ಆನೆಮಜಲಿನಲ್ಲಿ ವಕೀಲರ ಭವನ ಲೋಕಾರ್ಪಣೆ

 ಆನೆಮಜಲಿನಲ್ಲಿ ವಕೀಲರ ಭವನ ಲೋಕಾರ್ಪಣೆ
Share this post

ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ರಾಜ್ಯ ಸರ್ಕಾರದ್ದು ಮಾದರಿ ನಡೆ: ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್

ಮಂಗಳೂರು ಡಿ.28, 2021: ನ್ಯಾಯಾಲಯಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ರಾಜ್ಯ ಸರ್ಕಾರದ್ದು ಮಾದರಿಯ ನಡೆಯಾಗಿದೆ ಎಂದು ಎಂದು ಸುಪ್ರೀಂ ಕೋರ್ಟ್‍ನ ನ್ಯಾಯಮೂರ್ತಿಗಳಾದ ಎಸ್. ಅಬ್ದುಲ್ ನಝೀರ್ ಹೇಳಿದರು.

ಅವರು ಮಂಗಳವಾರ ಪುತ್ತೂರಿನ ಆನೆಮಜಲಿನಲ್ಲಿ ನೂತನ ನ್ಯಾಯಾಲಯ ಸಂಕೀರ್ಣದ 2ನೇ ಹಂತದ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ, ನೂತನವಾಗಿ ನಿರ್ಮಿಸಲಾಗಿರುವ ವಕೀಲರ ಭವನವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

ರಾಜ್ಯ ಸರ್ಕಾರವು ನ್ಯಾಯಾಲಯಕ್ಕೆ ಸಂಬಂಧಿಸಿದ ಎಲ್ಲಾ ಬೇಡಿಕೆಗಳನ್ನು ಸಕಾಲದಲ್ಲಿ ಈಡೇರಿಸುತ್ತಿದೆ, ನ್ಯಾಯಾಲಯಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಸೂಚಿಸಿದ ಸಂದರ್ಭದಲ್ಲಿ ಯಾವುದಕ್ಕೂ ಇಲ್ಲ ಎನ್ನದೇ ಸವಲತ್ತುಗಳನ್ನು ಒದಗಿಸಿಕೊಡುವ ರಾಜ್ಯ ಸರ್ಕಾರವು ತುಂಬಾ ಸಹಕಾರ ಮನೋಭಾವದಿಂದ ವರ್ತಿಸುತ್ತದೆ, ಅದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸುವೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಶಾಂತಿ ಮತ್ತು ಸುವ್ಯವಸ್ಥೆ ಇಲ್ಲದಿದಲ್ಲಿ ಸಮಾಜದಲ್ಲಿ ನೆಮ್ಮದಿ ಕಾಣಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ನ್ಯಾಯಾಂಗದ ಕರ್ತವ್ಯ ನಿರ್ವಹಣೆಗೆ ಕಟ್ಟಡ ಸೇರಿದಂತೆ ಸಮರ್ಪಕ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ, ವ್ಯಾಜ್ಯ ಎಂಬುದು ಕ್ಯಾನ್ಸರ್‍ನಂತೆ, ವ್ಯಾಜ್ಯವಿದ್ದಲ್ಲೀ ಶಾಂತಿ ಇರುವುದಿಲ್ಲ. ಅದನ್ನು ಪರಿಹರಿಸುವ ನಿಟ್ಟಿನಲ್ಲಿ ನ್ಯಾಯಾಲಯಗಳ ವ್ಯವಸ್ಥೆ ಅನಿವಾರ್ಯವಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಮಹಿಳಾ ವಕೀಲರ ಸಂಖ್ಯೆ ಹೆಚ್ಚುತ್ತಿದೆ, ಇದು ಆಶದಾಯಕ ಬೆಳವಣಿಗೆಯಾಗಿದ್ದು, ನ್ಯಾಯಲಯಗಳು ಹಾಗೂ ವಕೀಲರ ಸಂಘಗಳಲ್ಲಿ ಅವರಿಗೆ ಅಗತ್ಯವಿರುವ ಸೌಕರ್ಯಗಳನ್ನು ಒದಗಿಸಲಾಗುವುದು, ನೂತನವಾಗಿ ನಿರ್ಮಾಣವಾಗಲಿರುವ ನ್ಯಾಯಾಲಯದ ಸಂಕೀರ್ಣದ ಮುಂದಿನ ಆವರಣದಲ್ಲಿ ಎರಡು ಎಕರೆ ಪ್ರದೇಶದಲ್ಲಿ ಉದ್ಯಾನವನ ನಿರ್ಮಿಸಿದ್ದಲ್ಲೀ ಉತ್ತಮ ಪರಿಸರದಲ್ಲಿ ನ್ಯಾಯಾಂಗದ ಕಲಾಪಗಳು ನಡೆಯಲು ಸಹಕಾರಿಯಾಗಲಿದೆ, ಅದಕ್ಕಾಗಿ ಸ್ಥಳೀಯ ಶಾಸಕರು ಕ್ರಮವಹಿಸುವಂತೆ ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಹೈಕೋರ್ಟ್‍ನ ನ್ಯಾಯಮೂರ್ತಿಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಕೆ. ಸೋಮಶೇಖರ್ ಮಾತನಾಡಿ, ಯಾವುದೇ ಒಂದು ಕಟ್ಟಡವನ್ನು ನಾವು ನಿರ್ಮಾಣ ಮಾಡುವಾಗಲೂ ಅದರ ಪ್ರತಿಫಲ ಸಮಾಜಕ್ಕೆ ಸಿಗುವಂತಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ರಾಜ್ಯ ಹೈಕೋರ್ಟ್‍ನ ನ್ಯಾಯಮೂರ್ತಿಗಳಾದ ಎಸ್. ವಿಶ್ವಜಿತ್ ಶೆಟ್ಟಿ ಮತ್ತು ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೋಕೇಟ್ ಜನ್‍ರಲ್ ಅರುಣ್ ಶ್ಯಾಮ್ ಅವರನ್ನು ಸನ್ಮಾನಿಸಲಾಯಿತು. ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಪ್ರಮೋದ್ ಮತ್ತು ಕಂಟ್ರಾಕ್ಟರ್ ಆಸಿಫ್ ಸೀಕೋ ಅವರನ್ನು ಗೌರವಿಸಲಾಯಿತು.

ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರ ಕಾಂತರಾಜ್ ಬಿ.ಟಿ ವೇದಿಕೆಯಲ್ಲಿದ್ದರು.

ವಕೀಲರ ಸಂಘದ ಅಧ್ಯಕ್ಷ ಮನೋಹರ ಕೆ.ವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮುರಳೀಧರ ರೈ ಸ್ವಾಗತಿಸಿದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಎನ್.ಎಸ್ ವಂದಿಸಿದರು.

ನ್ಯಾಯವಾದಿಗಳಾದ ಕೆ.ಆರ್. ಆಚಾರ್ಯ ಹಾಗೂ ದುರ್ಗಾ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

ರಾಜ್ಯ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಗಳಾದ ರಿತು ರಾಜ್ ಅವಸ್ಥಿ ಅವರು ವಿಡಿಯೋ ಮೂಲಕ ಸಂದೇಶ ನೀಡಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನೂತನ ವಕೀಲರ ಭವನದ ಆವರಣದಲ್ಲಿ ನ್ಯಾಯಮೂರ್ತಿಗಳು ಸಸಿಗಳನ್ನು ನೆಟ್ಟರು.
ನ್ಯಾಯಮೂರ್ತಿಗಳನ್ನು ಮಹಿಳೆಯರು ಪೂರ್ಣ ಕುಂಭ ಕಲಶಗಳ ಮೂಲಕ ಸ್ವಾಗತಿಸಿದರು.

Subscribe to our newsletter!

Other related posts

Leave a Reply

Your email address will not be published. Required fields are marked *

error: Content is protected !!