ಉಡುಪಿ ಜಿಲ್ಲೆಯಲ್ಲಿ ಎಲ್ಲಾ ಶಾಲಾ ಮಕ್ಕಳ ಆರೋಗ್ಯ ತಪಾಸಣೆ: ಉಸ್ತುವಾರಿ ಸಚಿವ ಬೊಮ್ಮಾಯಿ
ಉಡುಪಿ ಜೂನ್ 21, 2021: ಉಡುಪಿ ಜಿಲ್ಲೆಯಲ್ಲಿ ಕೋವಿಡ್ 3 ನೇ ಅಲೆಯನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೂಚಿಸಿದರು.
ಅವರು ಇಂದು ವೀಡಿಯೋ ಸಂವಾದದ ಮೂಲಕ ಜಿಲ್ಲೆಯ ಕೋವಿಡ್ ಸ್ಥಿತಿಗತಿ ಕುರಿತು ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಮಕ್ಕಳಿಗೆ ಕೋವಿಡ್ 3 ನೇ ಅಲೆಯಿಂದ ಯಾವುದೇ ತೊಂದರೆಯಾಗದ ಕುರಿತಂತೆ ತಕ್ಷಣದಿಂದಲೇ ಜಿಲ್ಲೆಯ ಎಲ್ಲಾ ಶಾಲಾ ವ್ಯಾಪ್ತಿಯಲ್ಲಿನ ಮಕ್ಕಳ ವಿವರಗಳನ್ನು ಸಂಗ್ರಹಿಸಿ, ಅವರ ವ್ಯಾಸಾಂಗ ಮಾಡುತ್ತಿರುವ ಶಾಲೆಯಲ್ಲಿಯೇ ಅವರ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡಿ, ತಪಾಸಣಾ ಸಂದರ್ಭದಲ್ಲಿ ಒಬ್ಬರು ಎಂ.ಬಿ.ಬಿಎಸ್ ವೈದ್ಯರು , ಆಯುಷ್ ವೈದ್ಯರು ಮತ್ತು ಮಕ್ಕಳ ತಜ್ಞರನ್ನು ತಂಡವಾಗಿ ನಿಯೋಜಿಸಿ, ಪ್ರತೀ ಗ್ರಾಮಗಳಲ್ಲಿನ ಶಾಲೆಗಳಿಗೆ ಭೇಟಿ ನೀಡಲು ಯೋಜನೆ ರೂಪಿಸಿ ಎಂದರು.
ಮಕ್ಕಳ ಆರೋಗ್ಯ ತಪಾಸಣೆ ಸಂದರ್ಭದಲ್ಲಿ ಮಕ್ಕಳಲ್ಲಿನ ಅಪೌಷ್ಠಿಕತೆ ಹಾಗೂ ಇನ್ನಿತರೆ ಸಮಸ್ಯೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ಅಗತ್ಯವಿರುವ ಮಕ್ಕಳಿಗೆ ಸ್ಥಳದಲ್ಲಿ ಉಚಿತವಾಗಿ ಅಗತ್ಯವಿರುವ ಔಷಧಗಳನ್ನು ನೀಡಲು ಕ್ರಮ ಕೈಗೊಳ್ಳಿ, ಈ ಕಾರ್ಯಕ್ರಮ ಆಯೋಜನೆ ಕುರಿತಂತೆ ಶಾಲಾ ಮುಖ್ಯೋಪಧ್ಯಾಯರು ಮತ್ತು ಅಂಗನವಾಡಿ ಕಾರ್ಯಕರ್ತರ ಮೂಲಕ ಮಕ್ಕಳ ಪೋಷಕರಿಗೆ ಸಾಕಷ್ಟು ಮುಂಚಿತಾಗಿ ಮಾಹಿತಿ ನೀಡಿ, ಮಕ್ಕಳು ಪೋಷಕರೊಂದಿಗೆ ಆರೋಗ್ಯ ತಪಾಸಣೆಗೆ ಬರುವಂತೆ ಕ್ರಮ ಕೈಗೊಳ್ಳಿ, ತಪಾಸಣೆ ಸಂದರ್ಭದಲ್ಲಿ ಸಾಮಾಜಿಕ ಅಂತರ ಸೇರಿದಂತೆ ಎಲ್ಲಾ ಅಗತ್ಯ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದು ಸಚಿವ ಬೊಮ್ಮಾಯಿ ಸೂಚಿಸಿದರು.
ಜಿಲ್ಲೆಯಲ್ಲಿನ ಎಲ್ಲಾ ಮಕ್ಕಳ ಆರೋಗ್ಯ ತಪಾಸಣೆಯನ್ನು ಜುಲೈ ಅಂತ್ಯದೊಳಗೆೆ ಮುಕ್ತಾಯಗೊಳಿಸುವಂತೆ ಸೂಚನೆ ನೀಡಿದ ಸಚಿವರು, ಈ ಕಾರ್ಯಕ್ರಮಕ್ಕೆ ಅಗತ್ಯವಿರುವ ವೈದ್ಯರು ಮತ್ತು ಸಹಾಯಕ ಸಿಬ್ಬಂದಿ, ಪ್ರತೀ ದಿನ ಬೇಟಿ ನೀಡಬಹುದಾದ ಗ್ರಾಮಗಳ ವಿವರ ಸೇರಿದಂತೆ ಕಾರ್ಯಕ್ರಮದ ಅನುಷ್ಠಾನಕ್ಕೆ ಅಗತ್ಯವಿರುವ ಸಮಗ್ರ ಯೋಜನೆಯನ್ನು ಸಿದ್ದಪಡಿಸುವಂತೆ ಸೂಚಿಸಿದರು.
ಸಭೆಯಲ್ಲಿ ಕಾರ್ಕಳ ಶಾಸಕ ಸುನೀಲ್ ಕುಮಾರ್, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಜಿ.ಜಗದೀಶ್ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಸರ್ಜನ್ ಮಧುಸೂದನ್ ನಾಯಕ್, ಡಿಹೆಚ್‌ಓ ಡಾ.ನಾಗಭೂಷಣ ಉಡುಪ ಮತ್ತಿತರರು ಉಪಸ್ಥಿತರಿದ್ದರು.