ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿರುವ ಚಿಕಿತ್ಸಾ ಶುಲ್ಕ ಪಡೆಯಬೇಕು: ಶ್ರೀನಿವಾಸ ಪೂಜಾರಿ

 ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿರುವ ಚಿಕಿತ್ಸಾ ಶುಲ್ಕ ಪಡೆಯಬೇಕು: ಶ್ರೀನಿವಾಸ ಪೂಜಾರಿ
Share this post

ಮಂಗಳೂರು, ಜೂನ್ 09, 2021: ಕೋವಿಡ್ ಸೋಂಕಿತರ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿರುವ ಮೊತ್ತದ ಶುಲ್ಕವನ್ನು ಮಾತ್ರ ಪಡೆಯಬೇಕು. ಒಂದೊಮ್ಮೆ ಹೆಚ್ಚುವರಿ ಶುಲ್ಕವನ್ನು ಪಡೆದಲ್ಲಿ ಅದನ್ನು ಹಿಂದಿರುಗಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್ ರೋಗಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಬಿಲ್‍ಗೆ ಸಂಬಂಧಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡುವ ಸಂದರ್ಭದಲ್ಲಿ ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ಚಿಕಿತ್ಸಾ ಶುಲ್ಕವನ್ನು ಪಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿವೆ. ಸಾರ್ವಜನಿಕರಿಂದ ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ಶುಲ್ಕ ಪಡೆಯದಂತೆ ಖಾಸಗಿ ಆಸ್ಪತ್ರೆಗಳ ಉಸ್ತುವಾರಿ ನೋಡಲ್ ಅಧಿಕಾರಿಗಳು ಜವಬ್ದಾರಿಯಿಂದ ನೋಡಿಕೊಳ್ಳಬೇಕು ಎಂದರು.

ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಚಿಕಿತ್ಸೆ ಪಡೆದು ಗುಣ ಹೊಂದಿ ಡಿಸ್ಚಾರ್ಜ್ ಆಗುವಾಗ ನೀಡುವ ಡಿಸ್ಜಾರ್ಚ್ ಸಮ್ಮರಿ ಸೇರಿದಂತೆ ಚಿಕಿತ್ಸೆಗೆ ವಿಧಿಸುವ ಶುಲ್ಕಗಳ ವಿವರವನ್ನು ಪರಿಶೀಲಿಸಿ ಅವುಗಳಿಗೆ ತಪ್ಪದೇ ದೃಢೀಕರಣ ಮಾಡಬೇಕು, ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಹಾಗೂ ಮೂಲ ಸೌಕರ್ಯಗಳನ್ನು ಪೂರೈಸುವ ಸಲುವಾಗಿ ಪ್ರತಿ ಆಸ್ಪತ್ರೆಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿದ್ದು, ಸೋಂಕಿತರಿಗೆ ಯಾವುದೇ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳಬೇಕು, ಆದರೆ ಕೆಲವು ಅಧಿಕಾರಿಗಳು ಈ ಬಗ್ಗೆ ಉದಾಸೀನತೆ ತೋರುತ್ತಿರುವುದು ಕಂಡುಬಂದಿದೆ. ಅವರುಗಳಿಗೆ ಕಾರಣ ಕೇಳಿ ನೋಟಿಸ್ ನೀಡಬೇಕು ಎಂದು ತಿಳಿಸಿದರು.

ಖಾಸಗಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆಗೆ ಬರುವ ರೋಗಿಗಳಿಂದ ಯಾವುದೇ ರೀತಿಯ ಮುಂಗಡ ಹಣವನ್ನು ಪಡೆಯುವ ಹಾಗಿಲ್ಲ ಎಂದ ಅವರು, ಖಾಸಗಿ ಆಸ್ಪತ್ರೆಗಳು ಶೇ.50 ರಷ್ಟು ಹಾಸಿಗೆಗಳನ್ನು ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ರೆಫರ್ ಮಾಡುವ ರೋಗಿಗಳ ಚಿಕಿತ್ಸೆಗಾಗಿ ಕಾಯ್ದಿರಿಸುವುದು ಕಡ್ಡಾಯವಾಗಿದ್ದು, ಇದನ್ನು ಉಲ್ಲಂಘಿಸಿದ್ದಲ್ಲಿ ಕೆ.ಪಿ.ಎಂ.ಇ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಿ.ಟಿ ಸ್ಕ್ಯಾನಿಂಗ್‍ಗೆ ಬಿ.ಪಿ.ಎಲ್ ಕಾರ್ಡ್ ಹೊಂದಿದವರಿಂದ 1.500, ಇತರರಿಂದ 2.500 ರೂಗಳನ್ನು ಹಾಗೂ ಎಕ್ಸ್-ರೇ ಗೆ 250 ರೂಗಳ ಶುಲ್ಕ ಪಡೆಯಬಹುದಾಗಿದೆ ಎಂದು ಹೇಳಿದರು.

ಖಾಸಗಿ ಆಸ್ಪತ್ರೆಗೆ ಸಾರ್ವಜನಿಕ ಆರೋಗ್ಯ ಸಂಸ್ಥೆಯಿಂದ ರೆಫರ್ ಮಾಡಿದ ಆಯುಷ್ಮಾನ್ ಕಾರ್ಡ್ ಹೊಂದಿರುವ ಕೋವಿಡ್ ರೋಗಿಗಳ ಒಂದು ದಿನದ ಚಿಕಿತ್ಸೆಗೆ ಜನರಲ್ ವಾರ್ಡ್‍ಗೆ 5.200, ಹೆಚ್.ಡಿ.ಯು ಗೆ 7.000, ಐ.ಸಿ.ಯು ವೆಂಟಿಲೇಟರ್ ರಹಿತಕ್ಕೆ 8.500, ಐ.ಸಿ.ಯು ವೆಂಟಿಲೇಟರ್ ಸಹಿತ ಚಿಕಿತ್ಸೆಗೆ 10.000 ರೂಗಳನ್ನು ಪಿ.ಪಿ.ಇ ಹಾಗೂ ಇತರ ಉಪಭೋಗ್ಯ ವಸ್ತುಗಳನ್ನೊಳಗೊಂಡಂತೆ ಪಡೆಯಬೇಕು ಎಂದರು.

ಸೋಂಕಿತ ರೋಗಿಗಳು ನೇರವಾಗಿ ಖಾಸಗಿ ಆಸ್ಪತ್ರೆಯಲ್ಲಿ ಪ್ರವೇಶ ಪಡೆದು ಚಿಕಿತ್ಸೆ ಪಡೆದ ರೊಗಿಗಳಿಂದ ಒಂದು ದಿನಕ್ಕೆ ಜನರಲ್ ವಾರ್ಡ್‍ಗೆ 10.000, ಹೆಚ್.ಡಿಯು ಗೆ 12.000, ಐ.ಸಿ.ಯು ವೆಂಟಿಲೇಟರ್ ರಹಿತ 15.000, ಐ.ಸಿ.ಯು ವೆಂಟಿಲೇಟರ್ ಸಹಿತ 25.000 ರೂಗಳನ್ನು ಪಿ.ಪಿ.ಇ ಹಾಗೂ ಇತರ ಉಪಭೋಗ್ಯ ವಸ್ತುಗಳನ್ನೊಳಗೊಂಡಂತೆ ಪಡೆಯಬೇಕು. ಒಂದೇ ಕೋಣೆಯಲ್ಲಿ ಇಬ್ಬರು ರೋಗಿಗಳು ಚಿಕಿತ್ಸೆ ಪಡೆದಲ್ಲಿ ಶೇ.10 ರಷ್ಟು, ಏಕ ವ್ಯಕ್ತಿ ಚಿಕಿತ್ಸೆ ಪಡೆದಲ್ಲಿ ಶೇ.25 ರಷ್ಟು, ಡಿಲಕ್ಸ್ ರೂಮಿನಲ್ಲಿ ಚಿಕಿತ್ಸೆ ಪಡೆದರೆ ಅನಿಯಮಿತ ಶುಲ್ಕ ವೆಚ್ಚವನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಮಾತನಾಡಿ, ಖಾಸಗಿ ಆಸ್ಪತ್ರೆಗಳ ಬಿಲ್‍ಗಳ ಪರಿಶೀಲನೆಗೆ ಜಿಲ್ಲಾಡಳಿತವು ಆಡಿಟ್ ತಂಡವನ್ನು ರಚಿಸಿದ್ದು, ತಂಡವು ಖಾಸಗಿ ಆಸ್ಪತೆಗಳ ಬಿಲ್‍ ಆಡಿಟ್ ಮಾಡಿ ಜಿಲ್ಲಾಡಳಿತಕ್ಕೆ ವರದಿ ನೀಡಲಿದೆ. ಈವರೆಗೆ 11 ಖಾಸಗಿ ಆಸ್ಪತ್ರೆಯ 896 ಕೋವಿಡ್ ರೋಗಿಗಳ ಚಿಕಿತ್ಸಾ ಬಿಲ್‍ಗಳನ್ನು ಪರಿಶೀಲಿಸಿದೆ ಎಂದರು.

