ವಾರ್ಡ್ ಹಾಗೂ ಗ್ರಾಮ ಮಟ್ಟದಲ್ಲಿ ಕೋವಿಡ್ ನಿಯಂತ್ರಣ: ಶ್ರೀನಿವಾಸ ಪೂಜಾರಿ

 ವಾರ್ಡ್ ಹಾಗೂ ಗ್ರಾಮ ಮಟ್ಟದಲ್ಲಿ ಕೋವಿಡ್ ನಿಯಂತ್ರಣ: ಶ್ರೀನಿವಾಸ ಪೂಜಾರಿ
Share this post

ಮಂಗಳೂರು, ಜೂನ್ 06, 2021: ಕೋವಿಡ್ ನಿಯಂತ್ರಣ ಕಾರ್ಯಗಳನ್ನು ವಾರ್ಡ್ ಹಾಗೂ ಗ್ರಾಮಮಟ್ಟದ ಸಮಿತಿಗಳು ಪರಿಣಾಮಕಾರಿಯಾಗಿ ಮಾಡಿದಾಗ ಮಾತ್ರ ಸೋಕು ನಿಯಂತ್ರಕ್ಕೆ ತರಲು ಸಾಧ್ಯವಾಗುತ್ತಿದೆ ಎಂದು ಮುಜರಾಯಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಇಂದು ಕೋಟೆಕಾರ್ ಪಟ್ಟಣ ಪಂಚಾಯತ್‍ನ ಸಭಾಂಗಣದಲ್ಲಿ ಕೋವಿಡ್ -19 ನಿಯಂತ್ರಣಕ್ಕೆ ಸಂಬಂಧಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೋವಿಡ್ ಸೋಂಕಿತರನ್ನು ಸಾಧ್ಯವಾದಷ್ಟು ಕೋವಿಡ್ ಕೇರ್ ಸೆಂಟರ್‍ಗಳಿಗೆ ವರ್ಗಾಹಿಸಬೇಕು.  ಸೋಂಕು ತೀವ್ರ ಉಲ್ಭಣಗೊಂಡವರಿಗೆ ಆಸ್ದತ್ರೆಗೆ ಸೇರಿಸಬೇಕು. ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ಕ್ಷೇಮವನ್ನು ಸಮಿತಿಯ ಸದಸ್ಯರುಗಳು ಪ್ರತೀ ದಿನ ವಿಚಾರಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಹೋಮ್ ಕ್ವಾರಂಟೈನ್‍ನಲ್ಲಿರುವ ಸೋಂಕಿತರ ಮನೆಗೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು ಹಾಗೂ ವಾರ್ಡ್ ಹಾಗೂ ಗ್ರಾಮ ಮಟ್ದದ ಸಮಿತಿಯ ಸದಸ್ಯರುಗಳು ಸಹ ಭೇಟಿ ನೀಡಿ ಅವರ ಆರೋಗ್ಯದ ಸ್ಥಿತಿಗತಿಗಳನ್ನು ನೋಡುವುದರ ಜೊತೆಗೆ ಅವರ ದೈನಂದಿನ ಅವಶ್ಯಕತೆಗಳಾದ ಆಹಾರ ಸಾಮಾಗ್ರಿ ಸೇರಿದಂತೆ ಮತ್ತಿತರ ವಸ್ತುಗಳನ್ನು ಪೂರೈಕೆ ಮಾಡುವುದರೊಂದಿಗೆ ಸೋಂಕಿತರು ಹೊರಗಡೆ ಅಡ್ಡಾಡದಂತೆ ತಡೆಯಲು ಸಾಧ್ಯ, ಅಂತಹಾ ಮನೆಗಳನ್ನು ಸೀಲ್ ಡೌನ್ ಮಾಡಬೇಕು ಎಂದರು.

ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಈಗಾಗಲೇ 59 ಸಕ್ರೀಯ ಪ್ರಕರಣಗಳಿದ್ದು, 8 ಹೋಮ್ ಐಸೋಲೇಶನ್, 20 ಜನರು ಆಸ್ಪತ್ರೆಗಳಲ್ಲಿ ಹಾಗೂ 31 ಜನರು ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗೂ 301  ಜನರು ಈಗಾಗಲೇ ಗುಣಮುಖರಾಗಿರುವುದಾಗಿ ತಿಳಿಸಿದರು.  

