ಮಲೆನಾಡಿನಲ್ಲಿ ಹುಳಿ ಮಣ್ಣು ನಿರ್ವಹಣ ಕ್ರಮ
ಚಿಕ್ಕಮಗಳೂರು.ಜು. 03, 2021: ಅಗ್ರಿವಾರ್ ರೂಂ ವತಿಯಿಂದ ಭಾರತ ಅಮೃತ ಮಹೊತ್ಸವದ ಪ್ರಯುಕ್ತ ಮಲೆನಾಡು ಪ್ರದೇಶಗಳಲ್ಲಿ ಹುಳಿ ಮಣ್ಣು ಸಮಸ್ಯೆಯಿಂದ ಮಣ್ಣಿನ ಆರೋಗ್ಯ ಕ್ಷೀಣಿಸುತ್ತಿದ್ದು, ಇದರ ಪರಿಣಾಮವಾಗಿ ವ್ಯವಸಾಯ ಮಾಡುವಾಗ ಹಲವಾರು ಸಮಸ್ಯೆಗಳು ಎದುರಾಗುತ್ತಿವೆ. ಮಣ್ಣಿನ ರಸ ಸಾರವು ೬.೫೦ ಕ್ಕಿಂತ ಕಡಿಮೆ ಇದ್ದ ಮಣ್ಣಿಗೆ ಹುಳಿ ಮಣ್ಣು ಎಂದು ಕರೆಯಲಾಗುತ್ತದೆ.
ಮಣ್ಣು ಹುಳಿಯಾಗುಲು ಮುಖ್ಯವಾದ ಕಾರಣ: ಅತಿ ಹೆಚ್ಚು ಮಳೆ ಬೀಳುವ ಪ್ರದೆಶಗಳಲ್ಲಿ, ಮಣ್ಣಿನ ಕಣಗಳ ಮೇಲಿರುವ ಧನಪೂರಿತ ಪೊಷಕಾಂಶ ಧಾತುಗಳು (ಕ್ಯಾಲ್ಸಿಯಂ, ಮೇಗ್ನೇಶಿಯಂ, ಪೊಟ್ಯಾಶ್) ನೀರಿನಲ್ಲಿ ಸುಲಭವಾಗಿ ವಿಲೀನವಾಗಿ ಬಸಿದು ಹೋಗುವುದು, ಹಾಗೇಯೆ ಆಮ್ಲವನ್ನು ಬಿಡುಗಡೆ ಮಾಡುವ ಗೊಬ್ಬರಗಳ ಬಕೆಯಿಂದಾಗಿ ಹುಳಿ ಮಣ್ಣಿನ ಸಮ್ಯಸೆ ಉಂಟಾಗುತ್ತಿದೆ. ಉದಾಹರಣೆಗೆ ಅಮೋನಿಯಂ ಸಲ್ಫೇಟ್, ಅಮೋನಿಯಂ ನೈಟ್ರೇಟ್ ಗೊಬ್ಬರಗಳು ಮಣ್ಣಿಗೆ ಸೇರಿಸಿದಾಗ ಮಣ್ಣಿನ ಆಮ್ಲಿಯತೆಯನ್ನು ಹೆಚ್ಚಿಸುತ್ತದೆ.
ಹುಳಿ ಮಣ್ಣಿನ ಪರಿಣಾಮದಿಂದಾಗಿ ಎದುರಿಸಬಹುದಾದ ಸಮಸ್ಯೆ: ಈ ಹುಳಿ ಮಣ್ಣಿನಲ್ಲಿ ಕ್ಯಾಲ್ಸಿಯಂ, ಮೇಗ್ನೇಶಿಯಂ ಮತ್ತು ಪೊಟ್ಯಾಶ್ ಅಂಶವು ಬಸಿದು ಹೋಗಿರುವದರಿಂದ ಅವುಗಳ ಕೊರತೆಯನ್ನು ಕಾಣಬಹುದು ಜೊತೆಗೆ ರಂಜಕದ ಕೊರತೆಯು ತೀವ್ರವಾಗಿ ಕಂಡುಬರುತ್ತದೆ. ಇದರ ಕಾರಣವಾಗಿ, ಇಂತಹ ಮಣ್ಣಿನಲ್ಲಿ ಬೆಳೆಗಳ ಬೆಳೆವಣಿಗೆ ಕುಂಠಿತಗೊಂಡು, ಉತ್ಪನ್ನವನ್ನು ಕಡಿಮೆಮಾಡುತ್ತದೆ. ಅತಿಯಾದ ಹುಳಿ ರಸ ಸಾರದಿಂದ, ಮಣ್ಣಿನಲ್ಲಿರುವ ಜೈವಿಕ ಕ್ರೀಯೆಗಳಲ್ಲಿ ಏರುಪೇರಾಗುತ್ತದೆ. ಹುಳಿ ಮಣ್ಣಿನ ಸಮಸ್ಯೆಯಿಂದಾಗಿ ಭತ್ತದ ಗದ್ದೆಗಳಲ್ಲಿ ಅಲ್ಯೂಮಿನಿಯಂ ಮತ್ತು ಕಬ್ಬಿಣದ ಧಾತುವಿನ ಕರಗುವಿಕೆ ಹೆಚ್ಚಾಗಿರುವುದರಿಂದ, ಬೆಳೆಯುವ ಪೈರಿಗೆ ನಂಜನ್ನುಂಟು ಮಾಡುತ್ತದೆ.
