ಹೋಮ್ ಐಸೋಲೇಶನ್ ವ್ಯಕ್ತಿಗಳ ಆರೋಗ್ಯ ವಿಚಾರಿಸಲು ವೈದ್ಯಕೀಯ ತಂಡ ರಚನೆ
ಮಂಗಳೂರು, ಮೇ 06. 2021: ಕೋವಿಡ್ ಸೋಂಕು ಧೃಡಪಟ್ಟಿರುವ ರೋಗಿಗಳಲ್ಲಿ ಶೇಕಡಾ 85.70 ಗೂ ಹೆಚ್ಚು ರೋಗಿಗಳು ಹೋಮ್ ಐಸೋಲೇಶನ್ ಚಿಕಿತ್ಸೆ ಪಡೆಯುತ್ತಿದ್ದು. ಇವರ ಆರೋಗ್ಯ ಕ್ಷೇಮಗಳನ್ನು ವಿಚಾರಿಸಲು ವೈದ್ಯಕೀಯ ತಂಡಗಳನ್ನು ರಚನೆ ಮಾಡುವುದರೊಂದಿಗೆ ಅವರುಗಳಿಗೆ ಸೂಕ್ತ ಚಿಕಿತ್ಸೆ ಕೊಡಲು ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.
ಹೋಮ್ ಐಸೋಲೇಷನ್ ಒಳಗಾದವರಿಗೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯರನ್ನು ಒಳಗೊಂಡ 78 ಕ್ಕೂ ಹೆಚ್ಚು ತಂಡಗಳನ್ನು ರಚಿಸುವುದರೊಂದಿಗೆ ಅವರುಗಳು ಮನೆಮನೆಗೆ ಭೇಟಿ ನೀಡಿ ಕೋವಿಡ್ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಒದಗಿಸಬೇಕು. ಇವುಗಳ ಮೇಲ್ವಿಚಾರಣೆ ಮಾಡಲು ಸಹ ಅಧಿಕಾರಿಗಳನ್ನು ನೇಮಕ ಮಾಡಬೇಕು
ಕೋಟ ಶ್ರೀನಿವಾಸ ಪೂಜಾರಿ
ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವೈದ್ಯಕೀಯ ತಜ್ಞರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ 8,414 ಕೋವಿಡ್ ಸಕ್ರಿಯ ಪ್ರಕರಣಗಳಿದ್ದ್ದು ಅವುಗಳಲ್ಲಿ 1,204 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 7,210 ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ರೋಗಿಗಳು ಶೇ.14.30 ರಷ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಬಾಕಿ ಉಳಿದವರು ಹೋಮ್ ಐಸೋಲೇಷನ್ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ ಶೇ.75 ರಷ್ಟು ನಗರ ಪ್ರದೇಶದ ವ್ಯಾಪ್ತಿಯವರೇ ಇದ್ದಾರೆ, ಅವರುಗಳಿಗೆ ಸೂಕ್ತ ಚಿಕಿತ್ಸೆ ನೀಡುವುದರ ಜೊತೆಗೆ ಅವರ ಯೋಗಕ್ಷೇಮ ಪ್ರತಿದಿನ ವಿಚಾರಿಸಬೇಕು ಎಂದರು.
ಹೋಮ್ ಐಸೋಲೇಷನ್ ಒಳಗಾದವರಿಗೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯರನ್ನು ಒಳಗೊಂಡ 78 ಕ್ಕೂ ಹೆಚ್ಚು ತಂಡಗಳನ್ನು ರಚಿಸುವುದರೊಂದಿಗೆ ಅವರುಗಳು ಮನೆಮನೆಗೆ ಭೇಟಿ ನೀಡಿ ಕೋವಿಡ್ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಒದಗಿಸಬೇಕು. ಇವುಗಳ ಮೇಲ್ವಿಚಾರಣೆ ಮಾಡಲು ಸಹ ಅಧಿಕಾರಿಗಳನ್ನು ನೇಮಕ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ರೋಗಿಗಳಲ್ಲಿ 45 ವರ್ಷ ಮೇಲ್ಪಟ್ಟ ಹಾಗೂ 45 ವರ್ಷ ದೊಳಗಿನ ರೋಗಿಗಳ ಮಾಹಿತಿ ಕಲೆ ಹಾಕುವುದರೊಂದಿಗೆ ಅವರುಗಳಲ್ಲಿ ರಕ್ತದೊತ್ತಡದಿಂದ ಬಳಲುವವರು, ಮಧುಮೇಹ ಸೇರಿದಂತೆ ಮತ್ತಿತರ ಕಾಯಿಲೆ ಹೊಂದಿರುವವರನ್ನು ಗುರುತಿಸುವುದರೊಂದಿಗೆ ಅವರುಗಳ ರಕ್ತ ಪರೀಕ್ಷೆ ಮತ್ತಿತರ ಪರೀಕ್ಷೆಗಳನ್ನು ಮಾಡುವುದರೊಂದಿಗೆ ಇನ್ನಿತರ ತೊಂದರೆಗಳಾದಲ್ಲಿ ಚಿಕಿತ್ಸೆ ನೀಡಬೇಕು ಎಂದು ಹೇಳಿದರು.
