ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಯುವ ಮತದಾರರ ಸೇರ್ಪಡೆಗೆ ಅಭಿಯಾನ

 ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಯುವ ಮತದಾರರ ಸೇರ್ಪಡೆಗೆ ಅಭಿಯಾನ
Share this post

ಉಡುಪಿ, ನ 09, 2021: ಜನವರಿ 1 2022 ನ್ನು ಅರ್ಹತಾ ದಿನವನ್ನಾಗಿಟ್ಟುಕೊಂಡು ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಡೆಸಲಾಗುತ್ತಿದ್ದು, ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಜಿಲ್ಲೆಯ ಎಲ್ಲಾ ಕಾಲೇಜುಗಳ ಮೂಲಕ ಅಭಿಯಾನ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.

ಅವರು ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಚುನಾವಣಾ ಆಯೋಗದ ನಿರ್ದೇಶನದಂತೆ, ಜಿಲ್ಲೆಯ ಪ್ರಸಕ್ತ ಜನಸಂಖ್ಯೆಗೆ ಅನುಗುಣವಾಗಿ 27,000 ಯುವ ಮತದಾರರ ನೋಂದಣಿ ಆಗಬೇಕಿದ್ದು, ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂದರ್ಭದಲ್ಲಿ 18 ವರ್ಷ ತುಂಬಿದ ಯುವಕ/ಯುವತಿಯರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಕಾರ್ಯಕ್ರಮ ರೂಪಿಸಲಾಗುವುದು. ಯುವ  ಜನತೆ ತಾವು ವಾಸವಿರುವ ವಿಳಾಸದ ವ್ಯಾಪ್ತಿಗೆ ಬರುವ ಬಿ.ಎಲ್.ಓ ಗಳನ್ನು ಭೇಟಿ ಮಾಡಿ ಅರ್ಜಿಗಳನ್ನು  ಸಲ್ಲಿಸಬಹುದು ಅಥವಾ ಆನ್‌ಲೈನ್ ವೆಬ್ ಪೋರ್ಟಲ್ www.nvsp.in ಮೂಲಕ ಸಹ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗಳನ್ನು ಮಾಡಲು ಅವಕಾಶಗಳಿದ್ದು ಈ ಸೌಲಭ್ಯದ ಸದುಪಯೋಗ ಪಡೆದು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳ್ಳುವಂತೆ  ತಿಳಿಸಿದರು.

ಜಿಲ್ಲೆಯಲ್ಲಿ ಈಗಾಗಲೇ ನವೆಂಬರ್ 8 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ನವೆಂಬರ್ 8 ರಿಂದ ಡಿಸೆಂಬರ್ 8 ರ ವರೆಗೆ ಕರಡು ಮತದಾರರ ಪಟ್ಟಿಗೆ ಹಕ್ಕು ಮತ್ತು ಆಕ್ಷೇಪಣೆಯನ್ನು ಸಲ್ಲಿಸಬಹುದಾಗಿದ್ದು, ನವೆಂಬರ್ 7, 14, 21 ಮತ್ತು 28 ರಂದು ವಿಶೇಷ ನೊಂದಣಿ ಕಾರ್ಯಕ್ರಮ ನಡೆಯಲಿದ್ದು, ಈ ಅವಧಿಯಲ್ಲಿ ಎಲ್ಲಾ ಬಿ.ಎಲ್.ಓ ಗಳು ಬೆಳಗ್ಗೆ 10 ರಿಂದ 5 ಗಂಟೆಯವರೆಗೆ ಮತಗಟ್ಟೆಯಲ್ಲಿ ಹಾಜರಿರುತ್ತಾರೆ. ಡಿಸೆಂಬರ್ 27 ರಂದು ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ಹಾಗೂ 13-1-2022 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದರು.

ನಮೂನೆ- 6 ರಲ್ಲಿ 18 ವರ್ಷ ಪೂರೈಸಿದ ಹೊಸ ಮತದಾರರು ಹಾಗೂ ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೊಂದೆಡೆ ವಾಸಸ್ಥಳ ಬದಲಾಯಿಸುವವರು, ವಿದೇಶದಲ್ಲಿ ವಾಸಿಸುವವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು  ನಮೂನೆ – 60 ರಲ್ಲಿ ಅನಿವಾಸಿ ಭಾರತೀಯರು ಮತದಾರರ ಪಟ್ಟಿಗೆ  ತಮ್ಮ ಹೆಸರು ಸೇರ್ಪಡೆ ಮಾಡಲು, ನಮೂನೆ – 7 ರಲ್ಲಿ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು, ನಮೂನೆ–8 ರಲ್ಲಿ ಹೆಸರು, ತಂದೆಯ ಹೆಸರು, ಮನೆ ವಿಳಾಸ, ವಯಸ್ಸಿಗೆ ಹಾಗೂ ಭಾವಚಿತ್ರಕ್ಕೆ ಸಂಬಂಧಿಸಿದಂತೆ ದೋಷಗಳಿದ್ದರೆ ಹಾಗೂ ನಮೂನೆ–80 ರಲ್ಲಿ ಒಂದು ವಿಧಾನಸಭಾ ಕ್ಷೇತ್ರದೊಳಗೆ ವಾಸಸ್ಥಳ ಬದಲಾಯಿಸಿದ ಸಂದರ್ಭದಲ್ಲಿ ಅರ್ಜಿ ಸಲ್ಲಿಸಬೇಕು.

ಅಲ್ಲದೇ ಸಾರ್ವಜನಿಕರು ತಾಲೂಕು ಕಛೇರಿ ಉಡುಪಿ, ಕಾಪು, ಕಾರ್ಕಳ, ಕುಂದಾಪುರ, ಬೈಂದೂರು, ಬ್ರಹ್ಮಾವರ, ಹೆಬ್ರಿ ಇಲ್ಲಿಗೆ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಸಬಹುದು ಎಂದರು.

ಪ್ರಸ್ತುತ ಪ್ರಕಟಿಸಲಾಗಿರುವ ಕರಡು ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ, 4,92,400 ಪುರುಷ, 5,28,777 ಮಹಿಳೆ, 11 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 10,21,188 ಮತದಾರರರಿದ್ದಾರೆ ಎಂದರು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!