ಖಾಸಗಿ ಆಸ್ಪತ್ರೆಯ ಚಿಕಿತ್ಸೆಗೆ ನೇರವಾಗಿ ಬಂದಂತಹ ಸಂದರ್ಭದಲ್ಲಿ ರೋಗಿಗಳಿಗೆ ಚಿಕಿತ್ಸೆ ಸೇರಿದಂತೆ ವೆಚ್ಚದ ಬಗ್ಗೆ ಸಲಹೆ ಸೂಚನೆಗಳನ್ನು ನೋಡಲ್ ಅಧಿಕಾರಿಗಳು ನೀಡಬೇಕು. ಇದರಿಂದ ಮುಂದಿನ ದಿನಗಳಲ್ಲಿ ಆಗುವ ಶುಲ್ಕ ಭರಿಸುವ ಗೊಂದಲಗಳನ್ನು ನಿವಾರಿಸಲು ಸಾಧ್ಯ ಎಂದು ಹೇಳಿದರು.

ಶಾಸಕ ಡಾ. ಭರತ್ ಶೆಟ್ಟಿ.ವೈ ಮಾತನಾಡಿ, ಕೋವಿಡ್ ಸೋಂಕಿತರಿಂದ ಊಹೆಗೂ ಮೀರಿ ಹೆಚ್ಚು ಅಂದರೆ 15-20 ಲಕ್ಷದ ವರೆಗೆ ಚಿಕಿತ್ಸಾ ಶುಲ್ಕ ಪಡೆಯುತ್ತಿರುವ ಬಗ್ಗೆ ಅನೇಕ ದೂರುಗಳು ಬರುತ್ತಿವೆ. ಇದರಿಂದಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಇದಕ್ಕೆ ಆಸ್ಪದ ನೀಡದೇ ಸರ್ಕಾರ ನಿಗದಿಪಡಿಸಿರುವ ಚಿಕಿತ್ಸಾ ಶುಲ್ಕವನ್ನು ಪಡೆಯುವಂತೆ ಜಿಲ್ಲಾಡಳಿತ ನೋಡಿಕೊಳ್ಳಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಡಾ.ಕುಮಾರ್, ಅಪರ ಜಿಲ್ಲಾಧಿಕಾರಿ ಡಾ.ಪ್ರಜ್ಞಾ ಅಮ್ಮೆಂಬಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕಿಶೋರ್ ಹಾಗೂ ಮತ್ತಿತರ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!