ರಸ್ತೆ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸಂಸದರ ಸೂಚನೆ

 ರಸ್ತೆ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸಂಸದರ ಸೂಚನೆ
Share this post

ಮಂಗಳೂರು, ಜೂನ್ 17, 2021: ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾ ಪಂಚಾಯತ್ ಕಚೇರಿಯ ನೇತ್ರಾವತಿ ಸಭಾಂಗಣದಲ್ಲಿ ಜುಲೈ 17 ರ ಶನಿವಾರ ಜಿಲ್ಲಾ ಅಭಿವೃದ್ಧಿ ಸಮನ್ವಯ ಉಸ್ತುವಾರಿ ಸಮಿತಿ ಸಭೆ ನಡೆಯಿತು.

ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಕೈಗೊಳ್ಳಲಾದ ವಿವಿಧ ಕಾಮಗಾರಿಗಳು ಹಾಗೂ ಯೋಜನೆಗಳ ಕುರಿತು ಪ್ರಗತಿಯನ್ನು ಪರಿಶೀಲಿಸಿದ ಸಂಸದರು, ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನಗಳು ಹಾಗೂ ಸೂಚನೆಗಳನ್ನು ನೀಡಿದರು.

ರಾಷ್ಟ್ರೀಯ ಹೆದ್ದಾರಿ ಯೋಜನೆಯಡಿ ಕೈಗೊಳ್ಳಲಾದ ವಿವಿಧ ರಸ್ತೆಗಳ ನಿರ್ಮಾಣ ಕಾಮಗಾರಿಯನ್ನು ಅವಧಿಯೊಳಗೆ ಪೂರ್ಣಗೊಳಿಸಬೇಕು. ಗುತ್ತಿಗೆದಾರರ ಸಮಸ್ಯೆ ಇದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರಬೇಕು. ಗುತ್ತಿಗೆದಾರರನ್ನು ಬದಲಾಯಿಸಿ ಯೋಜನೆಗಳನ್ನು ಮುಂದುವರಿಸಬೇಕು. ಕಳೆದ ಮೂರು ತಿಂಗಳಿಂದ ವಿವಿಧ ರಸ್ತೆ ನಿರ್ಮಾಣ ಕಾಮಗಾರಿಗಳು ವಿಧಾನವಾಗಿದ್ದು ಅವುಗಳಿಗೆ ಚುರುಕು ನೀಡಬೇಕು. ನಿರ್ಮಾಣ ಕಾಮಗಾರಿಗೆ ಹಿಂಜರಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಸೂಚಿಸಿದರು.

ಲೋಕೋಪಯೋಗಿ ಇಲಾಖೆ ವತಿಯಿಂದ ಮೂಡುಬಿದರೆ – ಕಲ್ಲುಬೆಟ್ಟ, ಜೋಕಟ್ಟೆಯಿಂದ ಬೈಕಂಪಾಡಿ, ಮಂಗಳ ಪೇಟೆಯಿಂದ ಗುರುಪುರ ವರೆಗೆ ಕೆಲವು ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿವೆ. ಕೆಲ ರಸ್ತೆ ಕಾಮಗಾರಿಗೆ 2 ವರ್ಷಗಳ ಹಿಂದೆ ಭೂಮಿಪೂಜೆ ನೆರವೇರಿಸಿದರೂ ಇದುವರೆಗೂ ಆರಂಭಗೊಂಡಿಲ್ಲ. ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಮತ್ತೊಮ್ಮೆ ಟೆಂಡರ್ ಕರೆಯುವಂತೆ ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಬಿಸಿರೋಡ್ – ಪೆರಿಯಶಾಂತಿ ಕಾಮಗಾರಿಗಳನ್ನು ಕೂಡಲೇ ಆರಂಭಿಸಬೇಕು, ಕೊಟ್ಟಾರ ಚೌಕಿಯ ಕೋಡಿಕಲ್ ರಸ್ತೆ ಹತ್ತಿರದ 400 ಮೀಟರ್ ಸರ್ವಿಸ್ ರಸ್ತೆ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು ವಿದ್ಯುತ್ ಕಂಬವನ್ನು ಮೆಸ್ಕಾಂನವರು ಕೂಡಲೇ ಸ್ಥಳಾಂತರ ಮಾಡಬೇಕು ಎಂದರು.

