ಕೋವಿಡ್-19 ನಿಯಂತ್ರಣಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಬಿಗಿ ಕ್ರಮ

 ಕೋವಿಡ್-19 ನಿಯಂತ್ರಣಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಬಿಗಿ ಕ್ರಮ
Share this post

ಮಂಗಳೂರು, ಮೇ 06, 2021: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತವು ಹಲವು ಕಟ್ಟುನಿಟ್ಟಿನ ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಿದೆ.

ನಿನ್ನೆ ನಡೆದ ತಜ್ಞರ ಸಮಿತಿ ಸಭೆ ಮತ್ತು ಜಿಲ್ಲೆಯ ಜನಪ್ರತಿನಿಧಿಗಳನ್ನು ಒಳಗೊಂಡಂತೆ ಇಂದು ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ನಿರ್ಣಯಿಸಿರುವಂತೆ, ಸಾರ್ವಜನಿಕರ ಅನಗತ್ಯ ಓಡಾಟದಿಂದ ಸೋಂಕು ಹರಡಿ ಪರಿಸ್ಥಿತಿಯು ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಗಳಿರುವುದರಿಂದ ಜಿಲ್ಲೆಯ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ್-19‌ ಸೋಂಕು ಪ್ರಸರಣದ ಸರಪಳಿಯನ್ನು ಮುರಿಯಲು ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಇದನ್ನೂ ಓದಿ: ಮೇ.15 ರವರೆಗಿನ ಸಭೆ ಸಮಾರಂಭ ನಡೆಸಲು ಮಾತ್ರ ಅವಕಾಶ: ಕೋಟ ಶ್ರೀನಿವಾಸ ಪೂಜಾರಿ

ಈ ಕುರಿತು ಜಿಲ್ಲಾಧಿಕಾರಿ ರಾಜೇಂದ್ರ ಕೆ ವಿ ಆದೇಶ ಹೊರಡಿಸಿದ್ದಾರೆ.

ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆದೇಶ

               ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಪ್ರಸರಣದ ಸರಪಳಿಯನ್ನು ಮುರಿಯಲು (ವಾರಾಂತ್ಯದ ಕರ್ಫ್ಯೂ ದಿನಗಳನ್ನು ಹೊರತುಪಡಿಸಿ) ಈಗಾಗಲೇ ಜ್ಯಾರಿಯಲ್ಲಿರುವ ಉಲ್ಲೇಖ (1) ಮತ್ತು (2) ಆದೇಶದೊಂದಿಗೆ ದಿನಾಂಕ: 07-05-2021 ಬೆಳಿಗ್ಗೆ 6.00 ಗಂಟೆಯಿಂದ ಅನ್ವಯವಾಗುವಂತೆ ಮುಂದಿನ ಆದೇಶದವರೆಗೆ ಕೆಳಕಂಡ ಹೆಚ್ಚುವರಿ ಮಾರ್ಗಸೂಚಿಗಳು ಕಟ್ಟುನಿಟ್ಟಾಗಿ ಜಾರಿಯಲ್ಲಿರುತ್ತವೆ.

  1. ಮಂಗಳೂರಿನ ಬೈಕಂಪಾಡಿಯ ಎಪಿಎಂಸಿ, ಎಲ್ಲಾ ದಿನಸಿ ಅಂಗಡಿಗಳು ಹಾಗೂ ಅವಶ್ಯಕ ಸೇವೆಗಳನ್ನು ಒದಗಿಸುವ ಎಲ್ಲಾ ಅಂಗಡಿಗಳು ಬೆಳಿಗ್ಗೆ 6.00 ಗಂಟೆಯಿಂದ ಬೆಳಿಗ್ಗೆ 9.00 ಗಂಟೆಯವರೆಗೆ ಮಾತ್ರ ತೆರೆಯಲು ಅನುಮತಿಸಿದೆಬೆಳಿಗ್ಗೆ 10.00 ಗಂಟೆಯ ನಂತರ ಎಲ್ಲಾ ಅಂಗಡಿಗಳನ್ನು ಮುಚ್ಚತಕ್ಕದ್ದು ಹಾಗೂ ನಿಗದಿಪಡಿಸಿದ ಸಮಯದ ನಂತರ ಯಾವುದೇ ಮಾರಾಟಗಾರರು ಹಾಗೂ ಖರೀದಿದಾರರ ಓಡಾಟವನ್ನು ನಿಷೇಧಿಸಿದೆ.
  2. ಆನ್ಲೈನ್ಸೇವಾ ಪೂರೈಕೆದಾರರಾದ Swiggy, Zomato ಇತ್ಯಾದಿ ಸೇವಾ ಪೂರೈಕೆದಾರರು ರಾತ್ರಿ 11.00 ಗಂಟೆಯವರೆಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗಿದೆ
  3. ಅನುಮತಿ ಪಡೆದ ಸಮಾರಂಭಗಳೂ ಸೇರಿದಂತೆ, ಮದುವೆ ಮತ್ತು ಇತರೆ ಎಲ್ಲಾ ಸಮಾರಂಭಗಳನ್ನು ದಿನಾಂಕ: 15-05-2021 ಮಧ್ಯರಾತ್ರಿ 12.00 ಗಂಟೆಯ ನಂತರ ನಿರ್ಬಂಧಿಸಲಾಗಿದೆ. ದಿನಾಂಕ: 15-05-2021 ರವರೆಗೆ ನಿಗದಿಯಾಗಿರುವ ಮದುವೆಗಳನ್ನು ಸರ್ಕಾರದ ಮಾರ್ಗಸೂಚಿಯನ್ವಯ ನಡೆಸಲು ಅನುಮತಿಸಿದೆ.
  4. ಅನಗತ್ಯವಾಗಿ ಸಕಾರಣಗಳಿಲ್ಲದೆ ಸಂಚರಿಸುವ ಎಲ್ಲಾ ವಾಹನಗಳನ್ನು ಮುಟ್ಟುಗೋಲು ಹಾಕಲಾಗುವುದು.
  5. ಸ್ಥಳೀಯ ಸಂಸ್ಥೆಗಳು ಕೋವಿಡ್ ಸಮುಚಿತ ವರ್ತನೆಯನ್ನು ಉಲ್ಲಂಘಿಸಿದವರ ವಿರುದ್ಧ ಸರ್ಕಾರದ ಮಾರ್ಗಸೂಚಿಗಳನ್ವಯ ಕ್ರಮ ಕೈಗೊಳ್ಳುವುದು.

