ಉಡುಪಿ ಜಿಲ್ಲೆಯ ಪ್ರವಾಸಿ ಕ್ಷೇತ್ರಗಳ ವರ್ಚುವಲ್ 3 ಡಿ: ಕೂರ್ಮಾರಾವ್

 ಉಡುಪಿ ಜಿಲ್ಲೆಯ ಪ್ರವಾಸಿ ಕ್ಷೇತ್ರಗಳ ವರ್ಚುವಲ್ 3 ಡಿ: ಕೂರ್ಮಾರಾವ್
Share this post

ಉಡುಪಿ, ಅ 24, 2021: ಉಡುಪಿ ಜಿಲ್ಲೆಯಲ್ಲಿನ ಎಲ್ಲಾ ಪ್ರವಾಸಿ ಕ್ಷೇತ್ರಗಳನ್ನು, ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಒಂದೇ ವೇದಿಕೆಯಲ್ಲಿ ಕಾಣುವಂತಹ ವರ್ಚುವಲ್ 3 ಡಿ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದರು. 

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‌ನಲ್ಲಿ ನಡೆದ, ಜಿಲ್ಲಾ ಪ್ರವಾಸೋದ್ಯಮ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉಡುಪಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಜಿಲ್ಲೆಯ ಪ್ರಮುಖ ಒಂದೆರಡು ಪ್ರವಾಸಿ ಕ್ಷೇತ್ರಗಳನ್ನು ಮಾತ್ರ ವೀಕ್ಷಣೆ ಮಾಡಿ ತೆರಳುತ್ತಿದ್ದು, ಅವರಿಗೆ ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳು ನೈಜ ಚಿತ್ರಣ ತೋರುವಂತಹ ವರ್ಚುವಲ್ 3 ಡಿ ಯೋಜನೆಯನ್ನು ಯಾವುದಾದರೂ ಒಂದು ಪ್ರಮುಖ ಸ್ಥಳದಲ್ಲಿ ನಿರ್ಮಿಸುವುದರಿಂದ, ಎಲ್ಲಾ ತಾಣಗಳನ್ನು ಚಿತ್ರಣ ಅವರಿಗೆ ದೊರೆಯಲಿದ್ದು , ಈ ತಾಣಗಳಿಗೂ ಪ್ರವಾಸಿಗರು ಭೇಟಿ ನೀಡಲು ಸಾಧ್ಯವಾಗಲಿದೆ ಎಂದರು.

ಜಿಲ್ಲೆಯಲ್ಲಿ ಅಭಿವೃದ್ದಿಪಡಿಸಬಹುದಾದ ಇನ್ನೂ ಹಲವು ಪ್ರವಾಸಿ ತಾಣಗಳಿದ್ದು, ಇವುಗಳನ್ನು ಸಮಗ್ರವಾಗಿ ಅಭಿವೃಧ್ದಿಪಡಿಸಲು ವಿವಿಧ ಸಂಸ್ಥೆಗಳಿಂದ ವರದಿ ಪಡೆಯಲು ಎಕ್ಸ್ಪ್ರೆಷನ್ ಆಫ್ ಇಂಟರೆಸ್ಟ್ ಕರೆದು, ವರದಿಯೊಂದಿಗೆ ಸೂಕ್ತ ಪ್ರಸ್ತಾವನೆಯನ್ನು ಪ್ರವಾಸೋದ್ಯಮ ಇಲಾಖೆಗೆ ಸಲ್ಲಿಸುವಂತೆ ತಿಳಿಸಿದರು.