ಸಂಸದ ನಳೀನ್ ಕುಮಾರ್ ಕಟೀಲ್ ಮಾತನಾಡಿ, ಕೆಲವೊಮ್ಮೆ ಕೋವಿಡ್ ದೃಢಪಟ್ಟು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವಂತವರು ತೀವ್ರ ತರದ ಉಸಿರಾಟದ ಸಮಸ್ಯೆ ಉಂಟಾಗಿ ಕೊನೆ ಘಳಿಗೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬರುತ್ತಾರೆ ಇದಕ್ಕೆ ಆಸ್ಪದ ನೀಡಬಾರದು ಸೋಂಕಿತರು ತಮಗಾಗುವ ತೊಂದರೆಗಳನ್ನು ಪ್ರತಿದಿನ ಕಂಟ್ರೋಲ್ ರೂಮ್ ನಲ್ಲಿ ಕಾರ್ಯನಿರ್ವಹಿಸುವ ವೈದ್ಯಾಧಿಕಾರಿಗಳು ಹಾಗೂ ಎ.ಎನ್.ಎಂ ಗಳನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದರು.
ಮನೆಯಲ್ಲಿಯೇ ಚಿಕಿತ್ಸೆ ಪಡೆಯುವವರ ಯೋಗಕ್ಷೇಮ ವಿಚಾರಿಸಲು ಜಿಲ್ಲೆಯ 8 ಮೆಡಿಕಲ್ ಕಾಲೇಜಿನ ಮೆಡಿಕಲ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಬೇಕೆಂದು ಸಲಹೆ ಮಾಡಿದರು.
ಕೊರೋನ ಸೋಂಕು ಬಂದು ಹೋಂ ಐಸೊಲೇಶನ್ನಲ್ಲಿ ಇರುವವರು ಏನೆಲ್ಲ ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಮಾಹಿತಿಯನ್ನು ಒಳಗೊಂಡ ವೀಡಿಯೋ ಚಿತ್ರೀಕರಣ ಮಾಡುವುದರೊಂದಿಗೆ ಜನರಿಗೆ ತಲುಪಿಸಬೇಕು ಎಂದರು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಮಾತನಾಡಿ ಮುಂಬರುವ ದಿನಗಳಲ್ಲಿ ಕೋವಿಡ್ ಪ್ರಕರಣಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಂತವರಿಗೆ ಚಿಕಿತ್ಸೆ ನೀಡಲು ವೆಂಟಿಲೇಟರ್ಗಳು ಹಾಗೂ ವೆಂಟಿಲೇಟರ್ಗಳನ್ನು ಒಳಗೊಂಡ ಆಂಬುಲೆನ್ಸ್ಗಳನ್ನು ಜಿಲ್ಲಾಡಳಿತದಿಂದ ಒದಗಿಸಲಾಗುವುದು ಅದಕ್ಕೆ ಅಗತ್ಯವಿರುವ ಸಿದ್ಧತೆಗಳನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ತಿಳಿಸಿದರು. ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಕೊರತೆ ಇರುವಲ್ಲಿ ವೈದ್ಯರುಗಳು ಹಾಗೂ ವೈದ್ಯಕೀಯ ಸಿಬ್ಬಂದಿಗಳನ್ನು ತುಂಬಲಾಗುವುದು ಎಂದರು.
ಜಿಲ್ಲೆಯಲ್ಲಿ ಕೆಲವು ಖಾಸಗಿ ಸಂಸ್ಥೆಗಳು ಧಾರ್ಮಿಕ ಸಂಸ್ಥೇಗಳು ಕೋವಿಡ್ ಕೇರ್ ಸೆಂಟರ್ ಗಳನ್ನು ತೆಗೆಯಲು ಮುಂದೆ ಬರುತ್ತಿವೆ. ಈ ರೀತಿ ಕೋವಿಡ್ ಕೇರ್ ಸೆಂಟರ್ ಗಳನ್ನು ತೆಗೆಯುವ ಮುನ್ನ ರೋಗಿಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಪರಿಶೀಲನೆ ನಡೆಸಿ ಒಪ್ಪಿಗೆ ನೀಡಿದ ನಂತರ ತೆರೆಯಲು ಮುಂದಾಗಬೇಕು ಎಂದರು.