ಉಳ್ಳಾಲ ಉರೂಸ್: ಕೋವಿಡ್ ಸ್ಥಿತಿ-ಗತಿ ಪರಿಶೀಲಿಸಿ, ಸರಕಾರದ ಅನುಮತಿ ಪಡೆದು ಕ್ರಮ

 ಉಳ್ಳಾಲ ಉರೂಸ್: ಕೋವಿಡ್ ಸ್ಥಿತಿ-ಗತಿ ಪರಿಶೀಲಿಸಿ, ಸರಕಾರದ ಅನುಮತಿ ಪಡೆದು ಕ್ರಮ
Share this post

ಮಂಗಳೂರು, ಅ. 12, 2021: ಕೋವಿಡ್ ಸೋಂಕಿನ ಸ್ಥಿತಿ ಗತಿಗಳನ್ನು ಪರಾಮರ್ಶಿಸಿ, ಸರಕಾರದ ಪೂರ್ವಾನುಮತಿ ತೆಗೆದುಕೊಂಡು ಈ ಬಾರಿ ಉಲ್ಲಾಳ ಉರುಸ್ ನಡೆಸುವ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ತಿಳಿಸಿದರು.

ಅವರು ಮಂಗಳವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಉಳ್ಳಾಲ ಉರೂಸ್ ಆಚರಣೆ ಸಂಬಂಧ ಪೂರ್ವಭಾವಿಯಾಗಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಒಂದು ತಿಂಗಳ ನಂತರ ಮತ್ತೊಂದು ಸಭೆ ನಡೆಸಲಾಗುವುದು. ಅದೂವರೆಗಿನ ಕೋವಿಡ್ ಪರಿಸ್ಥಿತಿಯನ್ನು ಅವಲೋಕಿಸಲಾಗುವುದು. ಕೇರಳದಲ್ಲಿ ಹೆಚ್ಚಿನ ಪ್ರಕರಣಗಳಿದ್ದು, ಹೆಚ್ಚಿನ ಭಕ್ತಾದಿಗಳು ಸಹ ಅಲ್ಲಿಂದ ಆಗಮಿಸುವುದರಿಂದ ಈ ಸ್ಥಿತಿಗಳನ್ನು ಅವಲೋಕಿಸಿ, ಕೋವಿಡ್ ಕಡಿಮೆಯಾದಲ್ಲಿ, ಸರಕಾರದಿಂದ ಪೂರ್ವಾನುಮತಿ ಪಡೆದು ನಡೆಸಲಾಗುವುದು. ಒಂದು ವೇಳೆ ಈ ಪರಿಸ್ಥಿತಿಯಲ್ಲಿ ವ್ಯತ್ಯಯವಾದಲ್ಲಿ, ಉರೂಸ್ ಅನ್ನು ಮುಂದೂಡಲಾಗುವುದು. ಸರಕಾರಕ್ಕೆ ಈ ಬಗ್ಗೆ ವರದಿ ಕಳುಹಿಸಲಾಗುವುದು ಎಂದು ಅವರು ಹೇಳಿದರು.

ಆರೋಗ್ಯ ಇಲಾಖೆ ವತಿಯಿಂದ ಉಲ್ಲಾಳ ಭಾಗದಲ್ಲಿ ಕೋವಿಡ್ ಲಸಿಕೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು, ಹೆಚ್ಚಿನ ಐಇಸಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು, ಅಲ್ಲಿ ಹೆಚ್ಚು ಹೆಚ್ಚು ಕೋವಿಡ್ ತಪಾಸಣೆಗಳನ್ನು ಮಾಡಬೇಕು. ಪಾಸಿಟಿವಿಟಿ ರೇಟ್ ಬಗ್ಗೆ ಗಮನವಿರಬೇಕು. ಲಸಿಕಾ ಶಿಬಿರಗಳನ್ನು ಹೆಚ್ಚು ಮಾಡಬೇಕು. ಆಂಬುಲೆನ್ಸ್ ಅನ್ನು ಸದಾ ಸನ್ನದ ಸ್ಥಿತಿಯಲ್ಲಿಟ್ಟುಕೊಳ್ಳಬೇಕು ಹಾಗೂ ಸುತ್ತಮುತ್ತಲಿನ ಆಸ್ಪತ್ರೆಗಳು, ರೋಗಿಗಳನ್ನು ಉಪಚರಿಸಲು ಸಜ್ಜಾಗಿರಬೇಕು. ಮೆಡಿಕಲ್ ಚೆಕ್‌ಪೋಸ್ಟ್ ತಂಡವನ್ನು ಅಲ್ಲಿ ಕರ್ತವ್ಯಕ್ಕೆ ನಿಯೋಜಿಸಬೇಕಾಗುತ್ತದೆ ಎಂದು ಸಲಹೆ ನೀಡಿದರು.

ಶಾಸಕರಾದ ಯು.ಟಿ. ಖಾದರ್, ವಿವಿಧ ಇಲಾಖೆಗಳ ಅಧಿಕಾರಿಗಳು, ಉಲ್ಲಾಳ ದರ್ಗಾದ ಅಧ್ಯಕ್ಷ ಅಬ್ದುಲ್ ರಶೀದ್, ಉಪಾದ್ಯಕ್ಷರಾದ ಮಹೀನ್ ಇಸ್ಮಾಯಿಲ್, ಉಸ್ತಾದ್ ಅಬ್ದುಲ್, ಜಂಟಿ ಕಾರ್ಯದರ್ಶಿಗಳಾದ ಆಸನ್ ಅಬ್ದುಲ್, ಯು.ಟಿ. ಇಲಿಯಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!