ಕಾಳು ಮೆಣಸಿನಲ್ಲಿ ಗರಿ ಉದುರುವಿಕೆ ಮತ್ತು ಅದರ ನಿರ್ವಹಣೆ
ಕೃಷಿ ಮಾಹಿತಿ
ಚಿಕ್ಕಮಗಳೂರು, ಮೇ 07, 2021: ಕಾಳು ಮೆಣಸಿನಲ್ಲಿ ಗರಿ ಉದುರುವಿಕೆಯಿಂದ ಬೆಳೆ ವೈಫಲ್ಯ ಉಂಟಾಗಿ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಶಿಲೀಂದ್ರ (ಕೊಲೆಟೊಟ್ರೈಕಮ್), ಕೀಟಗಳು, ಮಣ್ಣಿನಲ್ಲಿ ತೇವಾಂಶದ ಕೊರತೆ, ಹಣ್ಣು ಹೂವುಗಳ ಪ್ರಾಬಲ್ಯತೆ, ಅಸಮರ್ಪಕ ಪರಾಗ ಸ್ಪರ್ಶ ಮತ್ತು ಲಘು ಪೋಷಕಾಂಶಗಳಂತಹ ವಿವಿಧ ಅಂಶಗಳು ಮುಖ್ಯ ಕಾರಣಗಳಾಗಿವೆ.
ನಿರ್ವಹಣಾ ಕ್ರಮಗಳು:
ಪರಾಗ ಸ್ಪರ್ಶದಲ್ಲಿ ಬೆಳಕಿನ ಲಭ್ಯತೆಯು ಪ್ರಮುಖ ಪಾತ್ರ ವಹಿಸುತ್ತದೆ. ಮಾರ್ಚ್ ಸಮಯದಲ್ಲಿ ೨೫೦-೪೦೦ ಮಿ.ಮೀ ಮಳೆ ಮತ್ತು ನೆರಳು ನಿಯಂತ್ರಣ ಗರಿಕಟ್ಟಲು ಸಹಕರಿಸುತ್ತದೆ. ಸಮರ್ಪಕ ನೆರಳು ಮತ್ತು ನೀರು ನಿರ್ವಹಣೆಯಿಂದ ಜೂನ್ ತಿಂಗಳಲ್ಲಿ ಗರಿಗಳು ಉದ್ದವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತವೆ.
ಏಪ್ರಿಲ್ ತಿಂಗಳಲ್ಲಿ ನೆರಳು ನಿಯಂತ್ರಣ ಮಾಡುವುದರಿಂದ ಸೂರ್ಯನ ಬೆಳಕು ಸರಾಗವಾಗಿ ಬೀಳುವುದರಿಂದ ಸರಿಯಾದ ರೀತಿಯಲ್ಲಿ ಪರಾಗ ಸ್ಪರ್ಶ ಹೊಂದಲು ಸಹಾಯವಾಗುತ್ತದೆ. ಮಾರ್ಚ್-ಮೇ ತಿಂಗಳಲ್ಲಿ ತುಂತುರು ನೀರಾವರಿ ಮತ್ತು ಬುಡಕ್ಕೆ ನೀರು ಹಾಯಿಸುವುದು. ಪ್ರತಿ ಬಳ್ಳಿಗೆ 10-12 ದಿನಗಳ ಅಂತರದಲ್ಲಿ ನೀರು ಕೊಡಬೇಕು. 50-60 ಲೀಟರ್ ನೀರು ಬೇಕಾಗುತ್ತದೆ. ಈ ರೀತಿಯ ಮುಂಜಾಗ್ರತೆಯಿಂದ ಉತ್ತಮ ಗರಿಗಳ ಆರಂಭ, ಚಿಬ್ಬುರೋಗ ಹತೋಟಿ, ಹೆಚ್ಚಿನ ಸಂಖ್ಯೆಯ ದ್ವಿಲಿಂಗಿ ಹೂಗಳು ಮತ್ತು ಉತ್ತಮ ಇಳುವರಿ ಪಡೆಯಬಹುದು.
ಗರಿ ಉದುರುವಿಕೆಯನ್ನು ತಡೆಗಟ್ಟಲು ಶೇ.1% ಬೋರ್ಡೊ ದ್ರಾವಣ ಅಥವಾ ಥ್ಯೆಯೋಫಿನೈಟ್ ಮಿಥೈಲ್ 1 ಮಿ.ಲೀ/ಲೀಟರ್ ನೀರಿನೊಂದಿಗೆ ಸಿಂಪಡಿಸುವುದು ಸೂಕ್ತ. 200 ಲೀಟರ್ ನೀರಿಗೆ ಒಂದು ಕೆ.ಜಿ 19:19:19+200 ಗ್ರಾಂ ಮ್ಯಾಗ್ನಿಷಿಯಂ ಸಲ್ಫೇಟ್+100 ಗ್ರಾಂ ಬೋರಾನ್+400 ಗ್ರಾಂ ಬಾವಿಸ್ಟಿನ್‌ನ್ನು ಏಪ್ರಿಲ್ ತಿಂಗಳಿನಲ್ಲಿ ಎಲೆಗಳ ಮೇಲೆ ಸಿಂಪಡಿಸುವುದು.
ಹೆಚ್ಚಿನ ಮಾಹಿತಿಗಾಗಿ ಮೂಡಿಗೆರೆ (ತೋಟಗಾರಿಕೆ) ಅಗ್ರಿವಾರ್ ರೂಂ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಕಿರಣ್ ಎಂ.ಆರ್ ದೂರವಾಣಿ ಸಂಖ್ಯೆ- ೭೩೩೮೫೫೦೫೧೮ನ್ನು ಸಂಪರ್ಕಿಸಬಹುದಾಗಿದೆ ಎಂದು ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.