ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗ ತಡೆಯಲು ಮುಂಜಾಗೃತಾ ಕ್ರಮ: ಜಿ. ಜಗದೀಶ್

 ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗ ತಡೆಯಲು ಮುಂಜಾಗೃತಾ ಕ್ರಮ: ಜಿ. ಜಗದೀಶ್
Share this post

ಉಡುಪಿ ಮೇ 16, 2021: ಜಿಲ್ಲೆಯಲ್ಲಿ ಅಕಾಲಿಕ ಮಳೆ ಸುರಿಯುತ್ತಿದ್ದು, ಭಾಗಶಃ ಮಳೆಗಾಲ ಚುರುಕುಗೊಂಡಿರುವುದರಿಂದ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗ್ಯೂ, ಚಿಕುಂಗುನ್ಯಾ ಮತ್ತು ಮೆದುಳು ಜ್ವರ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತವೆ. ಜನ ಜಾಗೃತರಾಗಿ ಮುಂಜಾಗೃತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.

ಮೇ 16 ನ್ನು ರಾಷ್ಟ್ರೀಯ ಡೆಂಗ್ಯೂ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಡೆಂಗ್ಯೂ ಪ್ರಕರಣಗಳನ್ನು ಕನಿಷ್ಟ ಮಟ್ಟಕ್ಕೆ ಇಳಿಸುವ ಗುರಿಯನ್ನು ಆರೋಗ್ಯ ಇಲಾಖೆ ಹೊಂದಿದೆ. ಸಾಂಕ್ರಾಮಿಕ ರೋಗಗಳ ತಡೆಗೆ ವಿಶೇಷ ಒತ್ತು ನೀಡಲಾಗಿದ್ದು, ಸಾಂಕ್ರಾಮಿಕ ರೋಗ ಪತ್ತೆ, ಸಂಪೂರ್ಣ ಚಿಕಿತ್ಸೆ ಹಾಗೂ ನಿಯಂತ್ರಣ ಕ್ರಮಗಳ ಅನುಷ್ಠಾನದ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಮಹತ್ತರವಾದ ಹೆಜ್ಜೆ ಇಡುತ್ತಿದೆ.

ಡೆಂಗ್ಯೂ ತಡೆಯುವ ನಿಟ್ಟಿನಲ್ಲಿ ಲಾರ್ವಾ ಉತ್ಪತ್ತಿ ತಾಣಗಳ ನಾಶ ಹಾಗೂ ಮಲೇರಿಯಾ ನಿಯಂತ್ರಣದಲ್ಲಿ ಸಕ್ರಿಯ ರಕ್ತಲೇಪನ ಸಂಗ್ರಹ ಅಭಿಯಾನ, ದೃಢಪಟ್ಟ ಪ್ರಕರಣಕ್ಕೆ ಸ್ಥಳದಲ್ಲಿಯೇ ಶೀಘ್ರ ಚಿಕಿತ್ಸೆ ನಡೆಸಲಾಗುತ್ತಿದೆ.

ಆರೋಗ್ಯ ಇಲಾಖೆಯಿಂದ ಸೊಳ್ಳೆ ಉತ್ಪತ್ತಿ ತಾಣಗಳ ಪತ್ತೆ ಹಾಗೂ ಲಾರ್ವಾಗಳ ನಾಶಕ್ಕೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ ಚಟುವಟಿಕೆ ಪ್ರಾರಂಭಗೊಂಡಿದ್ದು, ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ಕಾಳಜಿ ವಹಿಸಿ ಈ ಕಾರ್ಯಕ್ರಮಗಳನ್ನು ನಡೆಸಲು ಸೂಚಿಸಲಾಗಿರುತ್ತದೆ. 15 ದಿನಕ್ಕೊಮ್ಮೆ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಆಶಾ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಂದ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನಾ ಕಾರ್ಯ ನಡೆಯುತ್ತಿದೆ.

ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಕೀಟಜನ್ಯ ರೋಗಗಳ ಶೀಘ್ರಪತ್ತೆಗೆ ಹಾಗೂ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆಗೆ ಅನುಕೂಲವಾಗುವಂತೆ ವಿಶೇಷ ನಿಯಂತ್ರಣ ತಂಡಗಳನ್ನು ರಚಿಸಿ ಚಟುವಟಿಕೆ ನಡೆಯುತ್ತಿದೆ. ನಿಯಂತ್ರಣಾ ಕ್ರಮವಾಗಿ ಜ್ವರ ಸಮೀಕ್ಷೆ, ಸೊಳ್ಳೆ ಉತ್ಪತ್ತಿ ತಾಣಗಳ ನಾಶ ಕಾರ್ಯ, ಹೊರಾಂಗಣ ಒಳಾಂಗಣ ಧೂಮೀಕರಣವನ್ನು ವ್ಯವಸ್ಥಿತವಾಗಿ ಸಮಸ್ಯಾತ್ಮಕ ಪ್ರದೇಶಗಳಲ್ಲಿ ನಡೆಸಲಾಗುತ್ತಿದೆ.

ಹಿಂದಿನ ವರ್ಷಗಳಲ್ಲಿ ಮಲ್ಪೆ ಬಂದರು ಪ್ರದೇಶ ಹಾಗೂ ನಗರಸಭಾ ವ್ಯಾಪ್ತಿಯ ಪ್ರದೇಶಗಳ ಸುತ್ತಮುತ್ತ ಹೆಚ್ಚಿನ ಮಲೇರಿಯಾ/ಡೆಂಗ್ಯೂ ಪ್ರಕರಣಗಳ ವರದಿಯ ಹಿನ್ನಲೆಯಲ್ಲಿ ಸದ್ರಿ ಪ್ರದೇಶಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಈಗಾಗಲೇ ಆರೋಗ್ಯ ಇಲಾಖೆ, ನಗರಸಭೆ ಹಾಗೂ ಮೀನುಗಾರಿಕಾ ಇಲಾಖೆಗಳ ಸಮನ್ವಯದೊಂದಿಗೆ ಸೊಳ್ಳೆಗಳ ನಿಯಂತ್ರಣ, ತ್ವರಿತ ರೋಗ ಪತ್ತೆ ಹಾಗೂ ಚಿಕಿತ್ಸೆ, ನಿಂತ ನೀರಿನ ಸೂಕ್ತ ವಿಲೇವಾರಿ ಇತ್ಯಾದಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಜಿಲ್ಲೆಯಿಂದ ಹೆಚ್ಚಿನ ಕೆಲಸಕ್ಕಾಗಿ ಇತರೇ ಜಿಲ್ಲೆಗಳಿಗೆ ವಲಸೆ ಹೋಗಿ ಕೆಲಸ ಮಾಡುತ್ತಿರುವ ನಾಗರಿಕರು, ಡೆಂಗ್ಯೂ ಹಾಗೂ ಇತರೇ ಜ್ಚರಗಳೊಂದಿಗೆ ವಿಶ್ರಾಂತಿ ಹಾಗೂ ಚಿಕಿತ್ಸೆಗಾಗಿ ಊರಿಗೆ ಮರಳುವುದರಿಂದ ಅಂತಹ ಪ್ರಕರಣಗಳ ಮೇಲೆ ಹೆಚ್ಚಿನ ನಿಗಾವಹಿಸಿ ಜಿಲ್ಲೆಯಲ್ಲಿ ರೋಗ ಉಲ್ಬಣಗೊಳ್ಳದಂತೆ, ಮುನ್ನೆಚ್ಚರಿಕೆ ವಹಿಸುವಂತೆ ಹಾಗೂ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಿಯಂತ್ರಣ ಮಾಡುವಂತೆ ಆರೋಗ್ಯ ಇಲಾಖೆಯ ಎಲ್ಲಾ ಅಧೀನ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.

ಮಳೆಗಾಲದ ಯಾವುದೇ ಸಾಂಕ್ರಾಮಿಕ ರೋಗಗಳನ್ನು ಶೀಘ್ರವಾಗಿ ಪತ್ತೆ ಹಚ್ಚಲು ಹಾಗೂ ಸಂಪೂರ್ಣ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆಯಲ್ಲಿ ಟೆಸ್ಟ್ ಕಿಟ್ ಗಳು, ಔಷಧಿ, ರಾಸಾಯನಿಕಗಳು ಹಾಗೂ ಉಪಕರಣಗಳು ಸುಸ್ಥಿತಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ದಾಸ್ತಾನು ಇದೆ. .

Subscribe to our newsletter!

Other related posts

error: Content is protected !!