ಪಡಿತರ ಚೀಟಿದಾರರ ಇ-ಕೆವೈಸಿಗೆ ಅಂತಿಮ ಅವಕಾಶ
ಮಂಗಳೂರು ಆ.31, 2021: ಸೆಪ್ಟಂಬರ್ 1 ರಿಂದ 10 ವರೆಗೆ ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಬಾಕಿ ಉಳಿದಿರುವ ಫಲಾನುಭವಿಗಳ ಇ-ಕೆವೈಸಿ ನಡೆಸಲಾಗುತ್ತಿದೆ.
2021ರ ಸೆಪ್ಟಂಬರ್ ಮಾಹೆಯಲ್ಲಿ ಇ-ಕೆವೈಸಿ ಮಾಡಲು ಕೊನೆಯ ಅವಕಾಶವಾಗಿದ್ದು, ನಂತರ ಇ-ಕೆವೈಸಿ ಮಾಡದ ಪಡಿತರ ಚೀಟಿದಾರರ ಪಡಿತರ ತಡೆಹಿಡಿಯಲಾಗುವುದು.
ಪಡಿತರ ಚೀಟಿದಾರರು ತಮ್ಮ ಕುಟುಂಬದ ಎಲ್ಲಾ ಸದಸ್ಯರ ಇ-ಕೆವೈಸಿ ನೀಡಬೇಕಾಗಿದ್ದು, ಜಿಲ್ಲೆಯಲ್ಲಿ ಚಾಲ್ತಿ ಇರುವ ಅಂತ್ಯೋದಯ ಹಾಗೂ ಆದ್ಯತಾ ಪಡಿತರ ಚೀಟಿಗಳ ಇ-ಕೆವೈಸಿ ನೀಡಲು ಆಧಾರ್ ಕಾರ್ಡ್, ಎಲ್.ಪಿ.ಜಿ ದಾಖಲೆ, ಜಾತಿ ಪ್ರಮಾಣ ಪತ್ರ(ಇದ್ದಲ್ಲಿ), ಆದಾಯ ಪ್ರಮಾಣ ಪತ್ರ, ಎಂಡೋಸಲ್ಫಾನ್ ಪೀಡಿತರಂತಹ ವಿಶೇಷ ವರ್ಗದವರು ಹೊಂದಿರುವ ಧೃಢಪತ್ರಗಳಿದ್ದಲ್ಲಿ ಅವುಗಳೊಂದಿಗೆ ತಮಗೆ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗೆ ತೆರಳಿ ಇ-ಕೆವೈಸಿ ಮಾಡಿಸಬೇಕು.
2020ರ ಫೆಬ್ರವರಿ ನಂತರ ವಿತರಿಸಿರುವ ಹೊಸ ಹಾಗೂ ತಿದ್ದುಪಡಿ ಮಾಡಲಾದ ಪಡಿತರ ಚೀಟಿಗಳನ್ನು ಬಿಟ್ಟು ಮೊದಲ ಹಂತದಲ್ಲಿ ಇ-ಕೆವೈಸಿ ಮಾಡದಿರುವ ಅಂತ್ಯೋದಯ, ಆದ್ಯತಾ(ಬಿಪಿಎಲ್) ಹಾಗೂ ಆದ್ಯತೇತರ ಪಡಿತರ ಚೀಟಿಗಳಿಗೆ ಇ-ಕೆವೈಸಿ ಕಡ್ಡಾಯವಾಗಿ ಮಾಡಲೇ ಬೇಕಾಗಿದ್ದು ಇ-ಕೆವೈಸಿ ನೀಡಲು ಯಾವುದೇ ಶುಲ್ಕವಿರುವುದಿಲ್ಲ. ಇದನ್ನು ಉಚಿತವಾಗಿ ಮಾಡಲಾಗುತ್ತಿದ್ದು, ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರು ಸಹರಿಸಬೇಕಿದೆ.
ಇ-ಕೆವೈಸಿ ಸಂಗ್ರಹಣೆಗೆ ಯಾರಾದರೂ ಹಣ ಕೇಳಿದಲ್ಲಿ ಅಥವಾ ಏನಾದರೂ ದೂರುಗಳಿದ್ದರೆ ಅಥವಾ ಹೆಚ್ಚಿನ ಮಾಹಿತಿಗೆ ಸಂಬಂಧಪಟ್ಟ ತಾಲೂಕುಗಳ ತಹಶೀಲ್ದಾರರು ಮತ್ತು ಮಂಗಳೂರಿನ ಅನೌಪಚಾರಿಕ ಪಡಿತರ ಪ್ರದೇಶದ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿಯವರ ಕಚೇರಿ ಪ್ರಕಟಣೆ ತಿಳಿಸಿದೆ.