ಕಾನೂನು ಬಾಹಿರವಾಗಿ ತಂಬಾಕು ಉತ್ಪನ್ನಗಳ ಮಾರಾಟ: ತನಿಖಾ ದಳದಿಂದ ದಾಳಿ

 ಕಾನೂನು ಬಾಹಿರವಾಗಿ ತಂಬಾಕು ಉತ್ಪನ್ನಗಳ ಮಾರಾಟ: ತನಿಖಾ ದಳದಿಂದ ದಾಳಿ
Share this post

ಕಾರವಾರ, ಜುಲೈ 9, 2021: ಹೊನ್ನಾವರ ತಾಲೂಕಿನ ಮಂಕಿ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ತಂಬಾಕು ಮತ್ತು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಇತ್ತಿಚಿಗೆ ತಂಬಾಕು ತನಿಖಾದಳದ ಅಧಿಕಾರಿಗಳು ದಾಳಿ ನಡೆಸಿದರು.

ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಪಟ್ಟಣ ಪಂಚಾಯತ್ ಮತ್ತು ತಾಲೂಕಾ ತಂಬಾಕು ತಂಬಾಕು ತನಿಖಾದಳದ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆದಿದೆ. ಕೋಟ್ಪಾ-2003ರ ಕಾಯ್ದೆಯಡಿ ಸೆಕ್ಷನ್ 4 ರಂತೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿದೆ. ಆದರೂ ಸೆಕ್ಷನ್ 4ರ ನಾಮಫಲಕವನ್ನು ಅಳವಡಿಸದಿರುವ ಕಾರಣ 17 ಪ್ರಕರಣಗಳನ್ನು ದಾಖಲಿಸಿದ್ದು, 1,500 ರೂ ದಂಡ ಹಾಕಲಾಗಿದೆ. ಸೆಕ್ಷನ್ 6(ಎ) ರಂತೆ 18 ವರ್ಷದೊಳಗಿನ ವ್ಯಕ್ತಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಹಾಗೂ ಅವರಿಂದ ಮಾರಾಟ ಮಾಡಿಸುವುದು ಶಿಕ್ಷಾರ್ಹ ಅಪರಾಧವಾಗಿದ್ದು ಹಾಗೂ ಸೆಕ್ಷನ್ 6(ಎ) ರ ನಾಮಫಲಕವನ್ನು ಅಳವಡಿಸದಿರುವ ಕಾರಣ ಸದರಿ ಸೆಕ್ಷನ್ ಅಡಿಯಲ್ಲಿ 17 ಪ್ರಕರಣಗಳನ್ನು ದಾಖಲಿಸಿ 1,400 ರೂ ದಂಡ ವಿಧಿಸಲಾಗಿದೆ.

ದಾಳಿಯಲ್ಲಿ ಒಟ್ಟಾರೆ 34 ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟು 2,900 ರೂ ದಂಡ ವಿಧಿಸಿ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿ ಎಚ್ಚರಿಕೆ ನೀಡಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ದಾಳಿ ವೇಳೆಯಲ್ಲಿ ಎನ್‍ಟಿಸಿಪಿ ಜಿಲ್ಲಾ ಸಲಹೆಗಾರ ಪ್ರೇಮಕುಮಾರ ನಾಯ್ಕ, ತಾಲೂಕಾ ಆರೋಗ್ಯಾಧಿಕಾರಿ ಡಾ. ಉಷಾ ಹಾಸ್ಯಗಾರ, ಎನ್‍ಟಿಸಿಪಿ ಸಮಾಜ ಕಾರ್ಯಕರ್ತ ಗೋರೇಸಾಬ ನದಾಫ ಸೇರಿದಂತೆ ಪೊಲೀಸ್, ಪಟ್ಟಣ ಪಂಚಾಯತ್ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!