ವಿಟ್ಲ, ಕೋಟೆಕಾರ್: 25 ರಿಂದ ಮದ್ಯ ಮಾರಾಟ, ಸಾಗಾಟ ನಿಷೇಧ
ಮಂಗಳೂರು,ಡಿ. 24, 2021: ವಿಟ್ಲ ಹಾಗೂ ಕೋಟೆಕಾರು ಪಟ್ಟಣ ಪಂಚಾಯತ್‍ಗಳಲ್ಲಿ ವಿವಿಧ ಕಾರಣಗಳಿಂದ ತೆರವಾದ ಖಾಲಿ ಸ್ಥಾನಗಳಿಗೆ ಡಿ.27ರ ಸೋಮವಾರ ಮತದಾನ ನಡೆಯಲಿದೆ.
ಮತದಾನವನ್ನು ಮುಕ್ತ, ನ್ಯಾಯಸಮ್ಮತ ಹಾಗೂ ನಿಷ್ಪಕ್ಷಪಾತವಾಗಿ ಶಾಂತಿಯುತ ವಾತಾವರಣದಲ್ಲಿ ನಡೆಸುವ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಡಿ.25ರ ಸಂಜೆ 5 ರಿಂದ ಡಿ.27ರ ಸಂಜೆ 5 ಗಂಟೆಯವರೆಗೆ ವಿಟ್ಲ ಹಾಗೂ ಕೋಟೆಕಾರು ಪಟ್ಟಣ ಪಂಚಾಯತ್‍ಗಳ ವ್ಯಾಪ್ತಿಯಲ್ಲಿ ಎಲ್ಲಾ ವಿಧದ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ.
ಪ್ರಜಾ ಪ್ರತಿನಿಧಿ ಕಾಯ್ದೆ-1951 ಸೆಕ್ಷನ್ 135(ಸಿ) ರನ್ವಯ ಹಾಗೂ ಕರ್ನಾಟಕ ಅಬಕಾರಿ ನನ್ನದುಗಳ (ಸಾಮಾನ್ಯ ಷರತ್ತುಗಳು ನಿಯಮ 1967ರ ನಿಯಮ 10(ಬಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಜಿಲ್ಲಾಧಿಕಾರಿಯವರು ಈ ಆದೇಶ ಮಾಡಿದ್ದಾರೆ.
ಈ ಸಂದರ್ಭದಲ್ಲಿ ವಿಟ್ಲ ಹಾಗೂ ಕೋಟೆಕಾರು ಪಟ್ಟಣ ಪಂಚಾಯತ್‍ಗಳ ವ್ಯಾಪ್ತಿಯಲ್ಲಿ ಮದ್ಯ ಮುಕ್ತ ದಿನಗಳಂದು ಘೋಷಿಸಿದ್ದು, ಎಲ್ಲಾ ವಿಧದ ಮದ್ಯದಂಗಡಿಗಳನ್ನು ಮುಚ್ಚುವಂತೆಯೂ ಹಾಗೂ ಅಬಕಾರಿ ಪದಾರ್ಥಗಳ ಸಾಗಾಣಿಕೆ, ಶೇಖರಣೆ, ತಯಾರಿಕ ಸರಬರಾಜು ಮತ್ತು ಎಲ್ಲಾ ವಿದಧ ಮದ್ಯ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.