ಉಡುಪಿ: ಭತ್ತ ಕಟಾವು ಯಂತ್ರ ದರ ನಿಗದಿ

 ಉಡುಪಿ: ಭತ್ತ ಕಟಾವು ಯಂತ್ರ ದರ ನಿಗದಿ
Share this post

ಉಡುಪಿ, ಅ 18, 2021: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಭತ್ತದ ಕಟಾವು ಸನ್ನಿಹಿತವಾಗಿದ್ದು, ಹೊರಜಿಲ್ಲೆ ಹಾಗೂ ರಾಜ್ಯಗಳಿಂದ ಕಂಬೈನ್ಡ್ ಹಾರ್ವೆಸ್ಟರ್‌ಗಳು ಜಿಲ್ಲೆಗೆ ಆಗಮಿಸುತ್ತಿವೆ.

ಜಿಲ್ಲೆಯಲ್ಲಿ ಕೂಲಿಯಾಳುಗಳ ಸಮಸ್ಯೆಯಿದ್ದು, ಕಟಾವಿನ ಅವಧಿಯಲ್ಲಿ ಮಳೆ ಸಹ ಬರುವುದರಿಂದ ರೈತರು ಭತ್ತದ ಬೆಳೆ ಕಟಾವಿಗೆ ಅನಿವಾರ್ಯವಾಗಿ ಕಂಬೈನ್ಡ್ ಹಾರ್ವೆಸ್ಟರ್‌ಗಳನ್ನು ಅವಲಂಬಿಸಿರುತ್ತಾರೆ. ಈ ಸನ್ನಿವೇಶದ ಪ್ರಯೋಜನ ಪಡೆದು ಕೆಲವೊಂದು ಖಾಸಗಿ ಕಂಬೈನ್ಡ್ ಹಾರ್ವೆಸ್ಟರ್ ಮಾಲಕರು ಸ್ಥಳೀಯ ಮಧ್ಯವರ್ತಿಗಳೊಂದಿಗೆ ಸೇರಿ ರೈತರಿಂದ ಭತ್ತ ಕಟಾವಿಗೆ ಹೆಚ್ಚಿನ ಬಾಡಿಗೆ ದರವನ್ನು ಪಡೆಯುತ್ತಿರುವ ಬಗ್ಗೆ ರೈತ ಸಂಘಟನೆಗಳು ಹಾಗೂ ರೈತರಿಂದ ನಿರಂತರವಾಗಿ ಜಿಲ್ಲಾಡಳಿತಕ್ಕೆ ದೂರುಗಳು ಬರುತ್ತಿವೆ.

ಜಿಲ್ಲೆಯಲ್ಲಿ ಸರ್ಕಾರದ ನೆರವಿನೊಂದಿಗೆ ಸ್ಥಾಪಿಸಲ್ಪಟ್ಟ ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ಲಭ್ಯವಿರುವ ಕರ್ತಾರ್ ಮಾದರಿ ಕಂಬೈನ್ಡ್ ಹಾರ್ವೆಸ್ಟರ್‌ನ ಕಟಾವಿಗೆ ಜಿಲ್ಲಾ ಸಮಿತಿಯಿಂದ ಪ್ರತಿ ಗಂಟೆಗೆ ರೂ. 1800 ಬಾಡಿಗೆ ದರವನ್ನು ನಿಗದಿಪಡಿಸಲಾಗಿದೆ.

ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ಕೇವಲ 8 ಸಂಖ್ಯೆಯ ಕಟಾವು ಯಂತ್ರಗಳು ಮಾತ್ರ ಲಭ್ಯವಿದ್ದು, ಜಿಲ್ಲೆಯ ರೈತರ ಬೇಡಿಕೆಯನ್ನು ಪೂರೈಸಲು ಖಾಸಗಿಯಾಗಿ ಬರುವ ಕಟಾವು ಯಂತ್ರಗಳ ಅವಶ್ಯಕತೆಯಿರುತ್ತದೆ.

ಖಾಸಗಿ ಕಟಾವುಯಂತ್ರ ಮಾಲಕರು ರೈತರ ಹಿತದೃಷ್ಟಿಯನ್ನು ಗಮನದಲ್ಲಿರಿಸಿ, ಕಾರ್ಯ ನಿರ್ವಹಿಸಬೇಕಾಗಿದ್ದು, ಕೃಷಿ ಯಂತ್ರಧಾರೆ ಕೇಂದ್ರದ ಬಾಡಿಗೆ ದರವನ್ನು ಮಾನದಂಡವಾಗಿಟ್ಟುಕೊಂಡು ರೈತರೊಂದಿಗೆ ಕಟಾವುದರದ ಬಗ್ಗೆ ಸ್ಥಳೀಯವಾಗಿ ಚರ್ಚಿಸಿ, ನ್ಯಾಯೋಚಿತ ದರದಲ್ಲಿ ರೈತರಿಗೆ ಹೆಚ್ಚಿನ ಹೊರೆಯಾಗದ ಧಾರಣೆಯನ್ನು ನಿಗದಿಪಡಿಸಿಕೊಂಡು ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಭತ್ತದ ಕಟಾವು ಕಾರ್ಯವನ್ನು ಜಿಲ್ಲೆಯಲ್ಲಿ ಕೈಗೊಳ್ಳುವಂತೆ ಖಾಸಗಿ ಯಂತ್ರ ಮಾಲಕರು ಹಾಗೂ ರೈತರಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದ್ದಾರೆ.

Subscribe to our newsletter!

Other related posts

error: Content is protected !!