ಭತ್ತ ಖರೀದಿ ಕೇಂದ್ರ ತೆರೆಯಲು ಪ್ರಸ್ತಾವನೆ ಸಲ್ಲಿಸಿ: ಜಿಲ್ಲಾಧಿಕಾರಿ
ಉಡುಪಿ, ಅ 23, 2021: ಜಿಲ್ಲೆಯಲ್ಲಿ ಭತ್ತದ ಕಟಾವು ಆರಂಭಗೊಳ್ಳುತ್ತಿದ್ದು, ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಲ್ಲಿ , ಉಡುಪಿ,ಕಾರ್ಕಳ ಮತ್ತು ಕುಂದಾಪುರದಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯುವ ಕುರಿತಂತೆ ತಕ್ಷಣ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದರು.
ಅವರು ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ನಲ್ಲಿ ನಡೆದ, ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಸಾಮಾನ್ಯ ಭತ್ತಕ್ಕೆ ಪ್ರತೀ ಕ್ವಿಂಟಾಲ್ ಗೆ ರೂ.1,940 ಮತ್ತು ಗ್ರೇಡ್ ಎ ಭತ್ತಕ್ಕೆ ರೂ. 1960 ದರ ನಿಗದಿಪಡಿಸಿದ್ದು, ಜಿಲ್ಲೆಯ ರೈತರಿಂದ ಭತ್ತ ಖರೀದಿಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಭತ್ತ ಖರೀದಿ ಕೇಂದ್ರಗಳಿಗೆ ಗ್ರೇಡರ್ ಗಳನ್ನು ನೇಮಿಸುವಂತೆ ಮತ್ತು ಗೋದಾಮು ಗಳನ್ನು ಸಿದ್ದಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈಗಾಗಲೇ ಜಿಲ್ಲೆಯ 20 ಅಕ್ಕಿ ಮಿಲ್ಲುಗಳ ಮಾಲೀಕರು ಭತ್ತವನ್ನು ಹಲ್ಲಿಂಗ್ ಮಾಡಿಕೊಡಲು ಒಪ್ಪಿದ್ದು, ಜಿಲ್ಲೆಯ ರೈತರು ಬೆಳೆದ ಎಫ್.ಎ.ಕ್ಯೂ ಮಾದರಿಯ ಎಂ ಓ 04, ಜಯ, ಕಜೆ ಜಯ, ಜ್ಯೋತಿ ಬತ್ತದ ತಳಿಗಳನ್ನು ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಸಿ, ಸಾರ್ವಜನಿಕ ವಿತರಣಾ ಪದ್ದತಿಯಲ್ಲಿ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಕೃಷಿ, ತೋಟಗಾರಿಕೆ, ಸಹಕಾರ ಇಲಾಖೆ ಮತ್ತು ಕೃಷಿ ಮಾರಾಟ ಇಲಾಖೆ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.