ಶ್ರೀ ಗುರುಭ್ಯೋ ನಮಃ…

 ಶ್ರೀ ಗುರುಭ್ಯೋ ನಮಃ…
Share this post

ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಅತೀ ಉತ್ಕೃಷ್ಟವಾದ ಸ್ಥಾನವಿದೆ. ವೇದ ಪುರಾಣ ಕಾಲದಿಂದಲೂ , ರಾಜ ಮಹಾರಾಜರುಗಳ ಕಾಲದಿಂದಲೂ ಗುರುವನ್ನು ಉನ್ನತ ಪೀಠದಲ್ಲಿ ಕುಳ್ಳಿರಿಸಿ ಗೌರವ ಸೂಚಿಸುತ್ತಿದ್ದರು. ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ವಿಶೇಷ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಗುರುಗಳ ಸಲಹೆ ಸೂಚನೆಗಳನ್ನು ಪಡೆದು ಅವರ ಮಾರ್ಗದರ್ಶನದಂತೆ ನಡೆಯುತ್ತಿದ್ದರು.

ಹಾಗಾಗಿ ಹಿಂದೂ ರಾಷ್ಟ್ರ ಆಧ್ಯಾತ್ಮ ಕೇತ್ರದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಬಹಳ ಶ್ರೀಮಂತವಾಗಿತ್ತು. ಗುರು ಒಬ್ಬ ಸತ್ಪ್ರಜೆಯ ನಿರ್ಮಾತೃ. “ಗು” ಅಂದರೆ ಅಂಧಕಾರ – “ರು” ಅಂದರೆ ದೂರವಾಗಿಸುವವನು. ಜೀವನದಲ್ಲಿ ಅಜ್ಞಾನವೆಂಬ ಕತ್ತಲನ್ನು ದೂರ ಮಾಡಿ ಬೆಳಕನ್ನು ತರುವವನೇ ಗುರು.. ಜ್ಞಾನವನ್ನು ಕೊಡುವವನು ಗುರು.. ದಾರಿಯನ್ನು ತೋರಿಸುವವನು ಗುರು… ಗುರಿ ಮುಟ್ಟಿಸುವವನು ಗುರು.. ಅರಿವೇ ಗುರು.. ಬಾಗಿದ ತಲೆ ಮುಗಿದ ಕೈ ಇರಿಸಿಕೊಂಡ ವಿನಯಶೀಲನೇ ಗುರು.. ಗುರು ಭವಿಷ್ಯದ ನಿರ್ಮಾಪಕ.. ಗುರು ಹೊಸ ಪ್ರಪಂಚವನ್ನೇ ಸೃಷ್ಟಿಸಬಲ್ಲ ಬ್ರಹ್ಮ.

ಎಲ್ಲ ಬಗೆಯ ವಿದ್ಯೆಯನ್ನು ಕಲಿಯುವುದು – ಕಲಿತಿರುವ ವಿದ್ಯೆಯನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುವುದು – ಕಲಿತ ಹಾಗೂ ಅಳವಡಿಸಿಕೊಂಡ ಸಕಲ ವಿದ್ಯೆಯನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಇತರ ಅರ್ಹ ವ್ಯಕ್ತಿಗಳಿಗೆ, ವಿದ್ಯಾರ್ಥಿಗಳಿಗೆ ದಾನ ಮಾಡುವುದೇ ಶಿಕ್ಷಕನ ಪರಮ ಧರ್ಮ. ದೀಪದಿಂದ ಹಲವು ದೀಪಗಳನ್ನು ಹಚ್ಚುವವನೇ ಶಿಕ್ಷಕ. “ಆ ಚಿರೋತಿ: ಶಾಸ್ತ್ರಾರ್ಥಂ ಆಚಾರ್ಯ : ಸ್ಥಾಪಯತ್ಯವೇ ಸ್ವಯಂ ಆಚರತೆಯಸ್ತು ಇತೀ ಮತಃ ” ಅಂದರೆ ಒಬ್ಬ ಗುರು ತಾನು ಆಚರಣೆ ಮಾಡಿದ್ದನ್ನು ವಿದ್ಯಾರ್ಥಿಗಳಿಗೆ ಆಚರಿಸಲು ಪ್ರೋತ್ಸಾಹಿಸುವನೋ ಆತನೇ ನಿಜವಾದ ಶಿಕ್ಷಕ.

