ಅಗತ್ಯವಿರುವವರ ಮನೆಗೆ ಆಮ್ಲಜನಕ ಪೂರೈಕೆ
ಬೆಂಗಳೂರು, ಮೇ 02, 2021: ಸುಮಾರು 20 ಆಮ್ಲಜನಕ ಸಿಲಿಂಡರ್ ಗಳ ಮೂಲಕ ಅಗತ್ಯವಿರುವ ವ್ಯಕ್ತಿಗಳಿಗೆ ಆಮ್ಲಜನಕ ಪೂರೈಸುವ ಕಾರ್ಯ ಇಂದು ಬೆಂಗಳೂರಿನ ರಾಜಾಜಿನಗರದಲ್ಲಿ ಪ್ರಾರಂಭವಾಗಿದೆ.
ಭಾಷ್ಯಂ ವೃತ್ತದ ಬಳಿಯಿರುವ ಡಾಕ್ಟರ್ ನಾಗರಾಜ ಆಸ್ಪತ್ರೆಯಲ್ಲಿ 20 ಆಮ್ಲಜನಕ ಪೂರೈಕೆಯುಳ್ಳ ಬೆಡ್ ಗಳನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಈ ಕೇಂದ್ರದ ಕಾರ್ಯಾರಂಭವಾಗಲಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಕೋವಿಡ್ ಸೋಂಕಿತರ ಸೇವೆಯಲ್ಲಿ ತೊಡಗಿಸಿಕೊಂಡಿರುವ ‘ಕೋವಿಡ್ ವಾರಿಯರ್’ಗಳ ವಿಶ್ವಾಸ ವೃದ್ಧಿಸುವ ಆಶಯದಿಂದ ಬೆಂಗಳೂರಿನ ರಾಜಾಜಿನಗರದಲ್ಲಿ ಮೊದಲ ಬಾರಿಗೆ ಅವರ ಸೇವೆಗಾಗಿ ‘ಚೈತನ್ಯ ಕೇಂದ್ರ’ ವನ್ನು ಆರಂಭಿಸಲಾಗಿದೆ ಎಂದು ಅವರು ಹೇಳಿದರು.
ಇಂದು ಚೈತನ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಕೇಂದ್ರದಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ, ಆಶಾ ಕಾರ್ಯಕರ್ತೆಯರಿಗೆ, ದಾದಿಯರಿಗೆ, ವೈದ್ಯರಿಗೆ ಹಾಗೂ ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರುಗಳಿಗೆ ಸ್ವನಿಯಂತ್ರಿತ ಹವಾ (steam) ಸೌಲಭ್ಯ, ಕಷಾಯ ಸೇವನೆ, ಹಾಗೂ ಕುಡಿಯಲು ಬಿಸಿನೀರನ್ನು ನಿರಂತರವಾಗಿ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಅವರ ಸೇವೆಯನ್ನು ಗೌರವಿಸುವ ಒಂದು ಪ್ರಯತ್ನ ಇದಾಗಿದ್ದು, ಇದರಿಂದ ಸಮಾಜದಲ್ಲಿ ವಿಶ್ವಾಸ ವೃದ್ಧಿಸುವ ಕಾರ್ಯವಾದರೆ ತಮ್ಮ ಶ್ರಮ ಸಾರ್ಥಕ ಎಂದಿದ್ದಾರೆ.
ಉಚಿತ ಆಂಬ್ಯುಲೆನ್ಸ್: ಇದೇ ಸಂದರ್ಭದಲ್ಲಿ ರಾಜಾಜಿನಗರ ಬಿಜೆಪಿ ಘಟಕದ ವತಿಯಿಂದ ಇಂದು ಉಚಿತ ಆಂಬುಲೆನ್ಸ್ ಸೇವೆ ಪ್ರಾರಂಭ ಮಾಡಲಾಯಿತು. ಆಮ್ಲಜನಕ ವ್ಯವಸ್ಥೆಯೂ ಇರುವ ಈ ಆಂಬುಲೆನ್ಸ್ ಅಗತ್ಯವಿರುವವರಿಗೆ ಶೀಘ್ರ ಆಸ್ಪತ್ರೆಗೆ ಸೇರಿಸಲು ಸಹಾಯವಾಗುತ್ತದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.