ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಅಭಿವೃದ್ಧಿಗೆ 500 ಕೋಟಿ ರೂ. ಪ್ರಸ್ತಾವನೆ : ಮುಕ್ತಾರ್ ಹುಸೇನ್ ಎಫ್ ಪಠಾಣ್
ಉಡುಪಿ, ಡಿ 14, 2021: ಅಲ್ಪಸಂಖ್ಯಾತ ವರ್ಗದವರ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ಮುಂದಿನ ಬಜೆಟ್ನಲ್ಲಿ 500 ಕೋಟಿ ರೂ. ಗಳನ್ನು ಮೀಸಲಿಡುವಂತೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಕ್ತಾರ್ ಹುಸೇನ್ ಎಫ್ ಪಠಾಣ್ ಹೇಳಿದರು.
ಅವರು ಇಂದು ಮಣಿಪಾಲದ ಜಿಲ್ಲಾ ಅಲ್ಪ ಸಂಖ್ಯಾತರ ಅಭಿವೃದ್ದಿ ನಿಗಮದ ಕಚೇರಿಗೆ ಭೇಟಿ ನೀಡಿ ಮಾತನಾಡಿದರು.
ರಾಜ್ಯದಲ್ಲಿನ ಮುಸ್ಲಿಂ, ಕ್ರೈಸ್ತ, ಪಾರ್ಸಿ ಮತ್ತು ಜೈನ ಸಮುದಾಯದವರ ಸಮಗ್ರ ಅಭಿವೃದ್ಧಿಗಾಗಿ ನಿಗಮಕ್ಕೆ ಹೆಚ್ಚಿನ ಅನುದಾನದ ಅಗತ್ಯವಿದ್ದು, ಇದಕ್ಕಾಗಿ 500 ಕೋಟಿ ರೂ. ಗಳನ್ನು ಮೀಸಲಿಡುವಂತೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಿದ್ದು, ಇದರಲ್ಲಿ 200 ಕೋಟಿ ರೂ. ಗಳನ್ನು ಸಮುದಾಯದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡಲು ಬಳಸಲಾಗುವುದು ಎಂದರು.
ಹೊರದೇಶಗಳಿಗೆ ತೆರಳಿ ವಿದ್ಯಾಭ್ಯಾಸ ಮಾಡುವ ಸಮುದಾಯದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ನೆರವು, ಕೆ.ಎಸ್.ಎಫ್.ಸಿ ಮಾದರಿಯಲ್ಲಿ ಸಮುದಾಯದ ವ್ಯಾಪಾರಿಗಳಿಗೆ 5-10 ಲಕ್ಷ ರೂ. ವರೆಗಿನ ಸಾಲ ಸೌಲಭ್ಯ, ಮನೆ ನಿರ್ಮಾಣಕ್ಕೆ ಸಾಲ ನೀಡುವ ಕಾರ್ಯಕ್ರಮಗಳನ್ನು ಆರಂಭಿಸಲಾಗುವುದು ಎಂದರು.
ನಿಗಮದ ಎಲ್ಲಾ ಅಧಿಕಾರಿಗಳು, ಮಸೀದಿ, ದರ್ಗಾ, ಚರ್ಚ್, ಬಸದಿಗಳಿಗೆ ತೆರಳಿ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕು. ಅಲ್ಲಿನ ನೋಟೀಸ್ ಬೋರ್ಡ್ಗಳಲ್ಲಿ ಎಲ್ಲಾ ಯೋಜನೆಗಳ ವಿವರಗಳನ್ನು ಅಳಡಿಸಬೇಕು ಹಾಗೂ ಅಲ್ಪಸಂಖ್ಯಾತರು ಇಲಾಖೆಯ ಕುರಿತು ಯಾವುದೇ ಮಾಹಿತಿ ಪಡೆಯಲು ಹಾಗೂ ಸಮಸ್ಯೆಗಳ ಬಗ್ಗೆ ತಿಳಿಸಲು ಆರಂಭಿಸಿರುವ 24*7 ಸಹಾಯವಾಣಿ ಸಂಖ್ಯೆ 8277799990 ಬಗ್ಗೆ ವ್ಯಾಪಕ ಅರಿವು ಮೂಡಿಸಬೇಕು ಮತ್ತು ಇಲಾಖೆಯ ಯೋಜನೆಗಳನ್ನು ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಸಮುದಾಯದ ಎಲ್ಲಾ ಜನರಿಗೆ ತಲುಪಿಸಬೇಕು ಎಂದರು.
ಉಡುಪಿ ಜಿಲ್ಲೆಯಲ್ಲಿ 2021-22 ರಲ್ಲಿ ಅರಿವು ಯೋಜನೆಯಡಿಯಲ್ಲಿ 30 ಲಕ್ಷ ರೂ. ಗುರಿ ನೀಡಲಾಗಿದೆ. ಶ್ರಮಶಕ್ತಿ, ಕಿರು ಸಾಲ, ಕೋವಿಡ್ ನೆರವು ಯೋಜನೆಯಡಿ 480 ಜನರಿಗೆ ನೆರವು ನೀಡಲಾಗಿದ್ದು, 25 ಜನರಿಗೆ ಟ್ಯಾಕ್ಸಿ ಖರೀದಿಗೆ ನೆರವು ನೀಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಜಿಲ್ಲೆಯ ಫಲಾನುಭವಿಗಳಿಗೆ ಚೆಕ್ಗಳನ್ನು ವಿತರಿಸಲಾಯಿತು.
ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ನಿರ್ದೇಶಕ ಸಿರಾಜುದ್ದೀನ್, ಜಿಲ್ಲಾ ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆ ಅಧಿಕಾರಿ ಭಕ್ತ ಮಾರ್ಕಂಡೇಯ ಮತ್ತಿತರರು ಉಪಸ್ಥಿತರಿದ್ದರು.