ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ಪ್ರಾತ್ಯಕ್ಷಿಕೆ ವೀಕ್ಷಿಸಿದ ಸಚಿವ ಅಂಗಾರ

 ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ಪ್ರಾತ್ಯಕ್ಷಿಕೆ ವೀಕ್ಷಿಸಿದ ಸಚಿವ ಅಂಗಾರ
Share this post

ಸಮುದ್ರದ ನೀರು, ಸಿಹಿ ನೀರಾಗಿಸುವ ಯಂತ್ರ ಅತ್ಯಂತ ಉಪಯುಕ್ತ: ಎಸ್. ಅಂಗಾರ

ಮಂಗಳೂರು ಸೆ.3, 2021: ಸಮುದ್ರದಲ್ಲಿ ಆಳಮೀನುಗಾರಿಕೆ ಮಾಡುವ ಮೀನುಗಾರರಿಗೆ ಸಮುದ್ರದಲ್ಲಿಯೇ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸಿಕೊಡುವ ಯಂತ್ರವು ಅತ್ಯಂತ ಉಪಯುಕ್ತವಾಗಿದೆ. ಈ ಯತ್ನ ಯಶಸ್ವಿಯಾಗಿದೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಹೇಳಿದರು.

ಅವರು ಶುಕ್ರವಾರ ಹಳೆ ಬಂದರು ಮಾರ್ಗದ ಮೂಲಕ ಬೆಂಗರೆಗೆ ತೆರಳುವ ಸಂದರ್ಭದಲ್ಲಿ ಸಮುದ್ರದ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ಯಂತ್ರದ ಪ್ರಾತ್ಯಕ್ಷಿಕೆ ವೀಕ್ಷಿಸಿ ಮಾತನಾಡಿದರು.

ಆಸ್ಟ್ರೇಲಿಯಾ ತಂತ್ರಜ್ಞಾನದಲ್ಲಿ ನಿರ್ಮಾಣವಾಗಿರುವ ಯಂತ್ರ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುತ್ತದೆ, ಅದು ಈ ಭಾಗದ ಮೀನುಗಾರರಿಗೆ ಅತಿ ಉಪಯುಕ್ತ ಏಕೆಂದರೆ, ಮೀನುಗಾರಿಕೆ ಮಾಡುವ ಸಂದರ್ಭದಲ್ಲಿ ಮೀನುಗಾರರು ಕನಿಷ್ಠ ಒಂದು ವಾರ, ಅಥವಾ 10 ಅಥವಾ 15 ದಿನಕ್ಕೂ ಹೆಚ್ಚು ಸಮುದ್ರದಲ್ಲಿರುವ ಸಂದರ್ಭಗಳಲ್ಲಿ ಕುಡಿಯಲು, ಸ್ನಾನ ಸೇರಿದಂತೆ ಇತರೆ ಅನುಕೂಲಗಳಿಗೆ ಸಮುದ್ರದ ತಟದಿಂದ ನೀರನ್ನು ತೆಗೆದುಕೊಂಡು ಹೋಗಬೇಕು. ಅದರ ಬದಲಾಗಿ ಸಮುದ್ರದ ನೀರನ್ನೇ ಸಿಹಿ ನೀರನ್ನಾಗಿ ಪರಿವರ್ತಿಸುವ ಘಟಕವನ್ನು ಮೀನುಗಾರಿಕೆ ಬೋಟುಗಳಿಗೆ ಅಳವಡಿಸಿಕೊಟ್ಟಲ್ಲೀ, ಸಿಹಿ ನೀರನ್ನು ಕೊಂಡುಹೋಗಬೇಕಾದ ಪರಿಸ್ಥಿತಿ ಬರುವುದಿಲ್ಲ, ಅಲ್ಲದೇ ಬೋಟುಗಳಿಗೆ ಹಾಕುವ ಲೋಡು ಕೂಡ ಕಡಿಮೆಯಾಗುತ್ತದೆ ಎಂದರು.

ಮುಖ್ಯವಾಗಿ ಬೋಟಿನಲ್ಲಿ ನೀರು ಸಂಗ್ರಹಿಸಲು ಮೀಸಲಿರಿಸಿದ್ದ ಸ್ಥಳವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಮೀನುಗಾರರು ಎಲ್ಲಿಯೇ ಹೋದರೂ, ಯಾವುದೇ ಸಂದರ್ಭದಲ್ಲಿ ಕೂಡ ಅವರಿಗೆ ಸಿಹಿ ನೀರಿನ ಅವಶ್ಯಕತೆ ಬಂದಾಗ ಉಪ್ಪು ನೀರನ್ನು ಸಿಹಿ ನೀರಾಗಿ ಪರಿವರ್ತತಿಸುವ ಯಂತ್ರವನ್ನು ಬಳಸಿಕೊಂಡು ಸಿಹಿ ನೀರನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಒಳ ಹಾಗೂ ಆಳ ಮೀನುಗಾರಿಕೆ ಮಾಡುವ ಮೀನುಗಾರರಿಗೆ ಈ ಯಂತ್ರದ ಉಪಯುಕ್ತತೆಯನ್ನು ತಿಳಿಸಿಕೊಡುವ ಉದ್ದೇಶದಿಂದ ಈ ಪ್ರಾತ್ಯಕ್ಷಿಕೆ ಕೈಗೊಳ್ಳಲಾಗಿದೆ, ಅಗತ್ಯವಿರುವ ಮೀನುಗಾರರು ಈ ಯಂತ್ರವನ್ನು ಖರೀದಿಸಲು ಸರಕಾರದ ವತಿಯಿಂದ ನೀಡಬಹುದಾದದ ಸಹಾಯಧನದ ಕುರಿತಂತೆ ಸರಕಾರದ ಮಟ್ಟದಲ್ಲಿ ಚರ್ಚಿಸಿ, ಅದನ್ನು ಕಾರ್ಯರೂಪಕ್ಕೆ ತರಲು ಕ್ರಮವಹಿಸಲಾಗುವುದು ಎಂದು ಸಚಿವರು ಹೇಳಿದರು.

ಕರ್ನಾಟಕ ಮೀನುಗಾರಿಕೆ ಅಭಿವೃದ್ದಿ ನಿಗಮ ನಿಯಮಿತದ ಅಧ್ಯಕ್ಷ ನಿತೀನ್ ಕುಮಾರ್, ಬೆಂಗಳೂರಿನ ಮೀನುಗಾರಿಕೆ ಇಲಾಖೆಯ ನಿರ್ದೇಶಕ ರಾಮಚಾರ್ಯ, ಜಿಲ್ಲಾ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಹರೀಶ್ ಕುಮಾರ್, ಕರ್ನಾಟಕ ಮೀನುಗಾರಿಕೆ ಅಭಿವೃದ್ದಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಎಂ.ಎಲ್. ದೊಡ್ಡಮನಿ ಸೇರಿದಂತೆ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!