ಲಂಡನ್ನ ಭಾರತೀಯ ಜೈನ್ ಮಿಲನ್ ಶಾಖೆ ಉದ್ಘಾಟಿಸಿದ ಡಾ. ವೀರೇಂದ್ರ ಹೆಗ್ಗಡೆ
ಮಕ್ಕಳಿಗೆ ಉತ್ತಮ ಧಾರ್ಮಿಕ ಸಂಸ್ಕಾರ ನೀಡಬೇಕು:ಡಾ. ಡಿ. ವೀರೇಂದ್ರ ಹೆಗ್ಗಡೆ
ಧರ್ಮಸ್ಥಳ, ಮೇ 24. 2021: ಜೈನಧರ್ಮವು ಅತ್ಯಂತ ಪ್ರಾಚೀನ ಹಾಗೂ ವಿಶಿಷ್ಠ ಧರ್ಮವಾಗಿದ್ದು, ತಮ್ಮ ಆಚಾರ-ವಿಚಾರಗಳಿಂದ, ತತ್ವ-ಸಿದ್ದಾಂತಗಳ ಪಾಲನೆಯೊಂದಿಗೆ, ಸಾತ್ವಿಕ ಆಹಾರ ಸೇವನೆ ಹಾಗೂ ಶಿಸ್ತುಬದ್ಧ ಸರಳ ಜೀವನಶೈಲಿಯಿಂದ ಸಮಾಜದಲ್ಲಿ ಜೈನರು ವಿಶೇಷ ಗೌರವ ಹಾಗೂ ಮಾನ್ಯತೆಗೆ ಪಾತ್ರರಾಗಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಭಾರತೀಯ ಜೈನ್ ಮಿಲನ್ನ ಪ್ರಧಾನ ಪೋಷಕರಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಪಂಚನಮಸ್ಕಾರ ಮಂತ್ರ ಪಠಣದೊಂದಿಗೆ ಭಾನುವಾರ ಲಂಡನ್ನಲ್ಲಿ ಭಾರತೀಯ ಜೈನ್ ಮಿಲನ್ನ ನೂತನ ಶಾಖೆಯ ವರ್ಚುವಲ್ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
“ಸಮ್ಯಕ್ ದರ್ಶನ, ಜ್ಞಾನ, ಚಾರಿತ್ರಾಣಿ ಮೋಕ್ಷ ಮಾರ್ಗಃ ” ಎನ್ನುವಂತೆ ಜೈನ ಧರ್ಮದ ತತ್ವ-ಸಿದ್ಧಾಂತಗಳಲ್ಲಿ ಸರಿಯಾದ ನಂಬಿಕೆ (ವಿಶ್ವಾಸ), ತಿಳುವಳಿಕೆ (ಜ್ಞಾನ) ಹಾಗೂ ಚಾರಿತ್ರ್ಯ (ನಿತ್ಯ ಜೀವನದಲ್ಲಿ ಅನುಷ್ಠಾನ) ದಿಂದ ಮೋಕ್ಷ ಪ್ರಾಪ್ತಿ ಸಾಧ್ಯ ಎಂಬುದು ಜೈನಧರ್ಮದ ಸಾರವಾಗಿದೆ.
ಲಂಡನ್ ಜೈನ್ ಮಿಲನ್ ಶಾಖೆಗೆ ಶುಭವನ್ನು ಹಾರೈಸಿದ ಹೆಗ್ಗಡೆಯವರು ತಿಂಗಳಿಗೊಮ್ಮೆ ಸಭೆ ನಡೆಸಿ ಅಭಿಪ್ರಾಯ, ಅನುಭವ ವಿನಿಮಯದೊಂದಿಗೆ ಉತ್ತಮ ಸೇವಾ ಕಾರ್ಯಗಳಿಂದ ಧರ್ಮಪ್ರಭಾವನೆಯೊಂದಿಗೆ ಸಮಾಜದ ಸಂಘಟನೆ ಮತ್ತು ಬಲವರ್ಧನೆಗೆ ಪ್ರಯತ್ನಿಸಬೇಕು. ಮಕ್ಕಳಿಗೆ ಉತ್ತಮ ಧಾರ್ಮಿಕ ಸಂಸ್ಕಾರ ನೀಡಿ ಆರೋಗ್ಯಪೂರ್ಣ ಸಮಾಜ ರೂಪಿಸಬೇಕು ಎಂದು ಸಲಹೆ ನೀಡಿದರು.
ಆಶೀರ್ವಚನ ನೀಡಿದ ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಜೈನ್ ಮಿಲನ್ ಮೂಲಕ ಜೈನಧರ್ಮದ ಬಗ್ಯೆ ಅರಿವು ಜಾಗೃತಿ ಮೂಡಿಸಿ ಧರ್ಮ ಪ್ರಭಾವನೆಯೊಂದಿಗೆ ಸಮಾಜದ ಸಂಘಟನೆ ಮಾಡಬೇಕು ಎಂದು ಹೇಳಿದರು.
ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಸುರೇಂದ್ರ ಕುಮಾರ್ ಮಾತನಾಡಿ ದೇಶ-ವಿದೇಶಗಳಲ್ಲಿ 1375 ಜೈನ್ ಮಿಲನ್ ಶಾಖೆಗಳಿದ್ದು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ನೀಡಲಾಗುತ್ತದೆ. ಲಂಡನ್ ಜೈನ್ ಮಿಲನ್ ಮೂಲಕ ಪರಸ್ಪರ ಪ್ರೀತಿ-ವಿಶ್ವಾಸ ಸೌಹಾರ್ದಯುತ ಸಂಬಂಧ ಬೆಳೆದು ವಿಶ್ವಶಾಂತಿ ನೆಲೆಗೊಳ್ಳಲಿ ಎಂದು ಅವರು ಹಾರೈಸಿದರು.
ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಅಧ್ಯಕ್ಷ ಸುರೇಶ್ ರಿತು ರಾಜ್ ಜೈನ್, ಹೇಮಾವತಿ ವೀ. ಹೆಗ್ಗಡೆ, ಅನಿತಾ ಸುರೇಂದ್ರ ಕುಮಾರ್, ಶ್ರದ್ಧಾ ಅಮಿತ್ ಮತ್ತು ಡಾ. ಮಾಲವಿಕಾ ಉಪಸ್ಥಿತರಿದ್ದರು.
ದಯಾನಂದ ಪಾಟೀಲ್ ಮೂರ್ತಿಗಳ ಡಿಜಿಟಲೈಸೇಶನ್ ಬಗ್ಯೆ ಮಾಹಿತಿ ನೀಡಿದರು. ಮಂಗಳೂರು ಜೈನ್ ಮಿಲನ್ ವಲಯದ ಅಧ್ಯಕ್ಷ ಪುಷ್ಪರಾಜ ಜೈನ್ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಶುಭ ಹಾರೈಸಿದರು. ಲಂಡನ್ ಜೈನ್ ಮಿಲನ್ ಅಧ್ಯಕ್ಷ ಡಾ. ನರೇಂದ್ರ ಅಳದಂಗಡಿ ಸ್ವಾಗತಿಸಿದರು. ಅಶ್ವಿನಿ ಪ್ರಭು ಧನ್ಯವಾದ ನೀಡಿದರು.