ಕೊಳೆ ರೋಗದಿಂದ ಅಡಿಕೆ ಮರಗಳ ರಕ್ಷಣೆ ಮಾಡುವ ವಿಧಾನ

An arecanut tree that fell due to strong wind in a village near Belthangady

ಉಡುಪಿ ಜೂನ್ 16 , 2021: ಪ್ರಸ್ತುತ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಅಡಿಕೆ ಬೆಳೆ ಮೇಲೆ ಪರಿಣಾಮ ಬೀರಲಿದೆ. ಮೋಡ ಕವಿದ ವಾತಾವರಣ, ತೋಟದಲ್ಲಿ ನೀರು ನಿಲ್ಲುವಿಕೆ, ಹೆಚ್ಚಾದ ಮಣ್ಣಿನ ತೇವಾಂಶ, ಪೋಷಕಾಂಶಗಳು ಕೊಚ್ಚಿ ಹೋಗುವುದು ಮತ್ತು ಸೂರ್ಯನ ಬೆಳಕಿನ ಕೊರತೆ ಮುಂತಾದ ಹಲವು ಕಾರಣಗಳಿಂದ ಅಡಿಕೆ ಬೆಳೆಯಲ್ಲಿ ಕೊಳೆರೋಗ ಉಲ್ಬಣಗೊಳ್ಳುವ ಸಾಧ್ಯತೆ ಇರುವುದರಿಂದ ಆಗಬಹುದಾದ ಹಾನಿಯ ಪ್ರಮಾಣ ಕಡಿಮೆ ಮಾಡಲು ಮತ್ತು ಸಂರಕ್ಷಣೆ ದೃಷ್ಟಿಯಿಂದ ಈ ಕೆಳಕಂಡ ಕೆಲವು ಅವಶ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ತೋಟಗಾರಿಕೆ ಇಲಾಖೆಯ ಪ್ರಕಟಣೆ ತಿಳಿಸಿದೆ.
ಕೆಳಗೆ ಬಿದ್ದಿರುವ ರೋಗಪಿಡಿತ ಕಾಯಿಗಳನ್ನು ಹಾಗೂ ಒಣಗಿದ ಹಿಂಗಾರಗಳನ್ನು ತೆಗೆದು ಸುಡಬೇಕು ಅಥವಾ ತೋಟದಿಂದ ಹೊರಗೆ ಗುಂಡಿಗಳಲ್ಲಿ ಹಾಕಿ ಮಣ್ಣಿನಿಂದ ಮುಚ್ಚಬೇಕು. ತೋಟಗಳಲ್ಲಿ ಆದಷ್ಟು ಸ್ವಚ್ಛತೆಯನ್ನು ಕಾಪಾಡಬೇಕು. ತೋಟಗಳಲ್ಲಿ ನೀರು ನಿಲ್ಲದಂತೆ ಬಸಿಲುಗಾಲುವೆಗಳನ್ನು ಮಾಡಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡಬೇಕು.
ತೋಟದಲ್ಲಿ ಅಲ್ಲಲ್ಲಿ ಅಡಿಕೆ ಸಿಪ್ಪೆ, ಭತ್ತದ ಹೊಟ್ಟು ಹಾಗೂ ಇತರೆ ತ್ಯಾಜ್ಯ ವಸ್ತುಗಳನ್ನು ಬಳಸಿ ಹೊಗೆ ಹಾಕಬೇಕು. ತೋಟದ ಸುತ್ತ ಇರುವ ಕಾಡುಮರಗಳ ಮತ್ತು ಅಂತರ ಬೆಳೆಗಳ ಹೆಚ್ಚುವರಿ ರೆಂಬೆ ಕೊಂಬೆಗಳನ್ನು ಕತ್ತರಿಸಿ ತೆಗೆದು ಗಾಳಿಯಾಡುವಂತೆ ಮಾಡಬೇಕು. ಕೊಳೆರೋಗ ನಿಯಂತ್ರಣಕ್ಕೆ ಈಗಾಗಲೇ ಔಷಧ ಸಿಂಪರಣೆ ಮಾಡಿ 30-40 ದಿನಗಳಾಗಿದಲ್ಲಿ ಮುಂಜಾಗ್ರತೆಯಾಗಿ ಮತ್ತೊಮ್ಮೆ ಶೇಕಡಾ 1 ರ ಬೋರ್ಡೋ ದ್ರಾವಣವನ್ನು ಸಿಂಪಡಿಸಬೇಕು.
ಈಗಾಗಲೇ ಕೊಳೆರೋಗ ಬಂದಿರುವ ತೋಟಗಳಲ್ಲಿ ಕೊಳೆರೋಗ ಪೀಡಿತ ಅಡಿಕೆ ಮರಗಳು ಸುಳಿಕೊಳೆ/ಚಂಡೆ ಕೊಳೆ ರೋಗಕ್ಕೆ ತುತ್ತಾಗುವ ಸಾಧ್ಯತೆಗಳಿದ್ದು, ಇದನ್ನು ತಡೆಯಲು ಕೊಳೆರೋಗ ಪೀಡಿತ ಅಡಿಕೆ ಮರದ ಗೊನೆಗಳಿಗೆ ಮತ್ತು ಕೆಳ ಭಾಗದ ಮೂರ್ನಾಲ್ಕು ಹೆಡೆಗಳಿಗೆ ಮೆಟಲಾಕ್ಸಿಲ್ ಎಂ.ಜಡ್ 2 ಗ್ರಾಂ. ಅಥವಾ ಶೇ.1 ರ ಬೋರ್ಡೋ ದ್ರಾವಣ ಅಥವಾ 3 ಗ್ರಾ. ತಾಮ್ರದ ಆಕ್ಸಿಕ್ಲೋರೈಡ್ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಅಡಿಕೆ ಗೊನೆಗಳು, ಎಲೆತೊಟ್ಟು ಮತ್ತು ಸುಳಿ ಭಾಗಗಳಿಗೆ ಚೆನ್ನಾಗಿ ನೆನೆಯುವಂತೆ ಮಳೆ ಬಿಡುವಿದ್ದಾಗ ಸಿಂಪಡಿಸಬೇಕು.
ಮೇಲಿನ ಕ್ರಮಗಳನ್ನು ಅನುಸರಿಸಿದ್ದಲ್ಲಿ ಅಡಿಕೆ ಮರಗಳು ಕೊಳೆರೋಗ/ಸುಳಿ ಕೊಳೆ ರೋಗದಿಂದ ಸಾಯುವುದನ್ನು ತಪ್ಪಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ, ದೂ.ಸಂಖ್ಯೆ : 0820-2522837 ಅನ್ನು ಸಂಪರ್ಕಿಸುವಂತೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.