ಪಣಿಯಾಡಿ ದೇವಸ್ಥಾನದಲ್ಲಿ ಸಂಭ್ರಮದ ಶ್ರೀ ಮಧ್ವ ಜಯಂತಿ ಮಹೋತ್ಸವ

 ಪಣಿಯಾಡಿ ದೇವಸ್ಥಾನದಲ್ಲಿ ಸಂಭ್ರಮದ ಶ್ರೀ ಮಧ್ವ ಜಯಂತಿ ಮಹೋತ್ಸವ
Share this post

ವಿಜಯದಶಮಿ ಆಚಾರ್ಯ ಮಧ್ವರು ಭೂಮಿಯಲ್ಲಿ ಅವತರಿಸಿದ ಸಂತಸದ ಪರ್ವದಿನ. 12 ವರ್ಷಗಳ ಕಾಲ ಶ್ರೀಮದನಂತೇಶ್ವರ ಸ್ವಾಮಿಯ ಸತತ ದರ್ಶನ ಉಪಾಸನೆಯ ಫಲವಾಗಿ ಮಧ್ಯಗೇಹ ಭಟ್ಟ (ನಡಿಲ್ಲಾಯ) ದಂಪತಿಗಳಿಗೆ ಒಂದು ಗಂಡುಮಗು ಜನ್ಮಿಸಿ ಮನೆತುಂಬಿತು.

ಆ ಮಗು ತನ್ನ ಚಿಕ್ಕಪ್ರಾಯದಲ್ಲೇ ಅನೇಕ ಪವಾಡಗಳನ್ನು ಪ್ರದರ್ಶಿಸಿದ ವಿಷಯ ತಿಳಿಯದವರಿಲ್ಲ. ಹುಣಸೆ ಬೀಜದಿಂದ ತಂದೆಯ ಸಾಲ ತೀರಿಸಿದ, ಎತ್ತಿನ ಬಾಲ ಹಿಡಿದು ಊರು ಸುತ್ತಿದಂತಹ ಕಥೆಗಳು ಹಲವಾರು. ಹಾಗಾಗಿ ಜ್ಞಾನಕೋಶವಾದ ಇವರು ಹಲವಾರು ಶ್ರೇಷ್ಟ ವಿದ್ವಾಂಸರನ್ನೇ ವಾದದಲ್ಲಿ ಸೋಲಿಸಿದವರು. ಇಂತಹ ಶ್ರೇಷ್ಟ ಆಚಾರ್ಯ ಮಹಾಪುರುಷ ಜಟ್ಟಿಯು , ಶಿಲ್ಪಿ ಯೂ, ಒಳ್ಳೆಯ ವೀಣಾ ವಾದಕನೂ, ಸಂಗೀತಗಾರನೂ ಆಗಿದ್ದು ಸಕಲಕಲಾವಲ್ಲಭನಾಗಿದ್ದ ಇವರು ಹಿಂದಿನ ತ್ರೇತಾಯುಗದಲ್ಲಿ ಹನುಮಂತನ ಅವತಾರ ತಳೆದಿದ್ದು ದ್ವಾಪರದಲ್ಲಿ ಭೀಮನಾಗಿ ಮೆರೆದಿದ್ದು ಈ ದೇವಾಂಶ ಸಂಭೂತ ಕಲಿಯುಗದಲ್ಲಿ ತಮ್ಮ ಮೂರನೇ ಅವತಾರ ರೂಪ ಆಚಾರ್ಯ ಮಧ್ವರಾಗಿ ನಮ್ಮ ಉಡುಪಿಯ ಸಮೀಪದ ಕುಂಜಾರುಗಿರಿಯ ಪಾಜಕದಲ್ಲಿ ಜನ್ಮ ತಳೆದಿರುವುದು ನಮಗೆ ಅತ್ಯಂತ ಹೆಮ್ಮೆಯ ವಿಷಯ.

