ಗಡಿ ಭಾಗದ ಕನ್ನಡಿಗರ ಏಳಿಗೆಗೆ ಯತ್ನ: ಡಾ. ಸೋಮಶೇಖರ್
ಮಂಗಳೂರು, ನ 10, 2021: ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿಭಾಗಗಳು ಹಾಗೂ ಹೊರ ರಾಜ್ಯದಲ್ಲಿ ವಾಸಿಸುತ್ತಿರುವ ಕನ್ನಡಿಗರ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಹಾಗೂ ಆರ್ಥಿಕ ಏಳಿಗೆಗೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್ ತಿಳಿಸಿದರು.
ಅವರು ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಾಧಿಕಾರಕ್ಕೆ ಕಾನೂನುಬದ್ಧ ಅಧಿಕಾರ ಹಾಗೂ ಶಕ್ತಿಯಿದೆ, ರಾಜ್ಯದೆಲ್ಲೆಡೆಯ ಗಡಿ ಭಾಗಗಳಲ್ಲಿ ವಾಸಿಸುತ್ತಿರುವ ಗಡಿಭಾಗದ ಕನ್ನಡಿಗರಿಗೆ ಹಾಗೂ ಹೊರ ರಾಜ್ಯಗಳಲ್ಲಿ ವಾಸಿಸುತ್ತಿರುವ ಕನ್ನಡಿಗರಿಗೆ ಕುಡಿಯುವ ನೀರು, ಆರೋಗ್ಯ, ನೀರಾವರಿ, ರಸ್ತೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿರುವ ಬಗ್ಗೆ ಪ್ರಾಧಿಕಾರದಿಂದ ಪರಿಶೀಲಿಸಲಾಗುತ್ತದೆ. ಅದರಂತೆ ಪ್ರಾಧಿಕಾರದಿಂದ ವಿವಿಧ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನೀಡಲಾದ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದರು.
2010ರಿಂದ ಗಡಿ ಭಾಗಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಧಿಕಾರದಿಂದ ಹಣ ಬಿಡುಗಡೆ ಮಾಡಲಾಗುತ್ತಿದೆ. ಪ್ರಸಕ್ತ ಸಾಲಿನಿಂದ ಜಿಲ್ಲಾಧಿಕಾರಿಯವರ ಮೂಲಕ ಆ ಹಣ ಬಿಡುಗಡೆಗೆ ಕ್ರಮಕೈಗೊಳ್ಳಲಾಗಿದೆ ಎಂದ ಪ್ರಾಧಿಕಾರದ ಅಧ್ಯಕ್ಷರು ಗಡಿಭಾಗದ ಗ್ರಾಮೀಣ ಶಾಲೆಗಳಲ್ಲಿ ಶೌಚಾಲಯ, ಕಾಂಪೌಂಡ್, ಗ್ರಂಥಾಲಯ ಸೇರಿದಂತೆ ಇತರೆ ಅಗತ್ಯವಿರುವ ಸೌಕರ್ಯ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಲ್ಲೇ ಸ್ವಾಮಿ ಅವರಿಗೆ ಸೂಚಿಸಿದರು.
ಸಹಾಯಕ ಆಯುಕ್ತರು, ತಹಶೀಲ್ದಾರರು, ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಗಡಿಭಾಗದ ಗ್ರಾಮಗಳಿಗೆ ತಿಂಗಳಿಗೆ ಒಮ್ಮೆಯಾದರೂ ಕಡ್ಡಾಯವಾಗಿ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಅರಿಯಬೇಕು. ಗ್ರಾಮಮಟ್ಟದಲ್ಲಿ ಬಗ್ಗೆ ಹರಿಸಬಹುದಾದ ಸಮಸ್ಯೆಗಳಿದ್ದಲ್ಲೀ ಅವುಗಳನ್ನು ಸ್ಥಳದಲ್ಲಿಯೇ ಪರಿಹರಿಸಬೇಕು. ಆ ಗ್ರಾಮಗಳಲ್ಲಿ ರಸ್ತೆಗಳು, ಶಾಲೆಗಳು, ಅಂಗನವಾಡಿಗಳು, ಆರೋಗ್ಯ ಕೇಂದ್ರಗಳು, ಪಶುವೈದ್ಯ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ನೈಜ ಚಿತ್ರಣವನ್ನು ಜಿಲ್ಲಾಧಿಕಾರಿಗಳಿಗೆ ವರದಿ ಮಾಡಬೇಕು ಎಂದು ಹೇಳಿದರು.
