ಕೋವಿಡ್ ಕೇರ್ ಸೆಂಟರ್ ಗೆ ಸ್ಥಳಾಂತರ ತಡೆಯುವವರ ವಿರುದ್ದ ಕಾನೂನು ಕ್ರಮ: ಜಿ.ಜಗದೀಶ್
ಉಡುಪಿ, ಮೇ 21, 2021: ಸರಕಾರವು ಕೋವಿಡ್ ಪಾಸಿಟಿವ್ ರೋಗಿಗಳನ್ನು ಪರೀಕ್ಷಿಸಲು, ವೈದ್ಯಕೀಯ ನೆರವಿನ ಅಗತ್ಯತೆಯನ್ನು ಪರಿಶೀಲಿಸಿ, ಅಸ್ಪತ್ರೆಗೆ ದಾಖಲಿಸುವುದು ಅವಶ್ಯಕವೆಂದಿನಿಸಿದಲ್ಲಿ ಮಾತ್ರವೇ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್ ಗಳ ಅಧಾರದ ಮೇಲೆ, ಆಸ್ಪತ್ರೆಗಳಲ್ಲಿ ದಾಖಲಿಸುವಂತೆ ಹಾಗೂ ಉಳಿದ ಪ್ರಕರಣಗಳಲ್ಲಿ ರೋಗಿಯ ಮನೆಯಲ್ಲಿಯೇ ಲಭ್ಯವಿರುವ ಸೌಲಭ್ಯಗಳ ಆಧಾರದ ಮೇಲೆ ಹೋಮ್ ಐಸೋಲೆಶನ್ (ಮನೆ ಪ್ರತ್ಯೇಕತೆ) ಅಥವಾ ಸಾಂಸ್ಥಿಕ ಪ್ರತ್ಯೇಕತೆಯನ್ನು ನೀಡುವುದು ಸೂಕ್ತವೆಂದು ಸೂಚಿಸಿದೆ.
ಸರ್ಕಾರವು ಹೊರಡಿಸಿದ ಮಾರ್ಗಸೂಚಿಗಳನ್ನು ಉಡುಪಿಯಲ್ಲಿ ಯಥಾವತ್ತಾಗಿ ಜಾರಿಗೊಳಿಸಲಾಗುತ್ತಿದ್ದು, ಈ ಮಧ್ಯೆ ಮನೆಯಲ್ಲಿ ಅಗತ್ಯವಾದ ಸೌಲಭ್ಯಗಳಿಲ್ಲದಿದ್ದರೂ ಇನ್ಸಿಟ್ಯೂಷನಲ್ ಐಸೋಲೇಶನ್ (ಸಾಂಸ್ಥಿಕ ಪ್ರತ್ಯೇಕತೆ) ಮಾಡಿಸಿಕೊಳ್ಳಲು ನಿರಾಕರಿಸುತ್ತಿರುವ ಬಗ್ಗೆ , ರೋಗಿಗಳಿಂದ ಪ್ರತಿರೋಧವ ಎದುರಾಗುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿರುತ್ತದೆ.
ರೋಗಿಗಳು ಈ ರೀತಿ ಪ್ರತಿರೋಧವನ್ನು ವ್ಯಕ್ತಪಡಿಸುವುದರಿಂದ ರೋಗಿಯ ಮನೆಮಂದಿಗೆಲ್ಲ ರೋಗ ತಗಲುವ ಸಂಭವ ಅಧಿಕವಾಗಿದ್ದು, ಪಾಸಿಟಿವ್ ಪ್ರಕರಣಗಳು ಅಲ್ಪ ಸಮಯದಲ್ಲಿ ಹೆಚ್ಚಾಗಿ , ಆಸ್ಪತ್ರೆಗಳಲ್ಲಿ ದಾಖಲಾಗುವ ರೋಗಿಗಳ ಸಂಖ್ಯೆ ಹಾಗೂ ಆಸ್ಪತ್ರೆಗಳ ಬೆಡ್ ಗಳಿಗೆ ಬೇಡಿಕೆ ಹೆಚ್ಚಾಗಿ, ಬೆಡ್ ಗಳ ಕೊರತೆ ಉಂಟಾಗುರುವುದರಿಂದ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಆಸ್ಪತ್ರೆಗಳಲ್ಲಿ ಕಾರ್ಯಚರಣೆಗೆ ಅಡಚಣೆಯುಂಟಾತ್ತದೆ.
ಅಲ್ಲದೇ ಅಸ್ಪತ್ರೆಗಳಲ್ಲಿ ಬೆಡ್ ಗಳನ್ನು ಆಶ್ರಯಿಸಿ ಬರುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿ, ಈಗಾಗಲೇ ಸೀಮಿತ ಸಂಖ್ಯೆಯಲ್ಲಿರುವ ಆಸ್ಪತ್ರೆ ಬೆಡ್ ಗಳ ಪೂರ್ಣಗೊಂಡು, ಬೆಡ್ ಗಳು ಸರಿಯಾದ ಸಮಯದಲ್ಲಿ ಲಭ್ಯವಾಗದೇ ಸಾವಿನ ಪ್ರಮಾಣ ಹೆಚ್ಚಾಗಬಹುದು.
ಆದ್ದರಿಂದ ಆರೋಗ್ಯ ಪ್ರಾಧಿಕಾರಗಳು /ವಾರ್ಡ್ ಕಾರ್ಯಪಡೆ / ಗ್ರಾಮ ಕಾರ್ಯಪಡೆಯ ಅಭಿಪ್ರಾಯದಂತ ಮನೆಯ ಪ್ರತ್ಯೇಕತೆಗೆ ಅಗತ್ಯವಾದ ಸೌಲಭ್ಯಗಳನ್ನು ಮನೆಗಳಲ್ಲಿ ಹೊಂದಿರದ ರೋಗಿಗಳು ಸಾಂಸ್ಥಿಕ ಪ್ರತ್ಯೇಕತೆಗೆ (ಕೋವಿಡ್ ಕೇರ್ ಸೆಂಟರ್ ) ಕಡ್ಡಾಯವಾಗಿ ಸ್ಥಳಾಂತರಗೊಳ್ಳಬೇಕು.
ಆದರೆ ಅಂತಹ ರೋಗಿಗಳ ಸ್ಥಳಾಂತರವನ್ನು ತಡೆಯುವ, ವಿರೋಧಿಸುವ, ಪ್ರತಿರೋಧಿಸುವ ಯಾವುದೇ ವ್ಯಕ್ತಿಯ ಅಥವಾ ರೋಗಿಯ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005, ಸಾಂಕ್ರಾಮಿಕ ನಿಯಂತ್ರಣ ಕಾಯ್ದೆ 2020 ಮತ್ತು ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶಿಸಿದ್ದಾರೆ.