ಈ ಮಹಾತ್ಮರು ತತ್ತ್ವವಾದದ ಪ್ರತಿಪಾದಕರಾಗಿದ್ದು ದೇವರನ್ನು ಕಾಣುವ ಸರಿಯಾದ ವಿಧಾನವನ್ನು ಈ ಲೋಕಕ್ಕೆ ನೀಡಿ ನಮ್ಮೆಲ್ಲರನ್ನುಪಾವನರಾಗಿಸಿದರು. ಮೂರು ಲೋಕದ ಒಡೆಯ ಕಡಗೋಲು ಹಿಡಿದ ಶ್ರೀಕೃಷ್ಣನ ವಿಗ್ರಹವನ್ನು ಉಡುಪಿಯಲ್ಲಿ ನೆಲೆಗೊಳಿಸಿ ಅವನ ಪೂಜೆಗೆ ಅಷ್ಟ ಯತಿಗಳನ್ನು ನೇಮಿಸಿದ ಶ್ರೇಷ್ಟ ಶ್ರೀಮದಾಚಾರ್ಯರು.

ಜೀರ್ಣೋದ್ಧಾರ ಗೊಳ್ಳುತ್ತಿರುವ ಪಣಿಯಾಡಿ ದೇವಳದ ಅಷ್ಟಮಂಗಲದ ಪ್ರಶ್ನೆಯಲ್ಲಿ ಶೀಮದಾನಂದತೀರ್ಥಮುನಿವರ್ಯರು ನಮ್ಮ ಪಣಿಯಾಡಿ ಪುರದಲ್ಲಿ ವಿರಾಜಿತನಾಗಿರುವ ಅನಂತ ಪದ್ಮನಾಭನ ದಿವ್ಯ ಸನ್ನಿಧಿ ಗೂ ಭೇಟಿ ನೀಡಿ ಈ ಸ್ಥಳದಲ್ಲೊಂದು ಗ್ರಂಥ ರಚನೆ ಮಾಡಿದ ಐತಿಹ್ಯ ತಿಳಿದು ಬಂದಿದೆ.

ಅಷ್ಟೇ ಅಲ್ಲದೆ ಅವರ ಪೂರ್ವಾಶ್ರಮದ ತಮ್ಮ ಹಾಗೂ ಶಿಷ್ಯ ವಿಷ್ಣು ತೀರ್ಥರು ಕೂಡ ಇಲ್ಲಿಗೆ ಆಗಮಿಸಿ ಧ್ಯಾನ ಮಾಡುತ್ತಿದ್ದ ವಿಷಯ ಮಧ್ವ ವಿಜಯದಲ್ಲಿ ಉಲ್ಲೇಖವಾಗಿದೆಯಂತೆ. ಒಟ್ಟಾರೆ ಇಂತಹ ಮಹಾನ್ ಮಹಿಮ ಶ್ರೀಮನ್ಮಧ್ವಾಚಾರ್ಯರು ಈ ಭೂಮಿಯಲ್ಲಿ ಈ ನಮ್ಮ ನೆಲದಲ್ಲಿ ಅವತರಿಸಿದ ಸಂಭ್ರಮದ ದಿನವನ್ನು ನಮ್ಮ ಈ ಶೇಷಾಸನ ಲಕ್ಷ್ಮೀಅನಂತ ಪದ್ಮನಾಭನ ಸನ್ನಿಧಿಯಲ್ಲಿ ಆಚರಿಸಲು ನಿರ್ಧರಿಸಿದ್ದು ಪುತ್ತಿಗೆ ಶ್ರೀಮಠದ ಪರಮ ಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಅನುಜ್ಞೆ ಹಾಗೂ ಪ್ರೋತ್ಸಾಹದ ನೆಲೆಯಲ್ಲಿ ಹಾಗೂ ಪಣಿಯಾಡಿ ಅನಂತ ವಿಪ್ರ ಬಳಗದ ಸಹಕಾರದ ಜೊತೆಗೆ ಶುಕ್ರವಾರ ಬಹಳ ವಿಜ್ರಂಭಣೆಯಿಂದ ಮಧ್ವಜಯಂತಿಯನ್ನು ಆಚರಿಸಲಾಯಿತು.

