ಕಡವಾಡ ಗ್ರಾ.ಪಂ ವ್ಯಾಪ್ತಿಯ ವಾರ್ಡ್‍ಗಳಲ್ಲಿ ಮನೆ ಮನೆಗೆ ಉದ್ಯೋಗ ಖಾತ್ರಿ ಅಭಿಯಾನ

 ಕಡವಾಡ ಗ್ರಾ.ಪಂ ವ್ಯಾಪ್ತಿಯ ವಾರ್ಡ್‍ಗಳಲ್ಲಿ ಮನೆ ಮನೆಗೆ ಉದ್ಯೋಗ ಖಾತ್ರಿ ಅಭಿಯಾನ
Share this post

ಕಾರವಾರ, ಡಿ 07, 2021: ತಾಲೂಕಿನ ಕಡವಾಡ ಗ್ರಾಮ ಪಂಚಾಯತಿಯಲ್ಲಿ ಮನೆ ಮನೆಗೆ ಉದ್ಯೋಗ ಖಾತ್ರಿ ಅಭಿಯಾನದ ಅಂಗವಾಗಿ ಪಂಚಾಯತಿ ವ್ಯಾಪ್ತಿಯ ವಿವಿಧ ವಾರ್ಡ್‍ಗಳಲ್ಲಿ ಗ್ರಾ.ಪಂ ಪಿಡಿಒ ನೇತೃತ್ವದಲ್ಲಿ ಐಇಸಿ ಸಂಯೊಜಕ ಹಾಗೂ ತಾಂತ್ರಿಕ ಸಹಾಯಕ ಅಭಿಯಂತರರು ಮಂಗಳವಾರ ಸಂಚರಿಸಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಲಭ್ಯವಿರುವ 260ಕ್ಕೂ ಅಧಿಕ ಕಾಮಗಾರಿಗಳ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪ್ರಭಾವತಿ ಬಂಟ್ ಅವರು ಮಾತನಾಡಿ 2022-23 ನೇ ಸಾಲಿನ ಕ್ರಿಯಾ ಯೋಜನೆ ತಯಾರಿಕೆ ಹಿನ್ನಲೆಯಲ್ಲಿ “ಮನೆ ಮನೆಗೆ ಉದ್ಯೋಗ ಖಾತ್ರಿ” ಎಂಬ ಅಭಿಯಾನವನ್ನು ಕೈಗೊಳ್ಳಲಾಗುತ್ತಿದೆ. ಅಭಿಯಾನದ ಅಂಗವಾಗಿ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಪ್ರತಿ ಮನೆ ಮನೆಗೆ ತೆರಳಿ ನರೇಗಾದಡಿ ಲಭ್ಯವಿರುವ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಬಗ್ಗೆ ತಿಳಿಸುತ್ತಿದ್ದಾರೆ. ಹೀಗಾಗಿ ಉದ್ಯೋಗ ಚೀಟಿ ಇಲ್ಲದವರು ಸೂಕ್ತ ದಾಖಲೆಗಳನ್ನು ಗ್ರಾಮ ಪಂಚಾಯತಿಗೆ ನೀಡಿ ಉದ್ಯೋಗ ಚೀಟಿ ಪಡೆದು ಕೂಲಿ ಕೆಲಸಕ್ಕಾಗಿ ಹಾಗೂ ಕಾಮಗಾರಿಗಳಿಗಾಗಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.

ತಾಲೂಕಾ ಐಇಸಿ ಸಂಯೋಜಕ ಫಕ್ಕೀರಪ್ಪ ತುಮ್ಮಣ್ಣನವರ ಮಾತನಾಡಿ ನರೇಗಾದಡಿ ಮಹಿಳೆಯರಿಗೂ ಪುರುಷರ ಸಮಾನ ಕೂಲಿ ನೀಡಲಾಗುತ್ತಿದೆ. ಅಲ್ಲದೇ ಕಾಮಗಾರಿ ಸ್ಥಳದಲ್ಲಿ ಕುಡಿಯಲು ನೀರು, ನೆರಳು, ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದ್ದು, ಇದರ ಸದುಪಯೋಗವನ್ನು ಜನರು ಪಡೆದುಕಿಳ್ಳಬೇಕು. ಬಚ್ಚಲು ಗುಂಡಿ, ಪೌಷ್ಟಿಕ ಕೈತೋಟ, ಶೌಚಾಲಯ, ಎರೆಹುಳು ಗೊಬ್ಬರ ತೊಟ್ಟಿ, ಕಿಚನ್ ಗಾರ್ಡನ್, ಕುರಿ, ಕೊಳಿ ಹಾಗೂ ದನದ ಶೆಡ್, ಮನೆ, ಘನ ಹಾಗೂ ದ್ರವತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಸೇರಿದಂತೆ ಸುಮಾರು 260ಕ್ಕೂ ಹೆಚ್ಚು ಕಾಮಗಾರಿಗಳು ನರೇಗಾದಲ್ಲಿ ಲಭ್ಯವಿದೆ. ಅಲ್ಲದೇ “ದೌರ್ಜನ್ಯದಿಂದ ಮುಕ್ತಿ” ಅಭಿಯಾನದಡಿ ನರೇಗಾ ಕಾಮಗಾರಿ ನಡೆಯುವ ಸ್ಥಳದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳ ಬಗ್ಗೆ ತಿಳಿಸಲಾಗುತ್ತಿದ್ದು ದೌರ್ಜನ್ಯದಂತಹ ಘಟನೆಗಳು ಸಂಭವಿಸಿದರೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಥವಾ ಅಂಗನವಾಡಿ ಕಾರ್ಯಕರ್ತೆಯರನ್ನ ಸಂಪರ್ಕಿಸಿ ಮಾಹಿತಿ ನೀಡಬಹುದು ಎಂದರು.

ಈ ವೇಳೆ ತಾಲೂಕು ಪಂಚಾಯತ್‍ನ ತಾಂತ್ರಿಕ ಸಹಾಯಕ ಅಭಿಯಂತರರಾದ ಚಂದ್ರು ಗೌಡ ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿ ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!