ಯಾ ದೇವೀ ಸರ್ವಭೂತೇಷು ಲಕ್ಷ್ಮೀ ರೂಪೇಣ ಸಂಸ್ಥಿತಾ…
ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೆ ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣಿ ನಮೋಸ್ತುತೇ |
ನವರಾತ್ರಿ 8 ನೇ ದಿನ: ಗೌರಿ ಆರಾಧನೆ
ಶ್ರೀದೇವಿಯನ್ನು ನವರಾತ್ರಿಯಲ್ಲಿ ಮೂರು ರೂಪಗಳಿಂದ ಪೂಜಿಸಲಾಗುತ್ತದೆ. ಮೊದಲ ಮೂರು ದಿನ ಮಹಾಕಾಳಿಯಾಗಿ ಮತ್ತು ಋಗ್ವೇದ ಸ್ವರೂಪಳಾಗಿ ನಂತರದ ಮೂರು ದಿನಗಳಲ್ಲಿ ಮಹಾಲಕ್ಷ್ಮಿಯನ್ನು ಯಜುರ್ವೇದ ಸ್ವರೂಪಳಾಗಿ ಹಾಗೆಯೇ ಕೊನೆಯ ಮೂರು ದಿನಗಳಲ್ಲಿ ತಾಯಿಯನ್ನು ಮಹಾಸರಸ್ಪತಿಯನ್ನು ಸಾಮವೇದದ ಸ್ವರೂಪಳಾಗಿ ಪೂಜಿಸುವುದು ರೂಢಿ.
ಸಂಪತ್ತಿನ ಅಧಿದೇವತೆ ಮಹಾಲಕ್ಷ್ಮಿಯಾದರೆ ತೇಜಸ್ಸು ಮತ್ತು ಶಕ್ತಿಯನ್ನು ನೀಡುವವಳು ಮಹಾಕಾಳಿ ಅದೇ ರೀತಿ ಜ್ಞಾನ ಬುದ್ದಿ ವೈರಾಗ್ಯವನ್ನು ಕರುಣಿಸುವವಳು ಮಹಾಸರಸ್ವತಿ. ಇಂದು ಶರನ್ನವರಾತ್ರಿಯ 8ನೇ ದಿನ. ಮಾತೆ ಗೌರಿಯನ್ನು ಈ ದಿನ ಭಕ್ತಿಶ್ರದ್ಧೆಯಿಂದ ಪೂಜಿಸಲಾಗುತ್ತದೆ.
ಹೇಮಲತೆಯ ಶಿವನ ಕುರಿತಾಗಿ ಬಿಸಿಲು ಮಳೆ ಚಳಿಗಾಳಿ ಎನ್ನದೆ ಮಾಡಿದ ಕಠಿಣ ತಪಸ್ಸಿನ ಕಾರಣ ಆಕೆಯ ಬಣ್ಣ ಕಪ್ಪಾಗಿತ್ತಂತೆ. ಆಕೆ ಶ್ವೇತ ವಸ್ತ್ರದಾರಿಯಾಗಿ ದರ್ಶನ ನೀಡುತ್ತಾಳೆ. ಇವಳ ನಿಶ್ಚಲ ಪ್ರೇಮ ತಪಸ್ಸಿಗೆ ಮಾರು ಹೋದ ಶಿವ ತನ್ನ ತಲೆಯಲ್ಲಿ ಕುಳಿತ ಗಂಗೆಯ ಪವಿತ್ರ ಜಲದಿಂದ ಇವಳ ಮುಖವನ್ನು ಪ್ರೀತಿಯಿಂದ ಶಿವತೊಳೆದನಂತೆ. ಆಗ ಆಕೆಯ ಮೊಗ ಶ್ವೇತಮುತ್ತಿನ ಮಣಿಯಂತೆ ಕಾಂತಿಯುತ್ತವಾಗಿ ಹೊಳೆಯಿತಂತೆ. ಹೀಗೆ ಗೌರವರ್ಣ ವನ್ನು ಪಡೆದ ಅಪರ್ಣೆಗೆ ಗೌರಿ ಎಂಬ ಹೆಸರು ಬಂತು.
ಆಕೆಗೆ ನವಿಲು ಬಣ್ಣದ ಹಸಿರು ಅಥವಾ ಶುದ್ಧ ನೀಲ ವರ್ಣದ ಉಡುಗೆ ಬಹಳ ಪ್ರಿಯ. ಶ್ವೇತ ವರ್ಣೆಗೆ ಶ್ವೇ ವಸ್ತ್ರ ‘ಶ್ವೇತ ಪುಷ್ಪ ಶೃಂಗಾರ. ಶ್ವೇತ ಗಿರಿ ಅಂದರೆ ಕೈಲಾಸದಲ್ಲಿ ನೆಲೆಸಿದ ಈಕೆ ಚಂದ್ರ ಮುಖಿ ಅತ್ಯಂತ ಸುಂದರಿ.
“ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರಧರಾ ಶುಚಿ ಹಿಮಹಾಗೌರಿ ಶುಭಂ ದದ್ಯಾತ್ ಮಹಾದೇವ ಪ್ರಮೊದದಾ “
ಓಂ ಹ್ರೀಂ ಶ್ರಿಂ ಮಹಾಗೌರಿ ದುರ್ಗಾಯೈ ನಮಃ”
ಈಕೆ ಚತುರ್ಭುಜೆಯಾಗಿದ್ದು ಕೈಯಲ್ಲಿ ಡಮರು, ತ್ರಿಶೂಲ, ವರಮುದ್ರೆ ಹಾಗೂ ಅಭಯ ಮುದ್ರೆಯಿಂದ ಶೋಭಿಸುತ್ತಾಳೆ. ಬಿಳಿ ಬಣ್ಣದ ವೃಷಭವನ್ನು ಈಕೆ ವಾಹನವನನ್ನಾಗಿ ಮಾಡಿಕೊಂಡಿದ್ದಾಳೆ. ದುರ್ಗತಿಯನ್ನು ದೂರ ಮಾಡುವವಳು ದುರ್ಗೆ. ಈಕೆಯ ಕೃಪಾಕಟಾಕ್ಷ ನಮ್ಮ ಮೇಲಿದ್ದರೆ ನಮ್ಮ ಪೂರ್ವ ಸಂಚಿತ ಪಾಪಗಳೂ ಕಳೆದು ಹೋಗುತ್ತವಂತೆ. ಮಹಾಗೌರಿಯು ಮಹಾಭಕ್ತಿಯ ಅನುಭೂತಿ. ಭಕ್ತರ ಮನದ ಕಲ್ಮಶವನ್ನು ದೂರ ಮಾಡತಕ್ಕಂತವಳು ಈ ಮಹಾಗೌರಿ ಜೀವನದಲ್ಲಿ ಸ್ವಚ್ಚತೆಯನ್ನು ಶುಭ್ರತೆಯನ್ನು ತರುವವಳು. ಸದಾಕಾಲ ಶುಭ ಫಲವನ್ನೇ ಕೊಡುವವಳು. ಅವಳ ಆರಾದನೆಯಿಂದ ಭವಿಷ್ಯವನ್ನು ಅರಿಯುವ ಶಕ್ತಿ ಹಾಗೂ ಅಲೌಕಿಕ ಸಿದ್ದಿ ಪ್ರಾಪ್ತಿಯಾಗುತ್ತದೆ. ವಿವಾಹ ಪೂರ್ವದಲ್ಲಿ ಗೌರೀ ಪೂಜೆ ಮಾಡುವ ಕ್ರಮ ನಮ್ಮಲ್ಲಿದೆ. ಅರಳುಬೆಲ್ಲ ತ್ರಿಮಧುರ, ಪೂರ್ಣ ಫಲ ಅಥವಾ ತೆಂಗಿನಕಾಯಿಯಿಂದ ಮಾಡಿದ ಖಾಧ್ಯಗಳು ಹಾಲು ಈಕೆಗೆ ಬಲು ಮೆಚ್ಚು.
ಈಕೆಯನ್ನು ದುರ್ಗಾ ಮಂಡಲವನ್ನು ಬರೆದು ಭತ್ತ ಅಥವಾ ಅಕ್ಕಿ ತುಂಬಿದ ಹರಿವಾಣದಲ್ಲಿ ಪಂಚ ದೀಪದ ಕಾಲು ದೀಪವಿಟ್ಟು ಪಂಚ ದುರ್ಗೆಯನ್ನು ಆಹ್ವಾನಿಸಿ ಫಲ ಪುಷ್ಪ ವಿವಿಧ ಖಾದ್ಯ ತಾಂಬೂಲಗಳನ್ನು ಸಮರ್ಪಿಸಿ ಸಕಲ ಮಂತ್ರ ವಾದ್ಯಗಳಿಂದ ಮಂಗಲ ದ್ರವ್ಯ ಒಪ್ಪಿಸಿ ಮಂಗಲಾರತಿಯನ್ನು ಮಾಡಿ ಸಂಭ್ರಮದಿಂದ ಪೂಜಿಸಿ ಮುತ್ತೈದೆಯರಿಗೆ ವಾಯನ ನೀಡಿ ಬಂದ ಅತಿಥಿಗಳಿಗೆ ಅನ್ನ ಪ್ರಸಾದವನ್ನು ಉಣಬಡಿಸಿದರೆ ಈಕೆ ವಿಶೇಷ ಫಲವನ್ನು ನೀಡುತ್ತಾಳೆ. ಅಥವಾ ವಿವಿಧ ದೇವೀಕ್ಷೇತ್ರಗಳಿಗೆ ನವರಾತ್ರಿ ಕಾಲದಲ್ಲಿ ಭೇಟಿ ನೀಡಿ ಭಕ್ತಿಯಿಂದ ಭಜಿಸಿದರೆ ಸದಾ ನಮ್ಮನ್ನು ದು:ಖದ ಕೂಪದಿಂದ ಕಾಪಾಡುತ್ತಾಳೆ.
ನವರಾತ್ರಿ ಕಾಲದಲ್ಲಿ ಮಂಗಳಗೌರಿಯನ್ನು ನೆನೆಯುವ, ಆರಾಧಿಸುವ, ಭಜಿಸುವ ಅವಳ ಎಲ್ಲ ಭಕ್ತರಿಗೆ ಮಂಗಳವನ್ನು ಕರುಣಿಸಲಿ