ಪಕ್ಕದ ಕಾಸರಗೋಡಿನಲ್ಲಿ ಆರ್ ಟಿಸಿ, ಜಾತಿ ಪ್ರಮಾಣ ಪತ್ರ ಸೇರಿದಂತೆ ಅಲ್ಲಿನ ಕನ್ನಡಿಗರಿಗೆ ಅಗತ್ಯವಿರುವ ಪ್ರಮಾಣ ಪತ್ರಗಳನ್ನು ಕನ್ನಡ ಭಾಷೆಯಲ್ಲಿಯೇ ಮುದ್ರಿಸಿ, ಅವರಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು. ಗಡಿಭಾಗದಲ್ಲಿ ಸಾಂಸ್ಕøತಿಕ ಭವನಗಳ ಅಗತ್ಯವಿದ್ದರೆ ಸರ್ವೆ ಮಾಡಿ ವರದಿ ನೀಡಬೇಕು. ಮಹಿಳಾ ಸಬಲೀಕರಣಕ್ಕೆ ಯೋಜನೆಗಳಿದ್ದರೆ ಅವುಗಳ ಬಗ್ಗೆ ಹಾಗೂ ಯುವಕ ಮತ್ತು ಯುವತಿಯರು ಕೌಶಲ್ಯಾಭಿವೃದ್ಧಿಗೆ ಅಗತ್ಯವಿರುವ ಕಾರ್ಯಕ್ರಮಗಳಿದ್ದರೆ ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು.
ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವ ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ಪ್ರತಿ ಸ್ಮಾರ್ಟ್ ಕ್ಲಾಸ್ಗಳಿಗಾಗಿ ಒಂದು ಲಕ್ಷ ರೂ.ಗಳ ಅನುದಾನ ನೀಡಲಾಗುತ್ತಿದೆ. ಕಾಸರಗೋಡಿನಲ್ಲಿರುವ ಕನ್ನಡ ಶಾಲೆಗಳ ಸ್ಮಾಟ್ಕ್ಲಾಸ್ಗಾಗಿ ಅನುದಾನ ನೀಡಲು ಸಿದ್ದವಿದ್ದು, 4-5 ಶಾಲೆಗಳ ಪಟ್ಟಿ ನೀಡುವಂತೆ ಅವರು ತಿಳಿಸಿದರು.
ಗಡಿ ಭಾಗಗಳಲ್ಲಿ ಅಕಾಡೆಮಿಯಿಂದ ಕೈಗೊಳ್ಳಲಾದ ವಿವಿಧ ಅಭಿವೃದ್ದಿ ಕಾಮಗಾರಿಗಳ ಬಗ್ಗೆ ಹಾಗೂ ಅನುದಾನ ಬಳಕೆ ಪ್ರಮಾಣ ಪತ್ರವನ್ನು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಪ್ರಾಧಿಕಾರಕ್ಕೆ ಸಲ್ಲಿಸುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ, ಅಪರ ಜಿಲ್ಲಾಧಿಕಾರಿ ಮಾಣಿಕ್ಯ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್, ಸಹಾಯಕ ಆಯುಕ್ತ ಮದನ್ ಮೋಹನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್, ಮಂಗಳೂರು, ಬಂಟ್ವಾಳ, ಪುತ್ತೂರು ಹಾಗೂ ಸುಳ್ಯ ತಹಶೀಲ್ದಾರರು ಹಾಗೂ ಸಂಬಂಧಿಸಿದ ಇತರೆ ಅಧಿಕಾರಿಗಳು ಸಭೆಯಲ್ಲಿದ್ದರು.