ಮಧುಮೇಹಕ್ಕೆ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯ: ಡಾ. ಕಿಶೋರ್

 ಮಧುಮೇಹಕ್ಕೆ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯ: ಡಾ. ಕಿಶೋರ್
Share this post

ಮಂಗಳೂರು, ನ 18, 2021: ಸೂಕ್ತ ಸಮಯದಲ್ಲಿ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಮಧುಮೇಹದ ಇರುವಿಕೆಯನ್ನು ಕಂಡುಕೊಳ್ಳಬಹುದಾಗಿದೆ ಹಾಗೂ ಚಿಕಿತ್ಸೆ, ಪೂರಕ ಆಹಾರ ಪದ್ದತಿಯನ್ನು ಅನುಸರಿಸುವ ಮೂಲಕ ಗುಣಪಡಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ಅಭಿಪ್ರಾಯಪಟ್ಟರು.

ಅವರು ಗುರುವಾರ ಚಿಲಿಂಬಿಯ ಆದರ್ಶ ನಗರದ ಆದರ್ಶ್ ಫ್ರೆಂಡ್ಸ್ ಅಸೋಸಿಯೇಷನ್‍ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಆದರ್ಶ್ ಫ್ರೆಂಡ್ಸ್ ಅಸೋಸಿಯೇಷನ್ ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಧುಮೇಹ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಮಧುಮೇಹವನ್ನು ತಡೆಗಟ್ಟಲು ವ್ಯಾಯಾಮ ಅತ್ಯುತ್ತಮ ಮಾರ್ಗವಾಗಿದೆ, ಪ್ರತಿನಿತ್ಯ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಬೇಕು, ಈ ರೋಗದ ಇರುವಿಕೆಯ ಬಗ್ಗೆ ತಿಳಿದ ನಂತರ ಗಾಬರಿ ಪಡುವ ಅಗತ್ಯವಿಲ್ಲ, ಸೂಕ್ತ ಚಿಕಿತ್ಸೆ ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿದೆ, ಉತ್ತಮ ಆಹಾರ ಪದ್ದತಿಯನ್ನು ರೂಢಿಸಿಕೊಂಡು ಈ ರೋಗವನ್ನು ಹೊಡೆದೊಡಿಸಬಹುದು ಎಂದು ಅವರು ಹೇಳಿದರು.  

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಎ.ಜೆ. ಆಸ್ಪತ್ರೆಯ ತಜ್ಞ ವೈದ್ಯ ಡಾ. ಇ.ವಿ. ಸುರಂಜನ್ ಮಾಬಿನ್ ಮಾತನಾಡಿ ಅನಿಯಮಿತ ಆಹಾರ ಸೇವನೆ, ನೈಸರ್ಗಿಕ ಆಹಾರದ ಬದಲು ಜಂಕ್‍ಫುಡ್‍ಗಳ ಬಗ್ಗೆ ಆಕರ್ಷಣೆ, ವ್ಯಾಯಾಮ ಇಲ್ಲದ ಆಶಿಸ್ತಿನ ಜೀವನ ಶೈಲಿ ಮಧುಮೇಹಕ್ಕೆ ಕಾರಣ, ಇತ್ತೀಚಿಗೆ ಈ ರೋಗವು ಹೆಚ್ಚಿನ ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಜಾಗೃತಿ ಮೂಡಿಬೇಕಿದೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ಜಗದೀಶ್ 30 ವರ್ಷ ಮೇಲ್ಪಟ್ಟ ಎಲ್ಲರಿಗೆ ಎನ್.ಸಿ.ಡಿ ಕ್ಲಿನಿಕ್‍ಗಳಲ್ಲಿ ಎಲ್ಲಾ ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಂದೋಲನದ ರೀತಿಯಲ್ಲಿ ಮಧುಮೇಹ ತಪಾಸಣೆ ಕೈಗೊಳ್ಳಬೇಕು ಹಾಗೂ ವ್ಯಾಪಕ ಪ್ರಚಾರ ಹಮ್ಮಿಕೊಂಡು ಜನಜಾಗೃತಿ ಮೂಡಿಸಬೇಕು ಎಂದು ಹೇಳಿದರು.  

ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್ ಮಾತನಾಡಿದರು.

ಜಿಲ್ಲಾ ಕಾರ್ಯಕ್ರಮ ಸಂಯೋಜಕ ಡಾ. ಸಬಾ ಶರಾಫ್, ವೈದ್ಯಾಧಿಕಾರಿ ಡಾ. ಜಯಶ್ರೀ, ಸಾಮಾಜಿಕ ಕಾರ್ಯಕರ್ತೆ ಮಂಜುಳಾ ನಾಯಕ್, ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್‍ನ  ಅರ್ಜುನ್ ಭಂಡಾರ್ಕರ್, ಆದರ್ಶ್ ಫ್ರೆಂಡ್ಸ್ ಅಸೋಸಿಯೇಷನ್ ಅಧ್ಯಕ್ಷ ಕಿಶೋರ್ ಕೋಟ್ಯಾನ್, ಕಾರ್ಯದರ್ಶಿ ಶೋಭಾ ಅಶೋಕ್, ಮಹಿಳಾ ಸ್ವಸಹಾಯ ಸಂಘಗಳ ಸಂಯೋಜಕಿ ಅಜಿತ ವಸಂತ್ ಮುಂತಾದವರು ಉಪಸ್ಥಿತರಿದ್ದರು.

ಎನ್.ಟಿ.ಸಿ.ಪಿ ಸಂಯೋಜಕ ಹನುಮಂತಪ್ಪ ಸ್ವಾಗತಿಸಿದರು, ರಾಜೇಂದ್ರ ಚಿಲಿಂಬಿ ವಂದಿಸಿದರು, ಜಿಲ್ಲಾ ಆರೋಗ್ಯ ಶಿಕ್ಷಾಣಾಧಿಕಾರಿ ಜ್ಯೋತಿ. ಕೆ. ಕಾರ್ಯಕ್ರಮ ನಿರೂಪಿಸಿದರು.

Subscribe to our newsletter!

Other related posts

error: Content is protected !!