ಉರ್ವ ಮಾರುಕಟ್ಟೆ ಸ್ಥಳಾಂತರ: ವರ್ತಕರೊಂದಿಗೆ ಸಭೆ
ಮಂಗಳೂರು, ಜುಲೈ 18, 2021: ಉರ್ವ ಹಳೆಯ ಮಾರುಕಟ್ಟೆಯನ್ನು ನೂತನ ಮಾರುಕಟ್ಟೆಗೆ ಸ್ಥಳಾಂತರಿಸುವ ಕುರಿತು ವರ್ತಕರಿಗಿದ್ದ ಗೊಂದಲಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ ಹಾಗೂ ಶಾಸಕ ವೇದವ್ಯಾಸ್ ಕಾಮತ್ ಅವರ ನೇತೃತ್ವದಲ್ಲಿ ವರ್ತಕರೊಂದಿಗೆ ಸಭೆ ನಡೆಯಿತು.
ವರ್ತಕರು ಸಲ್ಲಿಸಿದ ಬೇಡಿಕೆಗಳನ್ನು ಪೂರೈಸುವ ನಿಟ್ಟಿನಲ್ಲಿ ಶಾಸಕರು ಹಾಗೂ ಮೇಯರ್ ಒಪ್ಪಿಗೆ ಸೂಚಿಸಿದ್ದಾರೆ. ಸರಕಾರಿ ನಿಗದಿತ ಠೇವಣಿ ಮತ್ತು ಬಾಡಿಗೆಯ ಕುರಿತು ಸಭೆಯಲ್ಲಿ ಚರ್ಚಿಸಲಾಗಿದ್ದು ವರ್ತಕರು ಸಮ್ಮತಿಸಿದ್ದಾರೆ. ತರಕಾರಿ, ಹಣ್ಣು ಹಂಪಲು, ಮೀನು, ಮಾಂಸ, ದಿನಸಿ ಸಾಮಾಗ್ರಿ ಹಾಗೂ ಇತರೆ ವ್ಯಾಪಾರಿಗಳನ್ನು ನೂತನ ಮಾರುಕಟ್ಟೆಗೆ ಸ್ಥಳಾಂತರಿಸಲು ತೀರ್ಮಾನಿಸಲಾಯಿತು. ಈಗಾಗಲೇ ವ್ಯಾಪಾರ ಮಾಡುತ್ತಿರುವ ವರ್ತಕರಿಗೆ ಆದ್ಯತೆಯ ಮೇರೆಗೆ ಸರಕಾರದ ಕನಿಷ್ಠ ಠೇವಣಿ ಮತ್ತು ಕನಿಷ್ಠ ಬಾಡಿಗೆಯ ಆಧಾರದಲ್ಲಿ ಅವರಿಗೆ ನೀಡಲು ತೀರ್ಮಾನಿಸಲಾಗಿದೆ. ತಕ್ಷಣವೇ ಸ್ಥಳಾಂತರಿಸಲು, ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಸಭೆಯಲ್ಲಿ ಪಾಲಿಕೆ ಉಪಮೇಯರ್ ಸುಮಂಗಲ ರಾವ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರವಿಶಂಕರ್ ಮಿಜಾರ್, ಪಾಲಿಕೆ ಮುಖ್ಯ ಸಚೇತಕರಾದ ಸುಧೀರ್ ಶೆಟ್ಟಿ ಕಣ್ಣೂರು, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶೋಭಾ ರಾಜೇಶ್, ಸಂದೀಪ್ ಗರೋಡಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ದಿನೇಶ್, ಪಾಲಿಕೆ ಸದಸ್ಯರಾದ ಜಗದೀಶ್ ಶೆಟ್ಟಿ ಬೋಳೂರು, ಗಣೇಶ್ ಕುಲಾಲ್, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ರಾಧಾಕೃಷ್ಣ, ಪಾಲಿಕೆಯ ಅಧಿಕಾರಿಗಳು ಹಾಗೂ ಮಾರುಕಟ್ಟೆಯ ವ್ಯಾಪಾರಿಗಳು ಉಪಸ್ಥಿತರಿದ್ದರು