ಗೋಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ: ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ
ಉಡುಪಿ, ಜ 13, 2022: ಶ್ರೀಕೃಷ್ಣಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ, ಪರ್ಯಾಯ ಶ್ರೀಅದಮಾರು ಮಠದ ಆಶ್ರಯದಲ್ಲಿ, ಪರ್ಯಾಯ ಪೀಠಾಧೀಶರಾದ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರು ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಿದರು.
“ಗೋವು ಏಕತೆಯ ಸಂಕೇತ, ಕನ್ಯಾಕುಮಾರಿಯಿಂದ ಹಿಮಾಲಯದ ತನಕ ಎಲ್ಲರೂ ಗೋವನ್ನು ಪೂಜಿಸುತ್ತಾರೆ. ಭಾರತದ ಹಿಂದಿನ ಪರಂಪರೆಯ ಬಗ್ಗೆ ಹೊಸ ಪೀಳಿಗೆಗೆ ಸರಿಯಾದ ತಿಳುವಳಿಕೆ ನೀಡಬೇಕಾದ ಹೊಣೆಗಾರಿಕೆ ಇಂದಿನವರಿಗೆ ಇದೆ,” ಎಂದು ಅನುಗ್ರಹ ಸಂದೇಶ ನೀಡಿದರು.
ಹೊಸನಗರ ಶ್ರೀರಾಮಚಂದ್ರಾಪುರ ಮಠಾಧೀಶರಾದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರು, ಸಾವರ್ಕರ್ ಭಾರತದ ಸನಾತನ ಧರ್ಮದ ಬಗ್ಗೆ ಕಾಳಜಿ ಹೊಂದಿದವರು. ಮಂಗಲಪಾಂಡೆ ಮೊದಲಾದವರು ನಡೆಸಿದ 1857 ರ ಚಳವಳಿಯನ್ನು ದಂಗೆಯಲ್ಲ ಅದು ಸ್ವಾತಂತ್ರ್ಯ ಹೋರಾಟ ಎಂದು ಗುರುತಿಸಿದ್ದು ಸಾವರ್ಕರ್. ಗೋವು ಈ ನೆಲದ ಜೀವ ಅದನ್ನು ಉಳಿಸಿಕೊಳ್ಳಬೇಕಾದ್ದು ನಮ್ಮೆಲ್ಲರ ಮೊದಲ ಕರ್ತವ್ಯ ಎಂದರು.
ಪುಣೆಯ ಸಾತ್ಯಕಿ ಸಾವರ್ಕರ್ (ವಿ.ದಾ.ಸಾವರ್ಕರ್ ಅವರ ಮೊಮ್ಮಗ) ರವರು “ಭಾರತ ಮತ್ತು ಸಾವರ್ಕರ್” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಪರ್ಯಾಯ ಮಠದ ಆಸ್ಥಾನ ವಿದ್ವಾಂಸರಾದ ವಿದ್ವಾನ್ ಕೃಷ್ಣರಾಜ ಕುತ್ಪಾಡಿಯವರು ಕಾರ್ಯಕ್ರಮ ನಿರ್ವಹಿಸಿದರು.ವಿಷ್ಣು ಹೆಬ್ಬಾರ್ ಮತ್ತು ಲೀಲಾಕ್ಷ ಕರ್ಕೇರ ಸಭೆಯಲ್ಲಿ ಭಾಗವಹಿಸಿದ್ದರು.