ವಿಳಂಬ ಮಾಡಿ ನೆರೆ ಪರಿಹಾರ ಕಾಮಗಾರಿ ನೀಡಿದ್ದಲ್ಲದೆ, ಬೇರೆ ತಾಲ್ಲೂಕಿನ ಗುತ್ತಿಗೆದಾರರಿಗೆ ನೀಡಿದ್ದೇಕೆ?
ಕಳೆದ ವರ್ಷ ನೆರೆ ಹಾವಳಿ ಉಂಟಾಗಿದ್ದ ವೇಳೆ ನೆರೆ ಪರಿಹಾರ ಕಾಮಗಾರಿಗೆ ಮಂಜೂರಾಗಿದ್ದ ಅನುದಾನ ಬಳಕೆಗೆ ಸಾಕಷ್ಟು ಕಾಲ ವ್ಯರ್ಥ ಮಾಡಿದ್ದಲ್ಲದೆ, ಇತ್ತೀಚೆಗೆ ಯಾರಿಗೂ ಗೊತ್ತಿಲ್ಲದಂತೆ ಬೇರೆ ತಾಲೂಕಿನ ಗುತ್ತಿಗೆದಾರರಿಗೆ ತರಾತುರಿಯಲ್ಲಿ ತುಂಡು ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡಿರುವ ಬಗ್ಗೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಜನರಿಗೆ ತಿಳಿಸಬೇಕಿದೆ.
ಕಾರವಾರ ತಾಲೂಕಿನಲ್ಲಿ ಹೋಟೆಗಾಳಿ ಕೆರೆ ಪುನರುಜ್ಜೀವನ ಕೆಲಸಕ್ಕೆ 40 ಲಕ್ಷ ರೂಪಾಯಿ, ಗೋಟೆಗಾಳಿ ಏತ ನೀರಾವರಿ ಪುನರುಜ್ಜೀವನಕ್ಕೆ 20 ಲಕ್ಷ ರೂಪಾಯಿ, ಅಂಕೋಲಾ ತಾಲೂಕಿನ ಶಿರಗುಂಜಿ ಏತ ನೀರಾವರಿ ಪುನರುಜ್ಜೀವನ ಕಾಮಗಾರಿಗೆ 40 ಲಕ್ಷ ರೂ. ಮತ್ತು ಪೂಜಗೇರಿ ಹಳ್ಳದ ಚೈ.200 ಮೀ.ನಿಂದ 500 ಮೀ. ಬಂದಾರದ ಎಡಭಾಗದಲ್ಲಿ ರಕ್ಷಣಾ ಕಾಮಗಾರಿಗೆ 20 ಲಕ್ಷ ರೂ. ಹೀಗೆ ಒಟ್ಟೂ 120 ಲಕ್ಷ ರೂ. ಮೊತ್ತದ ಕೆಲಸ ಹಂಚಿಕೆ ಮಾಡಲು ಹತ್ತಾರು ತಿಂಗಳಾದರೂ ಇಲಾಖೆಯವರು ಮುಂದಾಗಲಿಲ್ಲ.
ಆದರೆ ಈಗ ಏಕಾಏಕಿ ಕೆಲಸವನ್ನು ಯಾರ ಅರಿವಿಗೂ ಬಾರದಂತೆ ಕುಮಟಾ ತಾಲೂಕಿನ ಇಬ್ಬರು ಗುತ್ತಿಗೆದಾರರಿಗೆ ನೀಡಿರುವುದರ ಹಿಂದೆ ಅನುಮಾನ ಮೂಡುತ್ತಿದೆ. ಕಾರವಾರ, ಅಂಕೋಲಾ ತಾಲೂಕಿನ ಗುತ್ತಿಗೆದಾರರಿಗೆ ಕೆಲಸ ನೀಡಿದ್ದರೆ ಅವರು ಗುಣಮಟ್ಟದ ಕೆಲಸ ಮಾಡುವುದರ ಜೊತೆಗೆ ತಮ್ಮ ಊರಿನ ಕೆಲಸವೆಂದು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಕೆಲಸ ಮಾಡಬಹುದಿತ್ತು.
ಟೆಂಡರ್ ಕರೆದು ಕಾಮಗಾರಿ ಮಾಡಲು ವಿಳಂಬವಾಗುತ್ತದೆ ಎನ್ನುವ ದ್ರಷ್ಟಿಕೋನದಲ್ಲಿ
ಟೆಂಡರ್ ಕರೆಯದೆ ನೇರವಾಗಿ ನೆರೆ ಪರಿಹಾರ ಕಾಮಗಾರಿ ನೀಡಲು ಸರಕಾರ ಅವಕಾಶ ನೀಡಿದ್ದರಿಂದ ಇದು ಯಾರದೋ ಹಿತಾಸಕ್ತಿ ಕಾಯಲು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೈಗೊಂಡ ನಿರ್ಧಾರ ಎಂದು ಭಾವಿಸುವಂತಾಗಿದೆ.
ಕಾರವಾರ, ಅಂಕೋಲಾ ಈ ಎರಡೂ ತಾಲೂಕುಗಳಲ್ಲಿ ಸುಮಾರು 400 ಗುತ್ತಿಗೆದಾರರಿದ್ದಾರೆ, ಆದರೆ ಈ ಭಾಗದ ಒಬ್ಬ ಗುತ್ತಿಗೆದಾರನಿಗೂ ಸದ್ರಿ ಕೆಲಸ ಮಾಡುವ ಯೋಗ್ಯತೆ ಇಲ್ಲವೆಂದು ತಿಳಿದುಕೊಂಡಿದ್ದರೋ ? ಅಥವಾ ಈ ಭಾಗದ ಗುತ್ತಿಗೆದಾರರಿಗೆ ಕೆಲಸ ನೀಡಿದರೆ ಗುಟ್ಟಿನ ವಿಷಯ ಬಯಲಾಗುತ್ತದೆ ಎಂಬ ಭಯಕ್ಕೋ, ಯಾವುದೋ ರಾಜಕೀಯ ಒತ್ತಡಕ್ಕೆ ಒಳಗಾಗಿ ಅಧಿಕಾರಿಗಳು ಅಡಕತ್ತರಿಯಲ್ಲಿ ಸಿಕ್ಕಿ ಹೀಗೆ ಮಾಡಿದ್ದರೋ ಎಂಬುದು ಈ ಕ್ಷೇತ್ರದ ಶಾಸಕಿ ಶ್ರೀಮತಿ ರೂಪಾಲಿ ನಾಯ್ಕ ರವರಿಗೆ ತಿಳಿಸಿ ಅಧಿಕಾರಿಗಳ ಕಾರ್ಯ ವೈಖರಿ ಮನವರಿಕೆ ಮಾಡಬೇಕೆಂದರೆ ಶಾಸಕಿ ಕೂಡ ಸಂಪರ್ಕಕ್ಕೆ ಸಿಗುತ್ತಿಲ್ಲ.
ಇಂತಹ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸುವ ಅನಿವಾರ್ಯತೆಯೂ ಎದುರಾಗಲಿದೆ.
ಮಾಧವ ನಾಯಕ, ಅಧ್ಯಕ್ಷ
ಕಾರವಾರ ತಾಲೂಕ ಸಿವಿಲ್ ಗುತ್ತಿಗೆದಾರ ಸಂಘ