ಕಾಪು ಲೈಟ್ ಹೌಸ್ ಬಳಿ ಬಂದರು ಇಲಾಖೆಗೆ ಸೇರಿದ 3 ಎಕ್ರೆ ಜಾಗವಿದ್ದು, ಇದರಲ್ಲಿ ಅಕ್ವೇರಿಯಂ ಸೇರಿದಂತೆ ವಿವಿಧ ವೈವಿಧ್ಯಮಯ ಚಟುವಟಿಕೆಗಳನ್ನು ಕೈಗೊಳ್ಳಲು ಅವಕಾಶಗಳಿದ್ದು ಈ ಜಾಗವನ್ನು ಪ್ರವಾಸೋದ್ಯಮ ಇಲಾಖೆಗೆ ಪಡೆಯಲು ಪ್ರಸ್ತಾವನೆ ಸಲ್ಲಿಸಬೇಕು. ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿನ ಹೊಸ ಪ್ರವಾಸೋದ್ಯಮ ಯೋಜನೆಗಳನ್ನು ಗುರುತಿಸಿ ಸಮೀಕ್ಷೆ ನಡೆಸಿ, ಅದರ ಬ್ಲೂ ಪ್ರಿಂಟ್ ಸಿದ್ದಪಡಿಸಿ, ಅಭಿವೃದ್ಧಿಗೊಳಿಸಬೇಕು. ಪ್ರವಾಸಿ ಸ್ಥಳಗಳ ಮಾಹಿತಿ ಮತ್ತು ಐತಿಹಾಸಿಕ ಹಿನ್ನಲೆಯನ್ನು ಪ್ರವಾಸಿಗರಿಗೆ ತಿಳಿಸಲು ಪ್ರವಾಸಿ ಗೈಡ್ ಗಳನ್ನು ತರಬೇತುಗೊಳಿಸಬೇಕು ಎಂದರು.

ಜಿಲ್ಲೆಯಲ್ಲಿ ಕಯಾಕಿಂಗ್ ಜಲ ಸಾಹಸ ಕ್ರೀಡೆ ನಡೆಸಲು ಅರ್ಜಿ ಸಲ್ಲಿಸುವವರು , ಈ ಕ್ರೀಡೆಯಲ್ಲಿ ಪರಿಣಿತಿ ಹೊಂದಿರುವುದು ಕುರಿತು ಸೇರಿದಂತೆ ನಿಯಮಾನುಸಾರ ಎಲ್ಲಾ ಅರ್ಹತೆಗಳನ್ನು ಹೊಂದಿದ್ದರೆ, ಗರಿಷ್ಠ ಸುರಕ್ಷಾ ಸಾಧನಗಳನ್ನು ಬಳಸಿಕೊಂಡು ಕಯಾಕಿಂಗ್ ನಡೆಸಲು ಅನುಮತಿ ನೀಡಬೇಕು. ಹೌಸ್ ಬೋಟಿಂಗ್ ನಿರಂತರವಾಗಿ ನಡೆಸಲು ಅಡ್ಡಿಯಾಗಿರುವ ಮರಳು ದಿಬ್ಬಗಳು ತೆರವುಗೊಳಿಸಲು ಈ ಭಾಗದಲ್ಲಿ ಡ್ರಜ್ಜಿಂಗ್ ನಡೆಸಲು ಪ್ರಸ್ತಾವನೆಯನ್ನು ಸಲ್ಲಿಸಿ, ಪ್ರವಾಸೋದ್ಯಮ ಚಟುವಟಿಕೆಗಳಿಗೆ ಸಿ.ಆರ್.ಝಡ್ ನಿಯಮಗಳು ಅಡಚಣೆಯಾಗಿದ್ದಲ್ಲಿ ಅಂತಹ ಪ್ರಕರಣಗಳ ಬಗ್ಗೆ ಜಿಲ್ಲಾ ಸಿಆರ್‌ಝಡ್ ಸಮಿತಿ ಸಭೆಯ ಗಮನಕ್ಕೆ ತರಬೇಕು ಹಾಗೂ ತಾಂತ್ರಿಕ ಸಮಸ್ಯೆಗಳು ಮತ್ತು ಇತರೆ ಸಣ್ಣಪುಟ್ಟ ಸಮಸ್ಯೆಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಉಪ ಸಮಿತಿಯನ್ನು ರಚಿಸಬೇಕು ಎಂದರು.

ಪ್ರವಾಸೋದ್ಯಮ ಇಲಾಖೆಯ ಮೂಲಕ ವಿವಿಧ ಅನುಷ್ಠಾನ ಸಂಸ್ಥೆಗಳಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕ್ಲಿಫರ್ಡ್ ಲೋಬೋ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಪ್ರವಾಸೋದ್ಯಮ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!