ಯಾ ದೇವೀ ಸರ್ವಭೂತೇಷು ಲಕ್ಷ್ಮೀ ರೂಪೇಣ ಸಂಸ್ಥಿತಾ…

 ಯಾ ದೇವೀ ಸರ್ವಭೂತೇಷು ಲಕ್ಷ್ಮೀ ರೂಪೇಣ ಸಂಸ್ಥಿತಾ…
Share this post

ಪ್ರಕೃತಿ ಶಕ್ತಿ, ಮಾತೃ ಶಕ್ತಿಯ ಉಪಾಸನೆಯೇ ನವರಾತ್ರಿ ಹಬ್ಬದ ವೈಶಿಷ್ಟ್ಯ

ನವರಾತ್ರಿ 3 ನೇ ದಿನ: ಚಂದ್ರಘಂಟಾ

ಅನಂತಕೋಟಿ ಬ್ರಹ್ಮಾಂಡದ ಸೃಷ್ಟಿಸ್ಥಿತಿ ಲಯಗಳನ್ನು ನಡೆಸುವ ಜಗನ್ಮಾತೆ ವೈಷ್ಣವೀ ಶಕ್ತಿ ಇಚ್ಛಾಶಕ್ತಿ ಹಾಗೂ ಜ್ಞಾನ ಶಕ್ತಿಗೆ ಪ್ರೇರಕಳಾಗಿ ಮಹಾಕಾಳಿ ಮಹಾಲಕ್ಷ್ಮಿ ಮಹಾಸರಸ್ವತಿ ಎಂದು ಪೂಜಿಸಲ್ಪಡುವಳು, ಆ ಜಗನ್ಮಾತೆ ಶಿವ ಸತಿಯಾದ ಪಾರ್ವತಿ ದೇವಿಯಲ್ಲಿ ಸನ್ನಿಹಿತಳಾಗಿ ಕ್ರಿಯಾಶಕ್ತಿಯ ದ್ಯೋತಕಳಾಗಿ ತಮೋ ರೂಪದಲ್ಲಿ ಮಹಾಕಾಳಿಯಾಗಿ ಕಾಣಿಸಿಕೊಳ್ಳುತ್ತಾಳೆ.

ಆ ದಿವ್ಯ ರೂಪದ ಒಂದು ಪ್ರತಿರೂಪವೇ ಚಂದ್ರಘಂಟಾ ದೇವಿ. ಆಕೆಯ ಈ ರೂಪ ಯಾವುದೇ ಸಂಧಿಗ್ದ ಪರಿಸ್ಥಿತಿಯನ್ನು ಎದುರಿಸುವ ಚರ್ಯೆಯನ್ನು ಹೊಂದಿದ್ದು ರೌದ್ರ ರೂಪಿಣಿಯಾಗಿ ಸ್ತ್ರೀ ಒಲಿದರೆ ನಾರಿ ಮುನಿದರೆ ಮಾರಿ ಎಂಬಂತೆ ಬಿಂಬಿತವಾಗಿದ್ದಾಳೆ.

ಹಿಮಗಿರಿ ತನಯೆಯನ್ನು ಕೈಲಾ ಸ ವಾಸ ರುದ್ರರೂಪಿ ಕೋಟಿ ಸೂರ್ಯ ತೇಜಸ್ಸಿನ ಶಿವ ಸೌಮ್ಯ ಸ್ವರೂಪಿಣಿ ಹೇಮಲತೆಯನ್ನು ವರಿಸಲು ಇಚ್ಚಿಸಿದಾಗ ಅವಳ ಹೆತ್ತವರು ಭಯಭೀತರಾಗುತ್ತಾರೆ. ಆಗ ಪರಿಸ್ಥಿತಿಯನ್ನು ಅರ್ಥೈಸಿಕೊಂಡ ಪಾರ್ವತಿ ಸಾವಿರಾರು ವರ್ಷದ ಕಠಿಣ ತಪಸ್ಸಿನಿಂದ ಅನು ಸಂಧಾನ ಮಾಡಿಕೊಂಡ ದಿವ್ಯಶಕ್ತಿಯ ಮೂಲಕ ಶಿವನಿಗೆ ಸಮರೂಪಳಾಗಿ ತಾಮಸ ರೂಪವನ್ನು ಧಾರಣೆ ಮಾಡುತ್ತಾಳೆ. ಆ ಭಯಾನಕ ದಿವ್ಯರೂಪವೇ ಚಂದ್ರ ಗಂಟಾ ರೂಪ. ಹಣೆಯಲ್ಲಿ ಅರ್ಧ ಚಂದ್ರ ಹಾಗೂ ಅರೆತೆರೆದ ಮೂರನೇ ಕಣ್ಣನ್ನು ಹೊಂದಿದ್ದು ತ್ರಿನೇತ್ರೆಯಾಗಿ ಹತ್ತು ಕೈಗಳನ್ನು ಹೊಂದಿದ್ದಾಳೆ.