“ನಾ ಗುರುರ್ ಅಧಿಕಂ ” ಗುರು ಎಲ್ಲರಿಗಿಂತಲೂ ಶ್ರೇಷ್ಟ. ಸೃಷ್ಟಿ ಸ್ಥಿತಿ ಲಯ ಕರ್ತೃಗಳಾದ ತ್ರಿ ಮೂರ್ತಿಗಳಿಗಿಂತಲೂ ಗುರು ಶ್ರೇಷ್ಟ ಎ೦ದು ಬಲ್ಲವರು ಹೇಳುತ್ತಾರೆ. ಯಾಕೆಂದರೆ ಒಬ್ಬಗುರು ವಿದ್ಯಾರ್ಥಿಯಲ್ಲಿ ಜ್ಞಾನವನ್ನು ಹುಟ್ಟು ಹಾಕುತ್ತಾನೆ. ಆತನ ಒಳಗಿನ ಅಂತರ್ ಶಕ್ತಿಯನ್ನು ಜಾಗೃತಗೊಳಿಸಿ ಜ್ಞಾನದ ಬೆಳೆ ಬೆಳೆಯುತ್ತಾನೆ ಹಾಗೂ ಶಿಷ್ಯನೊಳಗಿನ ಅವಗುಣಗಳೆಂಬ ಕೆಟ್ಟ ಕಳೆಯನ್ನು ಸಂಹಾರ ಮಾಡುವ ಮೂಲಕ ತ್ರಿಮೂರ್ತಿಗಳ ಮೂರೂ ಗುಣಗಳನ್ನು ಗುರು ಒಬ್ಬನೇ ಹೊಂದಿದ್ದಾನೆ..

ಗುರು ಒಬ್ಬ ಶಿಲ್ಪಿಯೂ ಹೌದು ಶಿಲೆಯಂತಿರುವ ಶಿಷ್ಯರುಗಳನ್ನು ಶಿಲ್ಪವನ್ನಾಗಿ – ಸುಂದರ ಮೂರ್ತಿಯನ್ನಾಗಿ ಮಾಡಿ ಅವರೊಳಗೆ ಜ್ಞಾನಾಕರ್ಷಣೆಯನ್ನು ತುಂಬಿ ಸುತ್ತಲಿನ ಜನರು ಕೈ ಮುಗಿಯುವಂತೆ ಮಾಡುವವರು ಈ ಗುರು ಶ್ರೇಷ್ಟರು.
ಸಮರ್ಥ ಶಿಕ್ಷಕ ರಾಷ್ಟ್ರರಕ್ಷಕ. ಯಾವ ಶಿಕ್ಷಕ ತೀವ್ರ ಮಂಥನದ ಪ್ರವೃತ್ತಿಯನ್ನು ತನ್ನ ಪ್ರಿಯವಾದ ಕ್ಷೇತ್ರದಲ್ಲಿ ಅತ್ಯಂತ ಆಳಕ್ಕೆ ಹೋಗುವ ಪ್ರವೃತ್ತಿಯನ್ನು ತನ್ನ ಶಿಷ್ಯರಲ್ಲಿ ಬೆಳೆಸುತ್ತಾನೋ ಅವನೇ ನಿಜವಾದ ಶಿಕ್ಷಕ ಮತ್ತು ರಾಷ್ಟ್ರ ನಿರ್ಮಾಪಕ.

ಅತ್ಯಂತ ಆಳವಾದ ಪರಿಣತಿ, ಯಾವುದೇ ಪಾಪ ಲೇಪಗಳಿಂದ ಮುಕ್ತನಾಗಿರುವುದು, ವಿವೇಕ ಪ್ರಜ್ಞೆ ಉಳ್ಳವನಾಗಿರುವುದು, ವಿಶ್ಲೇಷಣಾತ್ಮಕ ಬುದ್ದಿಯನ್ನು ಹೊಂದಿರುವುದು, ಶಾಂತ ಮನಸ್ಕನಾಗಿರುವುದು, ವಿದ್ಯಾರ್ಥಿಗಳ ಬಗ್ಗೆ ದಯಾಸಾಗರ ನಾಗಿರುವುದು ಶ್ರೇಷ್ಟ ಶಿಕ್ಷಕನ ಸುಲಕ್ಷಣಗಳು.

