ಕೋವಿಡ್ ಲಸಿಕಾಕರಣಕ್ಕೆ ಒತ್ತು: ಜಿಲ್ಲಾಧಿಕಾರಿ ಮುಹಿಲನ್
ಕಾರವಾರ ಜೂನ್ 05, 2021: ಜಿಲ್ಲೆಯಲ್ಲಿ 44 ವರ್ಷ ಮೆಲ್ಪಟ್ಟಂತಹ 1,827 ಜನ ಕೊವ್ಯಾಕ್ಸಿನ್ ಮೊದಲ ಡೋಸ್ ಮಾತ್ರ ಪಡೆದು ಎರಡನೇ ಲಸಿಕೆ ಪಡೆಯದೇ ಇರುವದರಿಂದ ಇವರೆಲ್ಲರಿಗೂ ಎರಡನೇ ಲಸಿಕೆ ಪಡೆಯಲು ಅವರ ಮೊಬೈಲ್ ಸಂಖ್ಯೆಗೆ ಎಸ್ ಎಮ್ ಎಸ್ ಮಾಡಲಾಗಿದ್ದು ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಮ್ ಪಿ. ಕೋರಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್-19 ನಿಯಂತ್ರಣ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಎಲ್ಲ ಕಡೆ ಲಸಿಕಾಕರಣಕ್ಕೆ ವ್ಯವಸ್ಥೆ ಮಾಡಲಾಗಿರುತ್ತದೆ. ಲಸಿಕೆ ಪಡೆಯುದಕ್ಕಾಗಿ ಲಸಿಕಾ ಕೇಂದ್ರಗಳಿಗೆ ಹೋಗಿ ಬರಲು ಲಾಕ್ ಡೌನ್ದ ಯಾವುದೇ ಅಡಚಣೆ ಇರುವದಿಲ್ಲ. ಕೋವಿಡ್ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರೂ ಸಹಕರಿಸಿ ಕೈ ಜೋಡಿಸಬೇಕಾಗುತ್ತದೆ ಎಂದರು.
18 ರಿಂದ 44 ವರ್ಷದೊಳಗಿನ ಆಧ್ಯತಾ ಗುಂಪಿನವರಿಗೆ ಲಸಿಕೆ ನೀಡುವ ಪ್ರಕ್ರಿಯೆ ಯಸಸ್ವಿಯಾಗಿ ನಡೆಯುತ್ತಿದೆ. ಆದ್ಯತಾ ಗುಂಪು ಎಂದು ಗುರುತಿಸಲಾಗಿರುವ ವಿಶೇಷ ಚೇತನರಿಗೆ ಈಗಾಗಲೇ ಲಸಿಕೆ ನೀಡಲಾಗಿದ್ದು, ಕಾರಣಾಂತರಗಳಿಂದ ಬಿಟ್ಟುಹೊದಂತಹ ಇನ್ನುಳಿದ 4017 ಜನ ವಿಶೇಷಚೇತನರು ಹಾಗೂ ಅವರ ಪಾಲನೆ ಪೋಷóಣೆ ಮಾಡುವರಿಗೆ ಶನಿವಾರ ( ಇಂದು) ಲಸಿಕೆ ನೀಡಲಾಗುತ್ತಿದೆ. ಅದೇ ರೀತಿ 44 ವರ್ಷದೊಳಗಿರುವ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ರವಿವಾರ ಲಸಿಕೆ ನೀಡಲಾಗುತ್ತಿದೆ. ಗ್ರಾಮ ಪಂಚಾಯತ್ ಹಾಗೂ ಪಟ್ಟಣ, ನಗರ ಸ್ಥಳಿಯ ಸಂಸ್ಥೆಯ ಜನಪ್ರತಿನಿದಿಗಳನ್ನು ಆಧ್ಯತಾ ಗುಂಪು ಎಂದು ಸರಕಾರ ತಿಳಿಸಿದ್ದು, ಇದರನ್ವಯ ಸೋಮವಾರ ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಶುಕ್ರವಾರ 2254 ಜನರಿಗೆ ಕೋವಿಡ್ ಟೆಸ್ಟ್ ಮಾಡಿದ್ದು, ಇದರಲ್ಲಿ 356 ಜನರಲ್ಲಿ ಪಾಸಿಟಿವ್ ಕಂಡು ಬಂದಿರುತ್ತದೆ. ಶೇ. 15.79% ರಷ್ಟು ಪಾಸಿಟಿವಿಟಿ ರೇಟ್ ಇರುತ್ತದೆ ಎಂದರು.
ಕೋವಿಡ್ ಸಂದರ್ಭದಲ್ಲಿಯ ಮಳೆ ಪ್ರವಾಹದಂತಹ ಸನ್ನಿವೇಶವನ್ನು ಕೂಡ ಎದುರಿಸಲು ಜಿಲ್ಲಾಡಳಿತ ಅಗತ್ಯ ಸಿದ್ಯತೆ ಮಾಡಿಕೊಂಡಿರುತ್ತದೆ. ಪ್ರತಿ ತಾಲೂಕಿನಲ್ಲೂ ಒಂದು ಕ್ರಿಯಾ ಯೋಜನೆಯನ್ನು ಮಾಡಿಕೊಳ್ಳಲಾಗಿರುತ್ತದೆ. 160 ಗ್ರಾಮಗಳನ್ನು ಪ್ರವಾಹ ಸಂಬವಿಸಬಹುದಾದಂತಹ ಗ್ರಾಮಗಳೆಂದು ಅಂದಾಜಿಸಲಾಗಿದ್ದು, 204 ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿರುತ್ತದೆ. ಇಲ್ಲಿ 16826 ಜನರಿಗೆ ಆಶ್ರಯ ಕಲ್ಪಿಸಬಹುದಾಗಿರುತ್ತದೆ. ಹೆಸ್ಕಾಂ ಅಧಿಕಾರಿಗಳಿಗೆ ಅಗತ್ಯ ಸಿದ್ದತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದ್ದು, ಅವರು ಸಹ ಸೂಕ್ತ ವ್ಯವಸ್ಥೆ ಮಾಡಿಕೊಂಡಿರುತ್ತಾರೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ್ ಮಾತನಾಡಿ ಜಿಲ್ಲೆಯಲ್ಲಿ ಮುಂದಿನ ಆದೇಶವರೆಗೂ ಲಾಕ್ ಡೌನ್ ಯಥಾಪ್ರಕಾರ ಮುಂದುವರೆಯಲಿದೆ. ಕಂಟೆನ್ಮೆಂಟ್ ಜೋನ್ ಎಂದು ಗುರುತಿಸಲಾಗಿರುವ ಪ್ರದೇಶಗಳಲ್ಲಿ ಮೂವಮೆಂಟ್ ಇರುವದಿಲ್ಲ. ಮೈಕ್ರೋ ಕಂಟೆನ್ಮೆಂಟ್ ಜೋನ್ ಗಳನ್ನು ಪಾಸಿಟಿವಿಟ್ ಕೇಸ್ ಪ್ರಕಾರ ಮಾಡಲಾಗುತ್ತಿದ್ದು, ಅಲ್ಲಿಂದ ಇತರ ಪ್ರದೇಶಗಳಿಗೆ ಹರಡದಿರಲೆಂಬ ಉದ್ದೇಶದಿಂದ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ. ಪಿ ಮೊಹನರಾಜ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಮ್. ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೆಚ್.ಕೆ. ಉಪಸ್ಥಿತರಿದ್ದರು.