ಕೋವಿಡ್ ಲಸಿಕೆ ನೀಡಿಕೆಯಲ್ಲಿ ಗೊಂದಲಕ್ಕೆ ಆಸ್ಪದ ನೀಡಬೇಡಿ: ಡಾ.ಎಂ.ಟಿ. ರೇಜು

 ಕೋವಿಡ್ ಲಸಿಕೆ ನೀಡಿಕೆಯಲ್ಲಿ ಗೊಂದಲಕ್ಕೆ ಆಸ್ಪದ ನೀಡಬೇಡಿ: ಡಾ.ಎಂ.ಟಿ. ರೇಜು
Share this post

ಉಡುಪಿ, ಜೂನ್ 10, 2021: ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ನೀಡುವ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಯಾವುದೇ ಗೊಂದಲಗಳು ಉಂಟಾಗದಂತೆ ಹಾಗೂ ಸಮಸ್ಯೆಗಳಿಗೆ ಆಸ್ಪದ ನೀಡದಂತೆ , ಅರ್ಹ ಸಾರ್ವಜನಿಕರಿಗೆ ಸಮರ್ಪಕವಾಗಿ ಲಸಿಕೆಯನ್ನು ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎಂ.ಟಿ.ರೇಜು ಸೂಚಿಸಿದ್ದಾರೆ.

ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಕೋವಿಡ್ ಸ್ಥಿತಿಗತಿ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೋವಿಡ್ ಲಸಿಕೆ ನೀಡುವ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರು, ಆದ್ಯತಾ ವಲಯದಲ್ಲಿರುವವರು ಮತ್ತು ದುರ್ಬಲ ವರ್ಗದವರಿಗೆ ಸಮಪರ್ಕವಾಗಿ ಲಸಿಕೆ ನೀಡುವಂತೆ ತಿಳಿಸಿದ ರೇಜು, ಲಸಿಕೆ ನೀಡುವ ಕುರಿತಂತೆ ಸಾರ್ವಜನಿಕರಿಗೆ ಸಾಕಷ್ಟು ಮುಂಚಿತವಾಗಿ ಮಾಹಿತಿ ನೀಡಿ, ಲಸಿಕಾ ಸ್ಥಳದಲ್ಲಿ ಅನಗತ್ಯವಾಗಿ ಜನದಟ್ಟಣಿ ಉಂಟಾಗದಂತೆ ಹಾಗೂ ಯಾವುದೇ ಗೊಂದಲಗಳಿಗೆ ಆಸ್ಪದ ನೀಡದಂತೆ ಲಸಿಕೆ ನೀಡಿ, ಲಸಿಕಾ ಉಸ್ತುವಾರಿಗೆ ನಿಯೋಜಿಸಿರುವ ಅಧಿಕಾರಿಗಳು ಲಸಿಕೆ ನೀಡುವ ಸ್ಥಳದಲ್ಲಿ ಸಮಸ್ಯೆಗಳು ಕಂಡುಬರದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂದಿಸಿದಂತೆ , ಕೋವಿಡ್ ಸೋಂಕಿತರ ಮನೆಗಳನ್ನು ಸೀಲ್ ಡೌನ್ ಮಾಡಿದ ನಂತರ ಅವರಿಗೆ ದೈನಂದಿನ ಜೀವನಕ್ಕೆ ತೊಂದರೆಯಾಗದಂತೆ ಪರಿಶೀಲಿಸಿ, ಹೆಚ್ಚು ಪ್ರಕರಣಗಳಿರುವ ಕಡೆಗಳಲ್ಲಿ ಮೈಕ್ರೋ ಕಂಟೈನ್‌ಮೆಂಟ್ ಝೋನ್ ಗಳನ್ನು ರಚಿಸಿ , ಸೋಂಕಿತರ ಯಾವುದೇ ಸಂರ್ಪಕವಿಲ್ಲದೇ ಪಾಸಿಟಿವ್ ಬಂದಿರುವವರನ್ನು ಗುರುತಿಸಿ, ಅವರಿಗೆ ಸೋಂಕು ಎಲ್ಲಿಂದ ಹರಡಿದೆ ಎಂಬ ಬಗ್ಗೆ ಪರಿಶೀಲಿಸಿ ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಪಾಸಿಟಿವ್ ಇರುವವವರ ಮನೆಗಳನ್ನು ಸೀಲ್ ಮಾಡಿದ ನಂತರ ಮತ್ತು 50 ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳಿದ್ದ ಪಂಚಾಯತ್ ಅನ್ನು ಸಂಪೂರ್ಣ ಲಾಕ್‌ಡೌನ್ ಮಾಡಿದ ನಂತರ ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹರಡುವುದು ಕಡಿಮೆ ಆಗಿದ್ದು, ಪ್ರಸ್ತುತ ಜಿಲ್ಲೆಯಲ್ಲಿ ಪಾಸಿಟಿವಿಟಿ ಪ್ರಮಾಣ ಸರಾಸರಿ 9 ಇದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.

ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿನ ಸಕ್ರಿಯ ಕೋವಿಡ್ ಪ್ರಕರಣಗಳ ಕುರಿತಂತೆ ವಿವರವಾಗಿ ಪರಿಶೀಲಿಸಿದ ಡಾ. ಎಂ.ಟಿ.ರೇಜು, ಒಂದು ವಾರದೊಳಗೆ ಜಿಲ್ಲೆಯ ಪಾಸಿಟಿವಿಟ್ ಪ್ರಮಾಣವನ್ನು 5 ಕ್ಕಿಂತ ಕೆಳಗೆ ಇಳಿಸುವಲ್ಲಿ ಎಲ್ಲಾ ಅಧಿಕಾರಿಗಳು ಶ್ರಮಿಸಬೇಕು ಹಾಗೂ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಿ, ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಅರಿವು ಮೂಡಿಸಿ ಎಂದು ಸೂಚಿಸಿದರು.

ಜಿಲ್ಲೆಯಲ್ಲಿನ ಪ್ರಸ್ತುತ ಕೋವಿಡ್ ಸ್ಥಿತಿಗತಿ ಕುರಿತು ಜಿಲ್ಲಾ ಕೋವಿಡ್ ನೋಡೆೆಲ್ ಆಧಿಕಾರಿ ಡಾ.ಪ್ರಶಾಂತ ಭಟ್ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್, ಎಸ್. ಪಿ. ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಬಿ.ಸದಾಶಿವ ಪ್ರಭು, ಕುಂದಾಪುರ ಉಪವಿಭಾಗಾಧಿಕಾರಿ ರಾಜು, ಡಿಹೆಚ್‌ಓ ಡಾ. ನಾಗಭೂಷಣ ಉಡುಪ, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!