ಅರ್ಚಕರಿಗೆ ಕಿಟ್ ಹಾಗೂ ವರ್ಷಾಸನ ಬಿಡುಗಡೆ ಮಾಡಲು ನಿರ್ಧರಿಸಿದ ಸರಕಾರ
ಮಂಗಳೂರು, ಮೇ 20, 2021: ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ರಾಜ್ಯದ ದೇವಸ್ಥಾನಗಳ ಅರ್ಚಕರಿಗೆ ಸಹಾಯವಾಗುವ ಮಹತ್ವದ ಘೋಷಣೆ ಮಾಡಿದ್ದಾರೆ.
ಅರ್ಚಕರಿಗೆ ಮುಂಗಡ 33.5 ಕೋಟಿ ತಸ್ತಿಕ್ ಹಾಗೂ 4.5 ಕೋಟಿ ವರ್ಷಾಸನ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
50 ಸಾವಿರಕ್ಕೂ ಹೆಚ್ಚು ಅರ್ಚಕರಿಗೆ ಆಹಾರ ಕಿಟ್ ನೀಡಲು ಆದೇಶ:
ಇದೇ ವೇಳೆ ರಾಜ್ಯ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆಗೆ ಒಳಪಡುವ ‘ಸಿ’ ದರ್ಜೆಯ ದೇವಾಲಯದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಅರ್ಚಕರು ಮತ್ತು ಸಿಬ್ಬಂದಿಗಳಿಗೆ ಆಯಾಯ ಜಿಲ್ಲೆಯ ಅನ್ನದಾಸೋಹ ನಡೆಸುವ ‘ಎ’ ಮತ್ತು ‘ಬಿ’ ದರ್ಜೆಯ ದೇವಾಲಯಗಳಲ್ಲಿ ಲಭ್ಯವಿರುವ ಅಕ್ಕಿ ಮತ್ತು ಇತರ ದವಸ ಧಾನ್ಯಗಳನ್ನು ಆಹಾರದ ಕಿಟ್ ಗಳ ರೂಪದಲ್ಲಿ ತಯಾರಿಸಿ ನೀಡಲು ಸೂಚಿಸಿದೆ.
ಉಳಿದ ಆಹಾರ ಧಾನ್ಯಗಳನ್ನು ಕಷ್ಟದಲ್ಲಿ ಇರುವ ಸಾರ್ವಜನಿಕರಿಗೆ ಆಹಾರದ ಕಿಟ್ ತಯಾರಿಸಿ ನೀಡಲು ಸರಕಾರ ಆದೇಶಿಸಿದೆ.
ಆಹಾರ ಧಾನ್ಯ ಲಭ್ಯವಿಲ್ಲದಿದ್ದಲ್ಲಿ ಅಥವಾ ಸಾಲದಿದ್ದಲ್ಲಿ ‘ಸಿ’ ದರ್ಜೆಯ ದೇವಾಲಯದ ಅರ್ಚಕರು ಮತ್ತು ಸಿಬ್ಬಂದಿಗಳಿಗೆ ಮಾತ್ರ ದೇವಾಲಯದ ನಿಧಿಯಿಂದ ವೆಚ್ಚ ಭರಿಸಿ ಆಹಾರ ಕಿಟ್ ವಿತರಿಸಲು ಆದೇಶಿಸಿದೆ.