ಮಂಗಳೂರು: ಮಳೆ ನೀರನ್ನು ಪಾಲಿಕೆಯ ಒಳಚರಂಡಿಗೆ ಬಿಡದಂತೆ ಸೂಚನೆ
ಮಂಗಳೂರು, ಮೇ 27, 2021: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಹಲವು ಬಹುಮಹಡಿ ವಸತಿ ಕಟ್ಟಡಗಳು ತಮ್ಮ ಕಟ್ಟಡದಲ್ಲಿ ಶೇಖರಣೆಯಾಗುವ ಮಳೆ ನೀರನ್ನು ಮಳೆ ನೀರಿನ ಚರಂಡಿಗೆ ಬಿಡದೆ ಪಾಲಿಕೆಯ ಒಳಚರಂಡಿ ಸಂಪರ್ಕ ಜಾಲಕ್ಕೆ ಜೋಡಣೆ ಮಾಡುತ್ತಿರುವುದು ಕಂಡುಬರುತ್ತಿದೆ. ಇದರಿಂದಾಗಿ ಒಳಚರಂಡಿ ಜಾಲದ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ದ್ರವ್ಯ ತ್ಯಾಜ್ಯವು ಹರಿಯುವ ಪರಿಣಾಮವಾಗಿ, ಮ್ಯಾನ್ಹೋಲ್ಗಳಲ್ಲಿ ತ್ಯಾಜ್ಯವು ಹೊರಬಂದು ಸಾರ್ವಜನಿಕರಿಗೆ ತೊಂದರೆಯಾಗಿರುತ್ತದೆ.
ಆದ್ದರಿಂದ ಈ ಕೂಡಲೇ ಅನಧಿಕೃತವಾಗಿ ಮಳೆ ನೀರನ್ನು ಒಳಚರಂಡಿ ಜಾಲಕ್ಕೆ ಸಂಪರ್ಕಿಸಿರುವುದನ್ನು ತೆರವುಗೊಳಿಸುವಂತೆ ಅಂತಿಮ ಎಚ್ಚರಿಕೆ ನೀಡಿದೆ.
ತಪ್ಪಿದ್ದಲ್ಲಿ ಕರ್ನಾಟಕ ಮುನ್ಸಿಪಲ್ ಕಾಯ್ದೆ 1976 ರಂತೆ ಕಾನೂನು ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಈ ಸಂಬಂಧ ಯಾರಾದರೂ ಅನಧಿಕೃತವಾಗಿ ಒಳಚರಂಡಿ ಜಾಲಕ್ಕೆ ಮಳೆ ನೀರನ್ನು ಸಂಪರ್ಕಿಸಿರುವುದು ಕಂಡು ಬಂದರೆ ಪಾಲಿಕೆಯ ವಾಟ್ಸ್ಆಪ್ ಸಹಾಯವಾಣಿ ಸಂಖ್ಯೆ: 9449007722 ಗೆ ಛಾಯಾಚಿತ್ರದೊಂದಿಗೆ ಮಾಹಿತಿಯನ್ನು ನೀಡಬೇಕೆಂದು ಮಹಾನಗರಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.