ಮೊಬೈಲ್ ಆಪ್ ಮೂಲಕ ಬೆಳೆ ಸಮೀಕ್ಷೆ
ಮಂಗಳೂರು, ಜುಲೈ 04, 2021: 2021-22 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯಕ್ರಮ ಈಗಾಗಲೇ ಚಾಲನೆಯಾಗಿದ್ದು, ತಮ್ಮ ಜಮೀನುಗಳಲ್ಲಿ ತಾವು ಬೆಳೆದ ಬೆಳೆಯ ಮಾಹಿತಿ ವಿಸ್ತೀರ್ಣಗಳ ವಿವರವನ್ನು ರೈತರೇ ಸ್ವತಃ ಆಪ್ ಮೂಲಕ ದಾಖಲಿಸಬಹುದಾಗಿದೆ.
ರೈತರು ತಮ್ಮ ಆಂಡ್ರಾಯ್ಡ್ ಮೊಬೈಲ್ ಮೂಲಕ ಪ್ಲೇ ಸ್ಟೋರ್ನಲ್ಲಿ Farmers Crop Survey App 2021-22 ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಆರ್ಥಿಕ ವರ್ಷ ಹಾಗೂ ಋತು ದಾಖಲಿಸಬೇಕು.
ರೈತರ ಆಧಾರ್ ಕ್ಯೂ.ಆರ್ ಕೋಡ್ ಅಥವಾ ಆಧಾರ್ ಮಾಹಿತಿಯನ್ನು ದಾಖಲಿಸಿ, ಮೊಬೈಲ್ ಸಂಖ್ಯೆ ನಮೂದಿಸಿ ಸಕ್ರಿಯಗೊಳಿಸಬೇಕು. ನಮೂದಿಸಿದ ಮೊಬೈಲ್ ಸಂಖ್ಯೆಗೆ ಬರುವ OTP ಸಂಖ್ಯೆಯನ್ನು ನಮೂದಿಸಿ ನೋಂದಣಿ ಮಾಡಿಕೊಳ್ಳಬೇಕು. ಮಾಸ್ಟ್ರ್ ವಿವರಗಳನ್ನು ಮತ್ತು ಪಹಣಿ ಮಾಲೀಕರ ವಿವರಗಳನ್ನು ಡೌನ್ಲೋಡ್ ಮಾಡಿಕೊಂಡು ತಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿ ಸರ್ವೆ ನಂಬರ್ ಹಾಗೂ ಹಿಸ್ಸಾ ನಮೂದಿಸಿ ನಂತರ ಮಾಲೀಕನ ಹೆಸರು ಮತ್ತು ವಿಸ್ತೀರ್ಣವನ್ನು ನಮೂದಿಸಿದ ನಂತರ ತಮ್ಮ ಜಮೀನಿನ ಸರ್ವೇ ನಂಬರ್ ಗಡಿ ರೇಖೆಯೊಳಗೆ ನಿಂತು ಬೆಳೆಯ ವಿವರವನ್ನು ಮತ್ತು ಛಾಯಾ ಚಿತ್ರವನ್ನು ದಾಖಲಿಸಿ ಅಪ್ಲೋಡ್ ಮಾಡಬೇಕು.
ಸಮೀಕ್ಷೆಯಿಂದ ಪಡೆದ ವರದಿಯನ್ನು ಕನಿಷ್ಟ ಬೆಂಬಲ ಬೆಲೆ ನಿಗದಿ, ಬೆಳೆ ಪರಿಹಾರ, ಬೆಳೆ ವಿಮಾ ಯೋಜನೆ, ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್ ಅಡಿಯಲ್ಲಿ ಸಹಾಯಧನ, ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಬೆಳೆ ಹಾನಿ ಪರಿಹಾರ, ಅರ್ಹ ಫಲಾನುಭವಿಗಳನ್ನು ಗುರುತಿಸುವುದು, ಆರ್ಟಿಸಿಯಲ್ಲಿ ಬೆಳೆ ವಿವರ ದಾಖಲಾತಿ ಇತ್ಯಾದಿಗಳಿಗೆ ಪರಿಗಣಿಸಲಾಗುವುದು ಎಂದು ಮಂಗಳೂರು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.