ಕೋವಿಡ್ ಪಾಸಿಟಿವ್ ಇರುವವರ ಮನೆಯನ್ನು ಸೀಲ್ ಡೌನ್ ಮಾಡುವುದರಿಂದ ಕೋವಿಡ್ ನಿಯಂತ್ರಣ ಸಾಧ್ಯ,  ಕೋವಿಡ್ ಪಾಸಿಟಿವ್ ಇರುವ ಮನೆಗಳನ್ನು ಗುರುತಿಸಿ ಸ್ಟಿಕ್ಕರ್ ಗಳನ್ನು ಹಾಕುವ ಕಾರ್ಯವನ್ನು ಕಾರ್ಯಪಡೆಗಳು ಮಾಡಬೇಕು ಎಂದ ಅವರು ಕೋವಿಡ್ ಪಾಸಿಟಿವ್ ಇರುವ ವ್ಯಕ್ತಿ ಅಥವಾ ಮನೆಯವರು ಅನಾವಶ್ಯಕವಾಗಿ ಮನೆಯಿಂದ ಹೊರಗಡೆ ಸುತ್ತಾಡುವುದು ಕಂಡು ಬಂದಲ್ಲಿ ಬೀಟ್ ಪೋಲೀಸರು ಅವರಿಗೆ ಎಚ್ಚರಿಕೆ ನೀಡುವುದರೊಂದಿಗೆ  ಸೂಕ್ತ ಕ್ರಮ ಕೈಗೊಳ್ಳಬಹುದಾಗಿದೆ ಎಂದರು.

ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ನೋಡಲ್ ಅಧಿಕಾರಿ, ಸ್ಥಳೀಯ ಕೌನ್ಸಿಲರ್ ಹಾಗೂ ವಾರ್ಡ್ ಸದಸ್ಯರಿರುವ ತಂಡದಿಂದ ವಾರ್ಡ್ ಸಮೀಕ್ಷೆ ಮಾಡುವ ಕೆಲಸಗಳು ನಡೆಯಬೇಕು ಎಂದ ಅವರು ಆಶಾ ಕಾರ್ಯಕರ್ತೆಯರಿಗೆ ನೀಡಲಾಗಿರುವ ಗುಣಮಟ್ಟದ ಪಲ್ಸ್ ಆಕ್ಸಿ ಮೀಟರ್, ಮಾಸ್ಕ್, ಸ್ಯಾನಿಟೈಸರ್ ಹಾಗೂ ಮಾಸ್ಕ್ಗಳ ಬಗ್ಗೆ ವಿಚಾರಿಸಿ ತುರ್ತು ಸಮಯದಲ್ಲಿ ಆಶಾ ಕಾರ್ಯಕರ್ತೆಯರಿಗೆ ಓಡಾಡಲು ವಾಹನದ ವ್ಯವಸ್ಥೆಯ ಅಗತ್ಯವಿದ್ದರೆ ಪಟ್ಟಣ ಪಂಚಾಯತ್ ವತಿಯಿಂದ ಒದಗಿಸಬೇಕು ಎಂದು  ಸೂಚಿಸಿದರು.

ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಆಹಾರ ಸಾಮಾಗ್ರಿಗಳ ಅಗತ್ಯವಿರುವುದರಿಂದ ಅವರಿಗೆ ದಾನಿಗಳು ಅಥವಾ ಸಂಘಸಂಸ್ಥೆಗಳ ನೆರವಿನಿಂದ ಸಹಾಯ ಮಾಡುವ ಕಾರ್ಯ ಆಗಬೇಕು, ಇನ್ನೂ ಹೆಚ್ಚಿನ ಅಗತ್ಯತೆ ಇದ್ದಲ್ಲಿ ಜಿಲ್ಲಾಡಳಿತವು ನೆರವು ನೀಡಲಿದೆ ಎಂದರು.

ಪಡಿತರ ಚೀಟಿ ಬಗ್ಗೆ ಮಾತನಾಡಿದ ಸಚಿವರು  5 ಲಕ್ಷಕ್ಕಿಂತ ಮೇಲ್ಪಟ್ಟು ಆದಾಯ ಹೊಂದಿ ಆದಾಯ ತೆರಿಗೆ ಪಾವತಿ ಮಾಡುವವರನ್ನು ಹೊರತು ಪಡಿಸಿ ಉಳಿದವರಿಗೆ ಬಿ.ಪಿ.ಎಲ್ ಕಾರ್ಡ್ ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಜ್ಞಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್, ಅಲೆಮಾರಿ ಜನಾಂಗದ ಅಧ್ಯಕ್ಷ ರವೀಂದ್ರ ಶೇಟ್, ಕೋಟೆಕಾರ್ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಪ್ರಫುಲ್ಲಾ ದಾಸ್, ಉಪಾಧ್ಯಕ್ಷರು, ಪಂಚಾಯತ್ ಸದಸ್ಯರು, ತಹಶೀಲ್ದಾರು, ಆಶಾಕಾರ್ಯಕರ್ತೆಯರು ಇನ್ನಿತರ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!