ದಿನಾಂಕ 15 ಶುಕ್ರವಾರದ ಮುಂಜಾನೆ 9 – 11 ರ ವರೆಗೆ ವಾಯುಸ್ತುತಿ ಪಾರಾಯಣ ನಡೆಯಿತು. ಜೊತೆಗೆ ಋತ್ವಿಜರಿಂದ ಪುನಶ್ಚರಣೆ ಹೋಮ, ಮಧ್ವವಿಜಯ ಹಾಗೂ ಪವಮಾನ ಸೂಕ್ತ ಪಾರಾಯಣ ನಡೆಯಿತು.

ವಿದ್ವಾಂಸರಾದ ಶ್ರೀ ರಾಮನಾಥ ಆಚಾರ್ಯರು ಆಚಾರ್ಯ ಮಧ್ವರ ಜೀವನ ತತ್ವಗಳ ಬಗ್ಗೆ ಹಾಗೂ ಭಗವಂತನ ಚಿಂತನೆಗಳಿಂದ ಆನಂದ ಪಡೆಯುವ ಬಗೆಯ ಬಗ್ಗೆ ಪ್ರವಚನ ನೀಡಿದರು.

ಹೋಮ ಹವನದ ಪೂರ್ಣಾಹುತಿ ಹಾಗೂ ಮಂಗಳಾರತಿಯ ನಂತರ ಮಹಾಮಂಗಳಾರತಿ, ಅನ್ನಸಂತರ್ಪಣೆ ನೆರವೇರಿತು. ನಮ್ಮ ಜನರಲ್ಲಿ ತತ್ತ್ವವಾದದ ಅರಿವು ಮೂಡಿಸುವ ನಿಟ್ಟಿನಲ್ಲಿ ತಾವೇ ಮುಂದೆ ನಿಂತು ಆಸಕ್ತಿ ತೋರಿಸಿ ಈ ಕಾರ್ಯಕ್ರಮಗಳ ಸಂಪೂರ್ಣ ವೆಚ್ಚದ ಜವಾಬ್ದಾರಿಯನ್ನೂ ಹೊತ್ತು ಅಬುದಾಬಿಯಲ್ಲಿ ನೆಲೆಸಿರುವ, ಅಲ್ಲಿ ಉನ್ನತ ಹುದ್ದೆಯಲ್ಲಿದ್ದುಕೊಂಡೇ ಆಧ್ಯಾತ್ಮದ ಬಗ್ಗೆ ಒಲವು ಇಟ್ಟುಕೊಂಡು ಹೆಚ್ಚಿನ ವಿಷಯಗಳ ಬಗ್ಗೆ ಸಾಧನೆ ಗೈದು ಝಾಮ್ ಆ್ಯಪ್ ಇತ್ಯಾದಿಗಳ ಮೂಲಕವೂ ತಿಂಗಳಿಗೊಂದು ಎರಡು ವೇದ ಪ್ರವಚನ ಗಳನ್ನು ನಡೆಸಿಕೊಡುತ್ತಿರುವ ಆಚಾರ್ಯ ತತ್ವಗಳಿಗೆ ಮಾರುಹೋಗಿರುವ ಶ್ರೀಮತಿ ವಿಜಯ ಹಾಗೂ ಶ್ರೀ ಮುರಳೀಕೃಷ್ಣ ತಂತ್ರಿ ದಂಪತಿಗಳು ಭರಿಸಿರುವುದು ಬಹಳ ಸಂತಸದ ವಿಷಯ. ಆಚಾರ್ಯ ಮಧ್ವರ ತತ್ವಗಳು ನಮ್ಮ ನೆಲದಲ್ಲಿ ಇನ್ನಷ್ಟು ಬೆಳಕನ್ನು ಕಂಡು ನಮ್ಮೆಲ್ಲರ ಜೀವನಕ್ಕೂ ಅವರ ತತ್ವಗಳು ದಾರಿದೀಪವಾಗಲಿ.

ಬರಹ: ರಾಜೇಶ್ ಭಟ್ ಪಣಿಯಾಡಿ

Subscribe to our newsletter!

Other related posts

error: Content is protected !!