ಉತ್ತರ ಕನ್ನಡ: ಅಂಬಿಗರ ಚೌಡಯ್ಯ ಜಯಂತಿ ಆಚರಣೆ

 ಉತ್ತರ ಕನ್ನಡ: ಅಂಬಿಗರ ಚೌಡಯ್ಯ ಜಯಂತಿ ಆಚರಣೆ
Share this post

ಕಾರವಾರ ಜ.21, 2022: “ನಿಜಶರಣ ಅಂಬಿಗರ ಚೌಡಯ್ಯನವರ ವಿಚಾರದಾರೆಗಳನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕರೆ ನೀಡಿದರು.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಚರಿಸಲಾದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಈ ಬಾರಿ ಕರೋನಾ ಹಿನ್ನಲೆಯಲ್ಲಿ ಸರಳವಾಗಿ ಆಚರಿಸಲಾಗುತ್ತಿದೆ. ಆದರೆ ಅವರ ಚಿಂತನೆಗಳು ಅತ್ಯಂತ ಮೌಲ್ಯಯುತವಾಗಿದ್ದಂತವುಗಳಾಗಿದ್ದು ನಾವು ಅವನ್ನು ಒಮ್ಮೆ ತಿರುಗಿ ನೋಡಿ, ನಮ್ಮ ಜೀವನದಲ್ಲಿ ಬಳಸಿಕೊಂಡಲ್ಲಿ ಅದೇ ಒಂದು ಪ್ರಮುಖ ಆಚರಣೆಯಾಗುತ್ತದೆ ಎಂದರು.

ದೋಣಿ ನಡೆಸುವ ಕಾಯಕ ಮಾಡುತ್ತಿದ್ದ ಅಂಬಿಗರ ಚೌಡಯ್ಯ ತಮ್ಮ ವೃತ್ತಿಯನ್ನೇ ಕೈಲಾಸವೆಂದು ನಂಬಿದವರಾಗಿದ್ದರು. ಯಾವುದೇ ಕೆಲಸವನ್ನು ಶ್ರದ್ದೆಯಿಂದ ಮಾಡಿದ್ದಲ್ಲಿ ದೇವರನ್ನು ಕಾಣಬಹುದಾಗಿದೆ ಎಂಬುದನ್ನು ಅವರು ತೋರಿಸಿದ್ದಾರೆ. ಸಮಾಜದಲ್ಲಿರುವ ಮೇಲು, ಕೀಳು, ಮೂಢನಂಬಿಕೆ, ಡಂಭಾಚಾರಗಳನ್ನು ಯಾವುದೇ ಅಂಜು ಅಳುಕಿಲ್ಲದೆ ತಮ್ಮ ವಚನಗಳ ಮೂಲಕ ಟೀಕಿಸಿದ್ದಾರೆ, ಇದರಿಂದ ಅವರು ಸಮಾಜ ಸುಧಾರಣೆ ಮಾಡಲು ಸಹಕಾರಿಯಾಯಿತು ಎಂದರು.

ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೆಚ್.ಕೆ ಅವರು ಮಾತನಾಡಿ 12ನೇ ಶತಮಾನದ ಅಂಬಿಗರ ಚೌಡಯ್ಯ ತಮ್ಮ ಕುಲ ಕಸಬನ್ನೆ ಮಾಡುತ್ತಾ ಸಮಾಜ ಸುಧಾರಕರಾದವರು. ಸಮಾಜದ ಕೆಟ್ಟ ಅನಿಷ್ಠ ಪದ್ದತಿಗಳ ವಿರುದ್ದ ಧ್ವನಿ ಎತ್ತಿ ಸಾಮಾಜಿಕ ಹರಿಕಾರರಾಗಿ ಕ್ರಾಂತಿಯನ್ನುಂಟು ಮಾಡಿದವರು. ಅವರು ತಮ್ಮ ವಚನಗಳ ಮೂಲಕ ಸಮಾಜಕ್ಕೆ ಕೊಡುಗೆಯನ್ನು ನೀಡಿದ್ದಾರೆ. ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರೋಬೇಶನರಿ ಐ ಎ ಎಸ್ ಅಧಿಕಾರಿ ಅವಿನಾಶ ಶಿಂಧೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್.ಜಿ.ನಾಯ್ಕ, ಮೀನುಗಾರಿಕಾ ಇಲಾಖೆ ಉಪನಿರ್ದೇಶಕಿ ಕವಿತಾ ಆರ್.ಕೆ. ಅಂಬಿಗ ಸಮುದಾಯ ಸಂಘದ ಅಧ್ಯಕ್ಷ ದೇವರಾಯ ಯಶವಂತ ಶೈಲ್, ಉಪಾಧ್ಯಕ್ಷ ಶ್ರಿಪಾದ ಮುರಾರಿ ಖೊಬ್ರೆಕರ್, ಮುಖಂಡರಾದ ಗಣಪತಿ ಮಾಂಗ್ರೆ, ಬಾಬು ಅಂಬಿಗ, ಉದಯ ಚೆಂಡೆಕರ್, ಮುರಳಿ ಬಾಬು ಮಾಜಾಳಿಕರ್ ಸೇರಿದಂತೆ ಇತರರು ಇದ್ದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!