಾರ್ವಜನಿಕರು ಈ ಕೇಂದ್ರಗಳ ಸದುಪಯೋಗ ಪಡೆದುಕೊಳ್ಳುವಂತೆ ಸಚಿವರು ಹೇಳಿದರು.

ವರ್ಚುವಲ್ ಸಭೆಯ ಮೂಲಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗ್ರಾಮೀಣ ಜನತೆ ಯವುದೇ ಮಧ್ಯವರ್ತಿಗಳ ನೆರವಿಲ್ಲದೇ ಅತ್ಯಂತ ಸುಲಭವಾಗಿ ತಮ್ಮ ಗ್ರಾಮಗಳಲ್ಲಿಯೇ ಅಗತ್ಯ ಸರಕಾರಿ ದಾಖಲೆಗಳನ್ನು ಕಡಿಮೆ ಖರ್ಚಿನಲ್ಲಿ ಮತ್ತು ಅತ್ಯಂತ ತ್ವರಿತವಾಗಿ ಗ್ರಾಮ ಒನ್ ಕೇಂದ್ರಗಳ ಮೂಲಕ ಪಡೆಯಬಹುದಾಗಿದೆ. ಈಗಾಗಲೇ ಪ್ರಾಯೋಗಿಕವಾಗಿ ಯೋಜನೆಯನ್ನು ಜಾರಿಗೊಳಿಸಿದ್ದ 4 ಜಿಲ್ಲೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿ ವಿಲೇವಾರಿ ಮಾಡಲಾಗಿದೆ. ಇಂದಿನಿಂದ ರಾಜ್ಯದ 12 ಜಿಲ್ಲೆಗಳ 3000 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕೆಂಧ್ರಗಳು ಆರಂಭಗೊಳ್ಳಲಿವೆ. ಎಲ್ಲಾ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಯಲ್ಲಿ ಈ ಕೇಂದ್ರಗಳ ಸಮರ್ಪಕ ಕಾರ್ಯನಿರ್ವಹಣೆಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಎಲ್ಲಾ ಸಚಿವರು ತಮ್ಮ ಪ್ರವಾಸದ ಸಂದರ್ಭಗಳಲ್ಲಿ ಈ ಕೇಂದ್ರಗಳಿಗೆ ಬೇಟಿ ನೀಡಿ ಅದರ ಕಾರ್ಯವೈಖರಿಯನ್ನು ಪರಿಶೀಲಿಸಬೇಕು ಎಂದು ಸೂಚನೆ ನೀಡಿದರು.

ಮುಖ್ಯಮಂತ್ರಿಗಳ ಸೂಚನೆಯಂತೆ ರಾಜ್ಯದಲ್ಲಿ ಪ್ರಪ್ರಥಮವಾಗಿ ಉಡುಪಿಯ ಉದ್ಯಾವರ ಗ್ರಾಮ ಪಂಚಾಯತ್ ನ ಗ್ರಾಮ ಒನ್ ಕೆಂದ್ರದಲ್ಲಿ ಆರ್.ಟಿ.ಸಿ ಪತ್ರವನ್ನು ಗ್ರಾಮಸ್ಥರಿಗೆ ಸಚಿವ ಅಂಗಾರ ವಿತರಿಸಿದರು.

 ಕಾರ್ಯಕ್ರಮದಲ್ಲಿ ಶಾಸಕ ಲಾಲಾಜಿ ಆರ್ ಮೆಂಡನ್, ಉದ್ಯಾವರ ಗ್ರಾ.ಪಂ. ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿ.ಪಂ. ಸಿಇಓ ಡಾ.ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಉಡುಪಿ ತಹಸೀಲ್ದಾರ್ ಪ್ರದೀಪ್ ಕುರ್ಡೆಕರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ವಿವಿದೆಡೆ ಗಣರಾಜ್ಯೋತ್ಸವ ಆಚರಣೆ

ಅಜ್ಜರಕಾಡು ಹುತಾತ್ಮ ಸ್ಮಾರಕ : ಅಜ್ಜರಕಾಡು ನ ಹುತಾತ್ಮ ಸೈನಿಕರ ಸ್ಮಾರಕ ಬಳಿ ಮೀನುಗಾರಿಕೆ ,ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು. ಶಾಸಕ ರಘುಪತಿ ಭಟ್, ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿ.ಪಂ. ಸಿಇಓ ಡಾ.ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಉಡುಪಿ ತಹಸೀಲ್ದಾರ್ ಪ್ರದೀಪ್ ಕುರ್ಡೆಕರ್ , ಪೌರಾಯುಕ್ತ ಉದಯ ಶೆಟ್ಟಿ, ಜಿಲ್ಲೆಯ ಮಾಜಿ ಸೈನಿಕರು ಮತ್ತಿತರರು ಉಪಸ್ಥಿತರಿದ್ದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ: ವಾರ್ತಾ ಸಹಾಯಕರಾದ ಬಿ.ಶಿವಕುಮಾರ್ ಧ್ವಜಾರೋಹಣ ನೆರವೇರಿಸಿದರು. ಸಿಬ್ಬಂದಿಗಳಾದ ಸತೀಶ್ ಶೇಟ್ ಹಾಗೂ ಅಪ್ರೆಂಟಿಸ್ ಸಂದೀಪ್ ಭಾಗವಹಿಸಿದ್ದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಪ್ರಭಾರ) ಡಾ.ರಾಮರಾವ್ ಧ್ವಜಾರೋಹಣ ನೆರವೇರಿಸಿದರು. ಅರೋಗ್ಯ ಇಲಖೆಯ ವಿವಿಧ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

ಸರಕಾರಿ ನೌಕರರ ವಸತಿ ಗೃಹ ಅಜ್ಜರಕಾಡು : ಲೊಕೋಪಯೋಗಿ ಇಲಾಖೆಯ ಕಾರ್ಯನಿವಾಹಕ ಇಂಜನಿಯರ್ ರವಿಕುಮಾರ್ ಧ್ವಜಾರೋಹಣ ನೆರವೇರಿಸಿದರು. ವಸತಿಗೃಹದ ನಿವಾಸಿಗಳು ಭಾಗವಹಿಸಿದ್ದರು.

ಜಿಲ್ಲಾ ಸರಕಾರಿ ನೌಕರರ ಸಂಘ : ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದ ಕಚೇರಿಯಲ್ಲಿ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಖಜಾಂಜಿ ಶರೀಫ್ ರೋಣ, ಪ್ರವೀಣ್ ಕಾಮತ್ ಭಾಗವಹಿಸಿದ್ದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!