ಕಟ್ಟಡ ಕಾರ್ಮಿಕರಿಗೆ ಸುರಕ್ಷತಾ ಕಿಟ್ ವಿತರಣೆ
ಮಂಗಳೂರು, ಜುಲೈ 01, 2021: ಲಾಕ್ಡೌನ್ ಕಾರಣದಿಂದ ಸಂಕಷ್ಟಕ್ಕೆ ಒಳಗಾಗಿರುವ ಕಟ್ಟಡ ಕಾರ್ಮಿಕರಿಗೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಸುರಕ್ಷತಾ ಮತ್ತು ನೈರ್ಮಲ್ಯೀಕರಣ ಕಿಟ್ಗಳನ್ನು ಒದಗಿಸಿದ್ದು, ಜೂನ್ 30 ರಂದು ಪದವಿನಂಗಡಿಯಲ್ಲಿರುವ ಕಟ್ಟಡ ನಿರ್ಮಾಣದ ಸ್ಥಳದಲ್ಲಿರುವ 52 ಕಟ್ಟಡ ಕಾರ್ಮಿಕರಿಗೆ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಎ.ಜೆ. ಶಿಲ್ಪಾ ಸುರಕ್ಷತಾ ಕಿಟ್ಗಳನ್ನು ವಿತರಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಎ.ಜೆ. ಶಿಲ್ಪಾ, ಮಾತನಾಡಿ, ಮಹಿಳೆಯರಿಗೆ ಮತ್ತು ಪುರುಷ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯ ವತಿಯಿಂದ ಪ್ರತ್ಯೇಕವಾಗಿ ಒದಗಿಸಿರುವ ಸುರಕ್ಷತಾ ಮತ್ತು ನೈರ್ಮಲ್ಯೀಕರಣ ಕಿಟ್ಗಳನ್ನು ಸದುಪಯೋಗಿಸಿಕೊಂಡು, ಕೆಲಸದ ಸ್ಥಳದಲ್ಲಿ ನೈರ್ಮಲ್ಯತೆ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಂಡು ಆರೋಗ್ಯ ಕಾಪಾಡಿಕೊಳ್ಳುವಂತೆ ಸೂಚಿಸಿದರು.
ಸಹಾಯಕ ಕಾರ್ಮಿಕ ಆಯುಕ್ತರು ಮಾತನಾಡಿ ಕಾರ್ಮಿಕ ಇಲಾಖೆಂಯು ಕಟ್ಟಡ ಕಾರ್ಮಿಕರಿಗೆ ಶೈಕ್ಷಣಿಕ, ಪೆನ್ಶನ್, ಮದುವೆ, ಹೆರಿಗೆ, ವೈದ್ಯಕೀಯ ವೆಚ್ಚ ಮುಂತಾದ ಸೌಲಭ್ಯಗಳನ್ನು ನೀಡುತ್ತಿದೆ. ನೊಂದಾಯಿತ ಕಾರ್ಮಿಕರಿಗೆ ಕೋವಿಡ್-19 ಹಿನ್ನೆಲೆಯಲ್ಲಿ 3000 ರೂ. ನೇರವಾಗಿ ಅವರ ಖಾತೆಗಳಿಗೆ ಜಮೆ ಮಾಡಲಾಗಿದೆ. ಎಲ್ಲಾ ಕಾರ್ಮಿಕರು ಸರ್ಕಾರದಿಂದ ಬಂದಿರುವ ಆಹಾರ ಮತ್ತು ಸುರಕ್ಷತಾ ಕಿಟ್ಗಳನ್ನು ಪಡೆದು ಹಾಗೆಯೇ ಎಲ್ಲಾ ಸೌಲಭ್ಯಗಳನ್ನು ಪಡೆದು ಇಲ್ಲಿಯೇ ಇದ್ದು ಕೆಲಸ ನಿರ್ವಹಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಕಾರ್ಮಿಕ ಆಯುಕ್ತರಾದ ಕೆ.ಬಿ.ನಾಗರಾಜ್, ಕಾರ್ಮಿಕ ಅಧಿಕಾರಿ ವಿಲ್ಮಾ ತಾವ್ರೊ ಹಾಗೂ ಅಮರೇಂದ್ರ, ಹಿರಿಯ ಕಾರ್ಮಿಕ ನಿರೀಕ್ಷಕರು, ಮೇರಿ ಡಯಾಸ್ ಮತ್ತು ವಿರೇಂದ್ರ ಕುಂಬಾರ್ ಹಾಜರಿದ್ದರು.