ಕೋವಿಡ್ 3 ನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಅಗತ್ಯ ಸಿದ್ದತೆ : ಜಿ.ಜಗದೀಶ್
ಉಡುಪಿ ಜುಲೈ 2, 2021: ಕೋವಿಡ್ 3ನೇ ಅಲೆಯು ಮಕ್ಕಳನ್ನು ಬಾಧಿಸಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಹಿನ್ನಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಮಕ್ಕಳನ್ನು ಕೋವಿಡ್ 3 ನೇ ಅಲೆಯಿಂದ ರಕ್ಷಿಸುವ ಕುರಿತಂತೆ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮೆಡಿಕಲ್ ಎಕ್ಸ್ಪರ್ಟ್ ಕಮಿಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪೋಷಕರು ಅನಗತ್ಯವಾಗಿ ತಮ್ಮ ಮಕ್ಕಳನ್ನು ಜನಸಂದಣಿ ಇರುವ ಪ್ರದೇಶಗಳಿಗೆ ಕರೆದೊಯ್ಯದೇ , ಮಕ್ಕಳಿಗೆ ಮನೆಯಲ್ಲಿಯೇ ಸಿದ್ದಪಡಿಸಿದ ಪೌಷ್ಠಿಕ ಆಹಾರ ನೀಡುವುದರ ಮೂಲಕ ರೋಗ-ನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕು
ಮಕ್ಕಳನ್ನು ಕೋವಿಡ್ 3 ನೇ ಅಲೆಯಿಂದ ರಕ್ಷಿಸುವ ಕುರಿತಂತೆ ಈಗಾಗಲೇ ಭಾರತೀಯ ಮಕ್ಕಳ ವೈದ್ಯರ ಸಂಘವು ಸಿದ್ದಪಡಿಸಿರುವ ಮಾರ್ಗಸೂಚಿಯನ್ನು ಜಿಲ್ಲೆಯಲ್ಲಿ ಅನುಷ್ಠಾನ ಮಾಡಲು ಈಗಿನಿಂದಲೇ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಮಕ್ಕಳ ಚಿಕಿತ್ಸೆಗಾಗಿ ಕೆಎಂಸಿ ಯಲ್ಲಿ 40 ಐಸಿಯು ಬೆಡ್ ಗಳು ಮತ್ತು ಜಿಲ್ಲಾಸ್ಪತ್ರೆ ಮತ್ತು ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಒಟ್ಟು 60 ಬೆಡ್ ಗಳನ್ನು ಸಿದ್ದಪಡಿಸುವಂತೆ ತಿಳಿಸಿದರು.
ಮಕ್ಕಳಿಗೆ ಕೋವಿಡ್ ಚಿಕಿತ್ಸೆ ನೀಡುವ ಕುರಿತಂತೆ ಜಿಲ್ಲೆಯ ಸರ್ಕಾರಿ ಮಕ್ಕಳ ವೈದ್ಯರೊಂದಿಗೆ , ಎಲ್ಲಾ ಖಾಸಗಿ ಆಸ್ಪತ್ರೆಗಳ ಮಕ್ಕಳ ತಜ್ಞರು ಅಗತ್ಯ ಸಹಕಾರ ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಮಕ್ಕಳಿಗೆ ನೀಡಬೇಕಾದ ಚಿಕಿತ್ಸೆ ವಿಧಾನಗಳ ಕುರಿತು ಭಾರತೀಯ ಮಕ್ಕಳ ವೈದ್ಯರ ಸಂಘ ಸಿದ್ದಪಡಿಸಿರುವ ವಿಧಾನಗಳ ಬಗ್ಗೆ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರು ಮತ್ತು ಶುಶ್ರೂಷಕ ಸಿಬ್ಬಂದಿಗೆ ಮಣಿಪಾಲದ ಕೆ.ಎಂ.ಸಿಯಲ್ಲಿ ತರಬೇತಿ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ವೈದ್ಯಕೀಯ ಉಪಕರಣಗಳ ಬಳಕೆ ಕುರಿತಂತೆ ತಾಂತ್ರಿಕ ತರಬೇತಿಯನ್ನೂ ಸಹ ನೀಡುವಂತೆ ಜಿ.ಜಗದೀಶ್ ತಿಳಿಸಿದರು.
ಪೋಷಕರು ಅನಗತ್ಯವಾಗಿ ತಮ್ಮ ಮಕ್ಕಳನ್ನು ಜನಸಂದಣಿ ಇರುವ ಪ್ರದೇಶಗಳಿಗೆ ಕರೆದೊಯ್ಯದೇ , ಮಕ್ಕಳಿಗೆ ಮನೆಯಲ್ಲಿಯೇ ಸಿದ್ದಪಡಿಸಿದ ಪೌಷ್ಠಿಕ ಆಹಾರ ನೀಡುವುದರ ಮೂಲಕ ರೋಗ-ನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕು ಎಂದು ಸಭೆಯಲ್ಲಿದ್ದ ಮಕ್ಕಳ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಹೆಚ್ಓ ಡಾ.ನಾಗಭೂಷಣ ಉಡುಪ, ಕೋವಿಡ್ ನೋಡೆಲ್ ಅಧಿಕಾರಿ ಡಾ.ಪ್ರಶಾಂತ ಭಟ್ ಹಾಗೂ ಜಿಲ್ಲೆಯ ವಿವಿಧ ಆಸ್ಪತ್ರೆಗಳ ತಜ್ಞ ವೈದ್ಯರು ಮತ್ತು ಆರೋಗ್ಯಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.