ವೆನ್ಲಾಕ್ ಸನ್ನದ್ದ ಸ್ಥಿತಿಯಲ್ಲಿರಿಸಲು ಜಿಲ್ಲಾಧಿಕಾರಿ ಸೂಚನೆ
ಮಂಗಳೂರು,ಜ.05, 2021: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಕಾರಣ ಹಾಗೂ ಅದರ ರೂಪಾಂತರಿ ಓಮಿಕ್ರೋನ್ ಪ್ರಕರಣಗಳ ವರದಿಯ ಹಿನ್ನಲೆಯಲ್ಲಿ ಯಾವುದೇ ಕ್ಷಣದಲ್ಲಿಯೂ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ವೆನ್ಲಾಕ್ ಜಿಲ್ಲಾಸ್ಪತ್ರೆ ಸದಾ ಸನ್ನದ್ದವಾಗಿರಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಆಸ್ಪತ್ರೆಯ ಜಿಲ್ಲಾ ಸರ್ಜನ್ಗೆ ಸೂಚನೆ ನೀಡಿದರು.
ಅವರು ಜ.5ರ ಬುಧವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ತಜ್ಞರ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೆನ್ಲಾಕ್ನಲ್ಲಿ ಇದೀಗ ನೀಡಲಾಗುತ್ತಿರುವ ಗುಣಮಟ್ಟದ ಚಿಕಿತ್ಸೆಯಂತೆಯೇ ಕೊರೋನಾ ಹಾಗೂ ಅದರ ರೂಪಾಂತರಿ ಸೋಂಕುಗಳು ಹೆಚ್ಚಾದ ಸಂದರ್ಭದಲ್ಲಿ ಚಿಕಿತ್ಸೆಗಾಗಿ ದಾಖಲಾಗುವ ರೋಗಿಗಳನ್ನು ಆರೈಕೆ ಮಾಡಿ ಗುಣಪಡಿಸಬೇಕು, ಅದಕ್ಕಾಗಿ ಅಲ್ಲಿರುವ ಮೂಲಭೂತ ಸೌಕರ್ಯಗಳು ಹಾಗೂ ಮಾನವ ಸಂಪನ್ಮೂಲಗಳ ಬಗ್ಗೆ ಭಾರತೀಯ ವೈದ್ಯಕೀಯ ಸಂಘ ಹಾಗೂ ಮೆಡಿಕಲ್ ಕಾಲೇಜುಗಳ ಪರಿಣತರ ತಂಡದಿAದ ತಪಾಸಣೆ ನಡೆಸಿ ವರದಿ ಪಡೆಯುವಂತೆ ಅವರು ಸೂಚಿಸಿದರು.
ಚಿಕಿತ್ಸೆಯ ವಿಷಯಕ್ಕೆ ಸಂಬಂಧಿಸಿದಂತೆ ವೆನ್ಲಾಕ್ನಲ್ಲಿ ಯಾವುದೇ ಕೊರತೆ ಎದುರಾಗಬಾರದು, ವೈದ್ಯಕೀಯ ಆಮ್ಲಜನಕದ ಉತ್ಪಾದನೆ, ಈಗಾಗಲೇ ಆಸ್ಪತ್ರೆಯಲ್ಲಿರುವ ಆಕ್ಸಿಜನ್ ಕಾನ್ಸಂಟ್ರೆರ್ಸ್ಗಳ ಕಾರ್ಯವೈಖರಿಗಳನ್ನು ಪರಿಶೀಲಿಸಿಕೊಳ್ಳಬೇಕು, ಉತ್ಪಾದನಾ ಘಟಕಗಳಲ್ಲಿ ಆಮ್ಲಜನಕ ಸಂಪೂರ್ಣವಾಗಿ ಬರಿದಾಗದಂತೆ ಎಚ್ಚರ ವಹಿಸುವುದು, ಆಂಬುಲೆನ್ಸ್ಗಳ ಸ್ಥಿತಿಗತಿಗಳು, ವೆಂಟಿಲೇಟರ್ಗಳ ಕಾರ್ಯ ವೈಖರಿ, ವೆಂಟಿಲೇಟರ್ ಹಾಗೂ ಆಕ್ಸಿಜನ್ ಕಾನ್ಸ್ಂಟ್ರೆರ್ಸ್ಗಳನ್ನು ಬೆಡ್ಗಳಿಗೆ ಹಾಕಿ ಡ್ರೈ ರನ್ ಮಾಡಿಸುವ ಪ್ರಕ್ರಿಯೆಗಳನ್ನು ಕೈಗೊಳ್ಳಬೇಕು, ತಾಲೂಕು ಆಸ್ಪತ್ರೆಗಳಲ್ಲಿ ಲಿಕ್ವಿಡ್ ಆಕ್ಸಿಜನ್ ಸರಬರಾಜಿನ ಬಗ್ಗೆ ಎಚ್ಚರಿಕೆಗಳನ್ನು ವಹಿಸುವಂತೆ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪ್ರತಿಯೊಂದು ಆಮ್ಲಜನಕ ಉತ್ಪಾದನಾ ಘಟಕಗಳಿಗೆ ಭೇಟಿ ನೀಡಿ, ಅವುಗಳ ಕಾರ್ಯಾಚರಣೆಯ ವರದಿ ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿಯವರು, ಖಾಸಗಿ ಆಸ್ಪತ್ರೆಗಳ ಅಪ್ಗ್ರೆಡೆಷನ್, ಅಲ್ಲಿರುವ ಲ್ಯಾಬ್ಗಳು, ವೆಂಟಿಲೇಟರ್, ಆಕ್ಸಿಜನ್ ಘಟಕಗಳ ಬಗ್ಗೆ ವರದಿಯೊಂದನ್ನು ನೀಡುವಂತೆ ಡಿಎಚ್ಒಗೆ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ಜಿಲ್ಲಾ ಸರ್ಜನ್ ಡಾ. ಸದಾಶಿವ್ ಶ್ಯಾನ್ಭೋಗ್, ಆರ್ಸಿಎಚ್ ಅಧಿಕಾರಿ ಡಾ. ರಾಜೇಶ್, ಡಿಎಸ್ಒ ಜಗದೀಶ್, ಕೆಎಂಸಿ, ಬಿ.ಎಸ್ ಹೆಗ್ಡೆ ಮೆಡಿಕಲ್ ಕಾಲೇಜುಗಳ ತಜ್ಞರು ಸಭೆಯಲ್ಲಿದ್ದರು.