ಹುಳಿ ಮಣ್ಣಿನಲ್ಲಿ ಹೆಚ್ಚಾಗಿರುವ ಕಬ್ಬಿಣ ಹಾಗು ಅಲ್ಯೂಮಿನಿಯಂ ಧಾತುಗಳು ರಸಗೊಬ್ಬರದ ರಂಜಕದೊಡನೆ ಬೆರೆತು ನೀರಿನಲ್ಲಿ ಕರಗದ ಅಲ್ಯೂಮಿನಿಯಂ ಮತ್ತು ಕಬ್ಬಿಣದ ಫಾಸ್ಟೇಟ್ ಆಗಿ ರೂಪಾಂತರಗೊಂಡು ಬೆಳೆಗಳಿಗೆ ರಂಜಕವು ಲಭ್ಯವಾಗುವುದಿಲ್ಲ.
ಹುಳಿ ಮಣ್ಣು ಸುಧಾರಣೆ ಕ್ರಮಗಳು: ಸುಣ್ಣದ ಅವಶ್ಯಕತೆಯ ಪ್ರಮಾಣವನ್ನು ಮಣ್ಣು ಪರೀಕ್ಷೆ ಆಧಾರಿತ, ರಸಸಾರದ ಮೇಲೆ ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಮಾತ್ರ ಹಾಕಬೇಕು. ಸುಣ್ಣದ ಬಳಕೆಯಿಂದ ಮಣ್ಣಿನ ಹುಳಿ ರಸಸಾರವನ್ನು ನಿವಾರಿಸಬಹುದಲ್ಲದೆ ಅದರ ಜೊತೆಗೆ ಬೆಳೆಗೆ ಅವಶ್ಯವಿರುವ ಕ್ಯಾಲ್ಸಿಯಂ ಹಾಗೂ ಮ್ಯಾಗ್ನೀಷಿಯಂ ಪೂರೈಸಿದಂತಾಗುತ್ತದೆ.
ಸಾಮಾನ್ಯವಾಗಿ ಮರಳು ಮಣ್ಣಿಗೆ ಹೆಕ್ಟೇರ್ ಗೆ ೫೦೦ ಕೆ.ಜಿ ಮತ್ತು ಜೇಡಿ ಅಂಶವಿರುವ ಮಣ್ಣಿಗೆ ಹೆಕ್ಟೇರ್ ಗೆ ೭೦೦ ಕೆ.ಜಿ ಸುಣ್ಣ ಬಳಸಬೇಕು. ಮಣ್ಣು ಮತ್ತು ಸುಣ್ಣ ಪರೀಕ್ಷೆ ಮಾಡಿಸದೆ, ಹೆಚ್ಚು ಪ್ರಮಾಣದಲ್ಲಿ ಸುಣ್ಣ ಸೇರಿಸಿದಲ್ಲಿ ಮಣ್ಣಿನ ರಸ ಸಾರವು ಅತಿ ಹೆಚ್ಚಾಗಿ, ಲಘು ಪೋಷಕಾಂಶ ಹಾಗೂ ರಂಜಕದ ಕೊರತೆಯಿಂದ ಬೆಳೆಯು ನಷ್ಟವಾಗುವ ಸಾಧ್ಯತೆಯು ಇರುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಸುಣ್ಣವನ್ನು ಒಂದು ಬಾರಿಯಲ್ಲಿ ತೋಟಗಳಲ್ಲಿ ಹಾಕುವ ಮೂಲಕ ಮೇಲೆ ತಿಳಿಸಿದ ಹಾನಿಯನ್ನು ತಡೆಯಬಹುದು.
ಹುಳಿ ಮಣ್ಣಿನ ಸುಧಾರಕ ಸಾಮಾಗ್ರಿಗಳು: ಮಣ್ಣಿನ ಅಮ್ಲತೆಯನ್ನು ನಿವಾರಿಸಲು ಸುಣ್ಣವಿರುವ ಪದಾರ್ಥಗಳಾದ, ಕ್ಷಾರ ಸುಣ್ಣ (ಕ್ಯಾಲ್ಸಿಯಂ ಕಾರ್ಬೊನೇಟ್), ಸುಟ್ಟ ಸುಣ್ಣ (ಕ್ಯಾಲ್ಸಿಯಂ ಆಕ್ಸೈಡ್), ನೀರು ಬೆರೆಸಿದ ಸುಣ್ಣ (ಕ್ಯಾಲ್ಸಿಯಂ ಹೈಡ್ರಾಕ್ಸೈಡ್), ಡೊಲೋಮೈಟ್ (ಕ್ಯಾಲ್ಸಿಯಂ ಮೆಗ್ನೀಸಿಯಂ ಕಾರ್ಬೊನೇಟ್), ಕಾಗದ ಕಾರ್ಖಾನೆಯ ರೊಜ್ಜು (ಸ್ಲಡ್ಜ್) ಹಾಗೂ ಉಕ್ಕು ಕಾರ್ಖಾನೆಯ ಕಿಟ್ಟ (ಬೇಸಿಕ್, ಸ್ಲಾಗ್) ಮುಂತಾದವುಗಳನ್ನು ಬಳಸಬಹುದಾಗಿದೆ.
ಹುಳಿ ಮಣ್ಣು ನಿರ್ಲಕ್ಷಿಸದೆ ಅದನ್ನು ಸೂಕ್ತ ರೀತಿಯಲ್ಲಿ ಸುಧಾರಣೆ ಮಾಡಿ ಮಣ್ಣಿನ ಆರೋಗ್ಯವನ್ನು ಕಾಪಾಡುವುದರ ಜೋತೆಗೆ ಉತ್ತಮ ಬೆಳೆ ಬೆಳೆದು ಅಧಿಕ ಇಳುವರಿಯನ್ನು ಸಹ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ (ಮಣ್ಣು ವಿಜ್ಞಾನ) ಡಾ. ಡಿ ಧನಲಕ್ಷ್ಮಿ ಮೊ.ಸಂ: ೮೦೫೦೪೦೬೫೬೭ ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.