ಶಿರದಲ್ಲಿ ಗಂಟೆಯಾಕಾರದ ಶಿರಮುಕುಟದಿಂದ ರಾರಾಜಿಸುತ್ತಾಳೆ. ಶಂಖ, ಚಕ್ರ, ಗದೆ, ಪದ್ಮ , ಬಿಲ್ಲು ಬಾಣ, ತ್ರಿಶೂಲ, ಖಡ್ಗದ ಜೊತೆಗೆ ಕಮಂಡಲ, ಜಪಸರ, ಕಮಲದ ಹೂವು ಹಾಗೂ ಕೃಪಾಮುದ್ರೆಯಿಂದ ಗೋಚರಿಸುತ್ತಿದ್ದು ಆಕೆ ದಿವ್ಯಾಲಂಕೃತಳಾಗಿ ವ್ಯಾಘ್ರನ ಮೇಲೆ ಆಸೀನಳಾಗಿ ದುಷ್ಟರಿಗೆ ಸಿಂಹಸ್ವಪ್ನಳಾಗಿದ್ದಾಳೆ. ಇನ್ನು ಹಸಿವಿನಿಂದ ಬಳಲಿದವರ ಪಾಲಿಗೆ ಅನ್ನದಾತೆಯಾಗಿ ದಾರಿದ್ರ್ಯನಾಶ ಮಾಡಿ ನಂಬಿದ ಭಕ್ತರ ಕುಟುಂಬವನ್ನು ಪೊರೆಯುವ ಸಂತಸದ ಬದುಕನ್ನು ಕರುಣಿಸುವ ಅನ್ನಪೂರ್ಣೇಶ್ವರಿಯಾಗಿಯೂ ಈ ದಿನ ಕಾಣಿಸಿಕೊಳ್ಳುತ್ತಾಳೆ.

ಈ ಅವತಾರಗಳು ತಂತ್ರೋಕ್ತ ವಿಧಾನದ ಪ್ರಕಾರವಾದರೆ ವೈಷ್ಣವೀ ತಂತ್ರದ ಪ್ರಕಾರ ಇಂದು ಜಗನ್ಮಾತೆ ಭಗವಂತನ ಅರ್ಧಾಂಗಿಯಾಗಿ ಹರಿವಲ್ಲಭೆ ಭಗವತೀ ದುರ್ಗೆಯಾಗಿ ಪೂಜಿಸಲ್ಪಡುತ್ತಾಳೆ. “ಭಗವತಿ ಹರಿವಲ್ಲಭೇ ಮನೋಜ್ಞೇ ತ್ರಿಭುವನಭೂತಿಕರಿ ಪ್ರಸೀದ ಮಹ್ಯಂ ” ಎಂದು ಆಕೆಯನ್ನು ಪೂಜಿಸಿದರೆ ಆಕೆ ಭಕ್ತರ ಸಕಲ ಇಷ್ಟಾರ್ಥಗಳನ್ನು ಮನೋಕಾಮನೆಗಳನ್ನು ಪೂರೈಸುವುದರಲ್ಲಿ ಸಂಶಯವಿಲ್ಲ.

ಇಂದು ಮಹಿಳೆಯರು ಮಹನೀಯರು ಬೂದು ಬಣ್ಣದ ವಸ್ತ್ರವನ್ನು ಧರಿಸಿ ಶ್ರೀ ಮಾತೆಯನ್ನು ಪೂಜಿಸಿದರೆ ಬಹಳ ಒಳ್ಳೆಯದು. ಬೂದು ಬಣ್ಣದ ಬಸ್ಮದ ತಿಲಕ ಅಥವಾ ಅದನ್ನು ಶರೀರಕ್ಕೆ ಲೇಪಿಸಿ ಕೊಂಡರೆ ಶಿವಪಾರ್ವತಿ ಯರ ಸಂಪೂರ್ಣ ಅನುಗ್ರಹ ಪ್ರಾಪ್ತಿಯಾಗುವುದು.

ಅಲ್ಲದೆ ಇದು ದೇಹಕ್ಕೂ ತಂಪು. ಚಂದ್ರ ಗಂಟಾ ದೇವಿಗೆ ಕೇಸರಿ ಹಾಕಿದ ಹಾಲಿನ ಪಾಯಸ ಹಾಗೂ ನೈವೇದ್ಯ ಅತಿ ಪ್ರಿಯ. ಈ ಮಾತೆಯನ್ನು ಇಂದು ಪೂಜಿಸುವುದರಿಂದ ನಮ್ಮೊಳಗಿನ ಆಧ್ಯಾತ್ಯ ಶಕ್ತಿ ಜಾಗೃತಗೊಂಡು ಅಸಾಧ್ಯ ವಾದುದನ್ನು ಸಾಧಿಸುವ ಶಕ್ತಿ ಪ್ರಾಪ್ತವಾಗುತ್ತದೆ. ಸುಮಂಗಲಿ ಸೌಭಾಗ್ಯವತಿಯಾದ ಆಕೆ ಸಾಂಸಾರಿಕ ಐಕ್ಯತೆ ಸಾಮರಸ್ಯ ರಕ್ಷೆ, ಶತ್ರು ಭಯ ನಿವಾರಣೆ ಮಾಡಿ ಸಿದ್ದಿ ಬುದ್ದಿ ಭುಕ್ತಿ ಮುಕ್ತಿಯನ್ನು ಕರುಣಿಸುವ ಕರುಣಾ ಸಿಂಧುವಾಗಿ ತನ್ನ ಭಕ್ತರನ್ನೆಲ್ಲ ಚಂದ್ರ ಗಂಟಾ ಮಾತೆ ಲಗುಬಗೆಯಿಂದ ಪೊರೆಯುತ್ತಾಳೆ.

Subscribe to our newsletter!

Other related posts

error: Content is protected !!