ರೈತರಿಗೆ ನೆರವಾಗಲು ತೋಟಗಾರಿಕೆ ಇಲಾಖೆಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯಡಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಒಗ್ಗೂಡಿಸಲು ಸಾಕಷ್ಟು ರೈತರ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರಲ್ಲದೆ ಗೋಂಡಂಬಿಗೆ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ದರ ಮತ್ತು ಬೇಡಿಕೆ ಇದ್ದು ಬೆಳೆ ನಶಿಸಿದಲ್ಲಿ ಅಥವಾ ಇಳುವರಿ ಕುಗ್ಗಿದಲ್ಲಿ ಅದರ ಪುನಶ್ಚೇತನಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ತಿಳಿಸಿದರು.

ಎನ್.ಆರ್.ಎಲ್.ಎಮ್ ಯೋಜನೆಯಡಿ 180 ಫಲಾನುಭವಿಗಳು ಅಣಬೆ ಕೃಷಿಯನ್ನು ಹಾಗೂ 13 ಫಲಾನುಭವಿಗಳು ಹೈನುಗಾರಿಕೆಯನ್ನು ಮಾಡುತ್ತಿದ್ದು ಇದನ್ನು ಸ್ಥಳೀಯವಾಗಿ ಮಾರುಕಟ್ಟೆಗಳಲ್ಲಿ ವ್ಯಾಪರ ಮಾಡಲಾಗುತ್ತಿದ್ದೆ ಎಂದು ಹೇಳಿದರು.

ಮೇವು ಕತ್ತರಿಸುವಯಂತ್ರ ಯೋಜನೆಯಡಿ ಎಲ್ಲಾ ಫಲಾನುಭವಿಗಳಿಗೂ ಯಂತ್ರಗಳನ್ನು ನೀಡಲಾಗಿದ್ದು. ಪಶು ಭಾಗ್ಯಯೋಜನೆಯಡಿ 126 ಫಲಾನುಭವಿಗಳಿಗೆ ಸಹಾಯಧನ ಮತ್ತು ರಾಷ್ಟ್ರೀಯ ಜಾನುವಾರು ಯೋಜನೆಯಡಿ 11 ಆಡು ಸಾಕಾಣಿಕೆ ಘಟಕವು ಮಂಜೂರಾಗಿದೆ ಎಂದು ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಮಾತನಾಡಿ, ಕೋವಿಡ್‍ನ ಮೂರನೇ ಅಲೆ ಎದುರಾದಲ್ಲಿ, ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿದ್ದು, ಅದಕ್ಕೆ ಮುಂಜಾಗ್ತತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಮಳೆಗಾಲದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದ್ದು ಅದಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ನೀರು ನಿಲ್ಲುವ ಜಾಗಗಳನ್ನು ಗುರುತಿಸಿ ಫಾಗಿಂಗ್ ಅಥವಾ ಮಿನುಗಳನ್ನು ಬಿಡುವ ಮುಖಾಂತರ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಮಹಾನಗರ ಪಾಲಿಕೆ ಆಯುಕ್ತರಾದ ಅಕ್ಷಯ್ ಶ್ರೀಧರ್, ಮಹಾನಗರ ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿದರು.

ಶಾಸಕರಾದ ಭರತ್ ಶೆಟ್ಟಿ, ಉಮನಾಥ್ ಕೋಟ್ಯಾನ್ ಹಾಗೂ ರಾಜೇಶ್ ನಾಯ್ಕ್ ಸಭೆಯಲ್ಲಿದ್ದರು.

Subscribe to our newsletter!

Other related posts

error: Content is protected !!