ಕಿದು ಜೀನ್ ಬ್ಯಾಂಕ್ ಕೇಂದ್ರ ಸ್ಥಳಾಂತರ ಇಲ್ಲ: ಕೇಂದ್ರ ಕೃಷಿ ಸಚಿವ ಸ್ಪಷ್ಠನೆ
ಮಂಗಳೂರು, ಜ 19, 2022: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಕಿದು ನಲ್ಲಿರುವ ಅಂತರಾಷ್ಟ್ರೀಯ ತೆಂಗು ಜೀನ್ ಬ್ಯಾಂಕ್ (ಸೌತ್ ಏಷ್ಯಾ) ಸಂಶೋಧನಾ ಕೇಂದ್ರವನ್ನು ಸ್ಥಳಾಂತರಿಸುವ ಯಾವುದೇ ಪ್ರಸ್ತಾವನೆ ಕೇಂದ್ರ ಸರ್ಕಾರದ ಪರಿಗಣನೆಯಲ್ಲಿ ಇಲ್ಲ ಎಂದು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಸಚಿವರಾದ ನರೇಂದ್ರ ಸಿಂಗ್ ತೋಮರ್ ರವರು ದಕ್ಷಿಣ ಕನ್ನಡ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲು ಇವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಕಿದು ಸಂಶೋಧನಾ ಕೇಂದ್ರದಲ್ಲಿ 2 ಮಂದಿ ವಿಜ್ಞಾನಿಗಳು, 5 ಮಂದಿ ತಾಂತ್ರಿಕ ಸಿಬ್ಬಂದಿ, ಒಬ್ಬರು ಸಹಾಯಕ ಆಡಳಿತ ಅಧಿಕಾರಿ ಹಾಗೂ ಒಬ್ಬರು ಆಡಳಿತ ಸಿಬ್ಬಂದಿ ಹಾಗೂ 16 ನುರಿತ ಸಹಾಯಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಕಿದು ಸಂಶೋಧನ ಕೇಂದ್ರದ ಲೀಸ್ ನವೀಕರಣಕ್ಕೆ ವಿಧಿಸಲಾಗಿರುವ ನೆಟ್ ಪ್ರೆಸೆಂಟ್ ವ್ಯಾಲ್ಯೂ (ಎನ್ ಪಿ ವಿ) ಪಾವತಿಯ ಬಗ್ಗೆ ರಿಯಾಯಿತಿ ನೀಡುವ ಪ್ರಸ್ತಾವನೆ ಸರ್ವೋಚ್ಚ ನ್ಯಾಯಾಲಯದ ಪರಿಗಣನೆಯಲ್ಲಿದ್ದು, ಸರ್ವೋಚ್ಚ ನ್ಯಾಯಾಲಯ ಅದೇಶದ ಪ್ರಕಾರ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.
ನಳಿನ್ ಕುಮಾರ್ ಕಟೀಲು ಇವರು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್ ರವರಿಗೆ ಈ ಹಿಂದೆ ಪತ್ರ ಮುಖೇನ ಕಿದು ನಲ್ಲಿರುವ ಅತ್ಯಂತ ವಿಶಿಷ್ಠವಾಗಿರುವ ಕಿದು ಅಂತರ ರಾಷ್ಟ್ರೀಯ ತೆಂಗು ಜೀನ್ ಬ್ಯಾಂಕ್ ಕೇಂದ್ರವನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸದೆ ಸದರಿ ಕೇಂದ್ರವನ್ನು ಕಿದುವಿನಲ್ಲೆ ಮುಂದುವರೆಸುವ ಬಗ್ಗೆ ಅಗತ್ಯ ಕ್ರಮಕೈಗೊಳ್ಳುವಂತೆ ವಿನಂತಿಸಿದ್ದ ಹಿನ್ನಲೆಯಲ್ಲಿ ಸಚಿವರು ಈ ಪತ್ರವನ್ನು ಬರೆದಿದ್ದಾರೆ.