ಕಾರವಾರ ರೆಡ್ ಕ್ರಾಸ್ ವಿಪತ್ತು ನಿರ್ವಹಣಾ ಘಟಕದಿಂದ ಶವ ಸಂಸ್ಕಾರ
ಕಾರವಾರ, ಮೇ 10, 2021: ರವಿವಾರದಂದು ಮೆದುಳು ರಕ್ತಸ್ರಾವದಿಂದ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದ ಕಾರವಾರ ತಾಲೂಕಿನ ಸದಾಶಿವಗಡದ ಅಲ್ಕಾ ನಾಯ್ಕ ಎಂಬ ಮಹಿಳೆಯ ಶವ ಸಂಸ್ಕಾರವನ್ನು ರೆಡ್ ಕ್ರಾಸ್ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ದಿವೇಕರ ಕಾಲೇಜು ಎದುರಿನ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.
ಮೃತಳ ಪತಿ ಸಂತೋಷ ನಾಯ್ಕ ಆರ್ಥಿಕವಾಗಿಯೂ ಅಸಹಾಯಕನಾಗಿದ್ದ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ, ಆತನ ಎರಡೂ ಕಣ್ಣುಗಳು ಸರಿಯಾಗಿ ಕಾಣದೆ ಇರುವ ಹಿನ್ನೆಲೆಯಲ್ಲಿ ಅಂತ್ಯಸಂಸ್ಕಾರ ಕಷ್ಟವಾಗಿತ್ತು. ಆಕೆಯ ಮಗ ಕೂಡ ಚಿಕ್ಕವನಿದ್ದು ತಾಯಿಯ ಶವ ನೋಡಲಾಗದೆ ಸಂಕಷ್ಟದಲ್ಲಿದ್ದನು. ಅಂತ್ಯಸಂಸ್ಕಾರ ಮಾಡುವ ಶಕ್ತಿ ಅವರಲ್ಲಿ ಇರಲಿಲ್ಲ
ಈ ವಿಷಯ ರೆಡ್ ಕ್ರಾಸ್ ವಿಪತ್ತು ನಿರ್ವಹಣಾ ಜಿಲ್ಲಾ ಘಟಕದ ಮುಖ್ಯಸ್ಥ ಮಾಧವ ನಾಯಕ ಗಮನಕ್ಕೆ ಬಂದಕೂಡಲೇ ರೆಡ್ ಕ್ರಾಸ್ ವಿಪತ್ತು ನಿರ್ವಹಣಾ ಘಟಕದ ಪ್ರಮುಖರ ಜೊತೆ ಚರ್ಚಿಸಿದರು.
“ಈ ಶವ ಸಂಸ್ಕಾರ ಮಾಡಲು ಎಲ್ಲರೂ ಒಪ್ಪಿದ ಬಳಿಕ ಮೃತ ಮಹಿಳೆಗೆ ಕೋವಿಡ್ ಪಾಸಿಟಿವ್ ಇಲ್ಲವೆಂಬುದನ್ನು ಖಚಿತಪಡಿಸಿಕೊಂಡೆವು. ಆ ಬಳಿಕ ಶವ ಸಂಸ್ಕಾರಕ್ಕೆ ಅಗತ್ಯ ಸಿದ್ಧತೆ ನಡೆಸಿ ಜಿಲ್ಲಾಸ್ಪತ್ರೆಯಿಂದ ಶವ ಸಾಗಿಸಿ ಧಾರ್ಮಿಕ ವಿಧಿವಿಧಾನದಂತೆ ಶವ ಸಂಸ್ಕಾರ ನಡೆಸಲಾಯಿತು. ಮೃತಳ ಪುಟ್ಟ ಮಗ ಕೈಯ್ಯಿಂದ ಚಿತೆಗೆ ಅಗ್ನಿಸ್ಪರ್ಶ ಮಾಡಿಸಲಾಯಿತು. ಈ ವೇಳೆ ಆಕೆಯ ಪತಿ ಸಂತೋಷ ನಾಯ್ಕ ಕೂಡ ಹಾಜರಿದ್ದರು,” ಎಂದು ಮಾಧವ ನಾಯಕ್ ಹೇಳಿದರು.
ಶವ ಸಾಗಾಟಕ್ಕೆ ನಗರಸಭೆ ವತಿಯಿಂದ ಪೌರಾಯುಕ್ತ ಆರ್.ಪಿ.ನಾಯ್ಕ ವಾಹನ ವ್ಯವಸ್ಥೆ ಕಲ್ಪಿಸಿಕೊಟ್ಟರು. ಶವ ದಹನಕ್ಕೆ ಕಟ್ಟಿಗೆ ವ್ಯವಸ್ಥೆಯನ್ನು ವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ ಕಲ್ಪಿಸಿದ್ದರು. ತಾಯಿ ಮೃತಪಟ್ಟು ಕೇವಲ ಮೂರು ದಿನವಾಗಿದ್ದರೂ ಅರವಿಂದ ಕೋಮಾರ ನಾಯ್ಕ ಅಂತ್ಯಸಂಸ್ಕಾರಕ್ಕೆ ಬೇಕಿದ್ದ ಸಿದ್ಧತೆ ನಡೆಸಿಕೊಟ್ಟು ಮಾನವೀಯತೆ ಮೆರೆದರು.
ರೆಡ್ ಕ್ರಾಸ್ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥ ಮಾಧವ ನಾಯಕ, ಖಜಾಂಚಿ ರಾಮಾ ನಾಯ್ಕ, ವೈದ್ಯರಾದ ಡಾ.ಹೇಮಗಿರಿ, ಡಾ.ಪ್ರವೀಣ ಇನಾಮದಾರ, ನಗರಸಭೆ ಸಿಬ್ಬಂದಿಗಳಾದ ದತ್ತಪ್ರಸಾದ ಕಲ್ಗುಟ್ಕರ್, ಗಿರೀಶ್ ಶಿರಾಲೆಕರ್, ನಾಗರಾಜ ರವಿ, ರವಿ ಶಿವಾಜಿ ಗೋರೆ, ವಿನಾಯಕ ಆಚಾರಿ ಪಾಲ್ಗೊಂಡಿದ್ದರು.