ಶಾಲೆ, ಆಸ್ಪತ್ರೆ ಆವರಣದಲ್ಲಿ ಪೌಷ್ಠಿಕ ಕೈತೋಟ ಅಭಿಯಾನ ಅನುಷ್ಠಾನಕ್ಕೆ ಕ್ರಮ

 ಶಾಲೆ, ಆಸ್ಪತ್ರೆ ಆವರಣದಲ್ಲಿ ಪೌಷ್ಠಿಕ ಕೈತೋಟ ಅಭಿಯಾನ ಅನುಷ್ಠಾನಕ್ಕೆ ಕ್ರಮ
Share this post

ಮಂಗಳೂರು, ಜು. 27, 2021: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ “ಪೌಷ್ಠಿಕ ಕೈತೋಟ ಅಭಿಯಾನವನ್ನು ಜಿಲ್ಲೆಯ ಎಲ್ಲಾ ತಾಲ್ಲೂಕು ಶಾಲೆ, ಕಾಲೇಜು, ವಸತಿ ನಿಲಯ, ಆಸ್ಪತ್ರೆಗಳ ಆವರಣದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ತಿಳಿಸಿದರು.

ಅವರು ಸೋಮವಾರ ನಗರದ ಜಿಲ್ಲಾ ಪಂಚಾಯತ್ ಕಚೇರಿಯ ವಿ.ಸಿ.ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ‘ಪೌಷ್ಠಿಕ ಕೈತೋಟ ಅಭಿಯಾನ” ಕುರಿತ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಾಲಾ ಆವರಣದಲ್ಲಿ ಪೌಷ್ಠಿಕಾಂಶಯುಕ್ತ ತಾಜಾ ಸೊಪ್ಪು ಮತ್ತು ತರಕಾರಿಗಳನ್ನು ಬೆಳೆಸುವುದು ಹಾಗೂ ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆವರಣದಲ್ಲಿ ಔಷಧಿ ಗುಣವುಳ್ಳ ಗಿಡಗಳನ್ನು ಬೆಳೆಸುವಂತೆ ಸೂಚಿಸಿದರು.

ಪೌಷ್ಠಿಕ ಕೈತೋಟ ಅಭಿಯಾನದ ಯಶಸ್ವಿ ಅನುಷ್ಠಾನಕ್ಕಾಗಿ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಅನುಷ್ಠಾನ ಮತ್ತು ಮೇಲ್ವಿಚಾರಣಾ ಸಮಿತಿಯನ್ನು ರಚಿಸಲಾಗುವುದು ಎಂದರು.

ಪ್ರಸ್ತುತ ವರ್ಷದಲ್ಲಿ 50 ಶಾಲೆ, 60 ಅಂಗನವಾಡಿ, 11 ವಸತಿನಿಲಯಗಳು ಮತ್ತು 7 ಹಿಂದುಳಿದ ವರ್ಗಗಳ ವಸತಿನಿಲಯಗಳಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು.

ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಇರುವ ಶಾಲೆ, ಅಂಗನವಾಡಿ, ವಸತಿನಿಲಯಗಳ ಪಟ್ಟಿಯನ್ನು ತಯಾರಿಸಿ ಸಂಬಂಧಿಸಿದ ಶಾಲೆಯ ಮುಖ್ಯೋಪಾಧ್ಯಯರೊಂದಿಗೆ ಚರ್ಚಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು.

ಎಲ್ಲಾ ಶಾಲೆ, ಅಂಗನವಾಡಿ ಮತ್ತು ವಸತಿನಿಲಯಗಳ ಆವರಣದಲ್ಲಿ ವಾತಾವರಣಕ್ಕೆ ಅನುಗುಣವಾಗುವಂತೆ ಮಾವು, ಚಿಕ್ಕು, ಪೇರಳೆ, ನುಗ್ಗೆ, ನೆಲ್ಲಿಕಾಯಿ, ನಿಂಬೆಹಣ್ಣು, ಪಪ್ಪಾಯ ಗಳಂತಹ ಗಿಡಗಳನ್ನು ನೆಡುವಂತೆ ತಿಳಿಸಿದರು.

ಶಾಲೆ, ಕಾಲೇಜು, ಅಂಗನವಾಡಿ, ವಸತಿ ನಿಲಯಗಳು, ಆಸ್ಪತ್ರೆಗಳಲ್ಲಿ ಸೂಕ್ತ ಕಾಂಪೌಂಡ್ ಮತ್ತು ನೀರಿನ ವ್ಯವಸ್ಥೆ ಇರುವುದನ್ನು ಖಚಿತಪಡಿಸಿಕೊಂಡು ಅಂತಹ ಶಾಲೆಗಳನ್ನು ಆಯ್ಕೆಮಾಡಿಕೊಳ್ಳುವಂತೆ ಅವರು ಸಲಹೆ ನೀಡಿದರು.

ಪೌಷ್ಠಿಕ ತೋಟ ಅನುಷ್ಠಾನದ ಹಂತ ಮತ್ತು ಪೂರ್ಣಗೊಂಡ ನಂತರ ವಸತಿ ನಿಲಯ, ಅಂಗನವಾಡಿ, ಆಸ್ಪತ್ರೆಗಳ ಸಿಬ್ಬಂದಿಗಳಿಗೆ ಘಟಕ ನಿರ್ವಹಣೆಯ ಕುರಿತಂತೆ ಸೂಕ್ತ ಮಾರ್ಗದರ್ಶನ ಮತ್ತು ತರಬೇತಿಯನ್ನು ನೀಡುವಂತೆ ಹೇಳಿದರು.

ಸಭೆಯಲ್ಲಿ ತೋಟಗಾರಿಕೆ ಉಪನಿರ್ದೇಶಕ ಎಚ್.ಆರ್. ನಾಯಕ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಯೋಗೇಶ್ ಎಸ್.ಬಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಾಪ ಭೋವಿ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!