ಭಾರತೀಯ ಸಂಸ್ಕೃತಿ ಶಿಕ್ಷಣಕ್ಕಿಟ್ಟ ಇನ್ನೊಂದು ಹೆಸರು ಮರು ಹುಟ್ಟು. ಪುರುಷೋತ್ತಮಾನಂದಜಿಯವರ ಕವನ – ಗುರುವಿನ ಬಗ್ಗೆ ಹೀಗೆ ಹೇಳುತ್ತದೆ. ” ತಮವ ಕಳೆದು ಬೆಳಕ ತಂದ ದೀನ ಬಂಧು ಗುರುವರ .. ಕರ್ಮಬಂಧ ತರಿದ ಧೀರ ನಿನಗಿದೋ ನಮಸ್ಕಾರ”

ತನ್ನ ಸಾಮರ್ಥ್ಯದಿಂದ ಇಡೀ ಪ್ರಪಂಚವನ್ನೆ ಗೆಲ್ಲ ಹೊರಟ ಅಲೆಗ್ಸಾಂಡರ್ ನ ಗುರು “ಅರಿಸ್ಟಾಟಲ್ ” . ಮೌರ್ಯ ವಂಶೋದ್ಧಾರಕ – ಆಡಳಿತದಲ್ಲಿ ಅರ್ಥಶಾಸ್ತ್ರದ ಪರಿಕಲ್ಪನೆಯನ್ನು ವಿಶ್ವಕ್ಕೇ ತೋರಿಸಿ ಕೊಟ್ಟ ಶ್ರೇಷ್ಟ ಗುರು.. ಚಾಣಕ್ಯ.. ತನ್ನ ವಾಕ್ಚಾತುರ್ಯದ ಮೂಲಕ ವಿಶ್ವದಲ್ಲೇ ಹಿಂದು ತತ್ವದ ಸತ್ವಸಾರದ ಹಿರಿಮೆಯನ್ನು ತಿಳಿಯಪಡಿಸಿದ ಸ್ವಾಮಿ ವಿವೇಕಾನಂದರ ಪರಮಗುರು ರಾಮಕೃಷ್ಣ ಪರಮಹಂಸರು. ಇವರೆಲ್ಲ ಶ್ರೇಷ್ಟ ಗುರುಗಳ ಸಾಲಿನಲ್ಲಿ ನಿತ್ಯ ಸ್ಮರಣೀಯರು.

ಉದಯ ರವಿಯ ನಾಡು ಜಪಾನ್ ನಲ್ಲಿ ಅತೀ ಹೆಚ್ಚು ವೇತನ ಪಡೆಯುವವರು ಶಿಕ್ಷಕರು. ಆದಕ್ಕೆ ಮುಖ್ಯ ಕಾರಣ ಈ ರಾಷ್ಟ್ರ ವಿಶ್ವದಲ್ಲಿ ಮತ್ತೆ ತಲೆ ಎತ್ತಿನಿಂತು ಶ್ರೀಮಂತ ರಾಷ್ಟ್ರವೆನಿಸಿಕೊಳ್ಳಲು ಈ ಶಿಕ್ಷಕರ ಪರಿಶ್ರಮ ಅಪಾರ.

ಸೆಪ್ಟೆಂಬರ್ ಐದು ದೇಶ ಕಂಡ ಮಹಾನ್ ಶಿಕ್ಷಕ ಹಾಗೂ ಮಾಜಿ ರಾಷ್ಟ್ರಾಧ್ಯಕ್ಷ ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನ.
. ” ಗುರು ಉಪದೇಶಂ ಆತ್ಮಪ್ರಕಾಶಂ ” ಎಂಬಂತೆ ಅವರ ನೆನಪಿನಲ್ಲಿ ಈ ದಿನ – ತಮ್ಮ ಜ್ಞಾನದ ಅರಿವಿನಿಂದ ಇಡೀ ದೇಶಕ್ಕೆ ಕೀರ್ತಿ ತರುವ ಶಿಷ್ಯವರ್ಗವನ್ನು ಸೃಷ್ಟಿಸುವ ಹಾಗೂ ಆತ್ಮಪ್ರಕಾಶವನ್ನು ಎಲ್ಲೆಡೆ ಹರಡುವ ನಮ್ಮ ಎಲ್ಲಾ ಗುರುವೃಂದವನ್ನು ಅವರ ತ್ಯಾಗವನ್ನು ನೆನಪಿಸಿಕೊಳ್ಳುವ ದಿನ.

ಶ್ರೀ ಗುರುಭ್ಯೋನಮಃ ಸರ್ವ ಗುರುಭ್ಯೋನಮಃ

ಬರಹ: ರಾಜೇಶ್ ಭಟ್ ಪಣಿಯಾಡಿ

Subscribe to our newsletter!

Other related posts

error: Content is protected !!