ವಾರಂತ್ಯ ಕರ್ಫ್ಯೂ

ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿ 9.00 ಗಂಟೆಯಿಂದ ಸೋಮವಾರ ಬೆಳಿಗ್ಗೆ 6.00 ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ಜ್ಯಾರಿಯಲ್ಲಿರುತ್ತದೆ.

ವಾರಂತ್ಯದ ಕರ್ಫ್ಯೂ ಗೆ ಮಾರ್ಗಸೂಚಿಗಳು:

  1. ಔಷಧಿ ಅಂಗಡಿಗಳು ಮತ್ತು ಆಸ್ಪತ್ರೆಗಳನ್ನು ಹೊರತುಪಡಿಸಿ ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಿಗ್ಗೆ 6 ರವರೆಗೆ ಎಲ್ಲಾ ರೀತಿಯ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಿದೆ. ಸಾರ್ವಜನಿಕರು ಈ ಸೇವೆಗಳನ್ನು ತಮ್ಮ ಹತ್ತಿರದ ಅಂಗಡಿಗಳಿಂದ ಮಾತ್ರವೇ ಪಡೆಯತಕ್ಕದ್ದು.
  2. ತುರ್ತು ಮತ್ತು ಅಗತ್ಯ ಸೇವೆಗಳೊಂದಿಗೆ ವ್ಯವಹರಿಸುವ ಮತ್ತು 24/7 ಕಾರ್ಯಾಚರಣೆಗಳ ಅಗತ್ಯವಿರುವ ಕೈಗಾರಿಕೆಗಳು / ಕಂಪನಿಗಳು / ಸಂಸ್ಥೆಗಳು ಮಾತ್ರವೇ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.
  3. ಈ ಸಂದರ್ಭದಲ್ಲಿ ಯಾವುದೇ ನಿರ್ಮಾಣ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ. ಆದಾಗ್ಯೂ ನಿರ್ಮಾಣ ಚಟುವಟಿಕೆಗಳು ನಡೆಯುವ ಸ್ಥಳದಲ್ಲಿಯೇ ಕಾರ್ಮಿಕರು ಲಭ್ಯವಿದ್ದು, ಹೊರಗಿನ ಪ್ರದೇಶಗಳಿಂದ ಕಾರ್ಮಿಕರನ್ನು ಕರೆತರುವ ಅಗತ್ಯತೆಯಿಲ್ಲದಿದ್ದಲ್ಲಿ ಅಂತಹ ನಿರ್ಮಾಣ ಕಾರ್ಯಗಳನ್ನು ನಡೆಸಬಹುದಾಗಿರುತ್ತದೆ.
  4. ರೋಗಿಗಳು ಮತ್ತು ಅವರ ಪರಿಚಾರಕರು / ವೈದ್ಯಕೀಯ ತುರ್ತು ಸಂದರ್ಭದಲ್ಲಿ ಜನರಿಗೆ ಕನಿಷ್ಠ ಪುರಾವೆಗಳೊಂದಿಗೆ ಸಂಚರಿಸಲು ಅನುಮತಿಸಲಾಗಿದೆ.
  5. ದಿನಾಂಕ: 08-05-2021 ಮತ್ತು 09-05-2021 ರಂದು ನಿಗದಿಯಾಗಿರುವ ಮದುವೆ ಕಾರ್ಯಕ್ರಮಗಳನ್ನು ಸರ್ಕಾರದ ಮಾರ್ಗಸೂಚಿಯಂತೆ ಜನರ ಪರಿಮಿತಿಗೊಳಪಟ್ಟು COVID 19 ಸಮುಚಿತ ವರ್ತನೆಯನ್ನು ಕಡ್ಡಾಯವಾಗಿ ಪಾಲಿಸಿಕೊಂಡು ನಡೆಸಲು ಅನುಮತಿ ನೀಡಲಾಗಿದೆ.
  6. ಶವಸಂಸ್ಕಾರ / ಅಂತ್ಯಕ್ರಿಯೆಗಳನ್ನು ಗರಿಷ್ಠ 5 ಜನರ ಪರಿಮಿತಿಗೊಳಪಟ್ಟು  COVID 19 ಸಮುಚಿತ ವರ್ತನೆಯನ್ನು ಕಡ್ಡಾಯವಾಗಿ  ಪಾಲಿಸಿಕೊಂಡು ನಡೆಸುವುದು.   

ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮೇಲಿನ ಆದೇಶವನ್ನು ಯಾವುದೇ ವ್ಯಕ್ತಿ/ವ್ಯಕ್ತಿಗಳು ಉಲ್ಲಂಘಿಸಿದ್ದಲ್ಲಿ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಕಲಂ 51 ರಿಂದ 60 ರನ್ವಯ, ಐಪಿಸಿ ಕಲಂ 188 ರಂತೆ ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020 ರ ಕಲಂ 5 ಮತ್ತು 10 ರಂತೆ ಕ್ರಮ ಜರುಗಿಸಲಾಗುವುದು.

Subscribe to our newsletter!

Other related posts

error: Content is protected !!